"ಸಮಾಜವಿರೋಧಿ ಶಕ್ತಿಗಳ ವಿರುದ್ದ ಹೋರಾಡುತ್ತಿರುವ ತಮಿಳು ಬಂಧುಗಳು ನಮಗೆಲ್ಲ ಸ್ಪೂರ್ತಿ"

 ಸಮಾಜವಿರೋಧಿ ಶಕ್ತಿಗಳ ವಿರುದ್ದ ಹೋರಾಡುತ್ತಿರುವ ತಮಿಳು ಬಂಧುಗಳು ನಮಗೆಲ್ಲ ಸ್ಪೂರ್ತಿ ಮತ್ತು ಭರವಸೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Written by - Zee Kannada News Desk | Last Updated : Jul 31, 2022, 04:09 PM IST
"ಸಮಾಜವಿರೋಧಿ ಶಕ್ತಿಗಳ ವಿರುದ್ದ ಹೋರಾಡುತ್ತಿರುವ ತಮಿಳು ಬಂಧುಗಳು ನಮಗೆಲ್ಲ ಸ್ಪೂರ್ತಿ"  title=
Photo Courtsey: Facebook

ಚೆನ್ನೈ: ಸಮಾಜವಿರೋಧಿ ಶಕ್ತಿಗಳ ವಿರುದ್ದ ಹೋರಾಡುತ್ತಿರುವ ತಮಿಳು ಬಂಧುಗಳು ನಮಗೆಲ್ಲ ಸ್ಪೂರ್ತಿ ಮತ್ತು ಭರವಸೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು.

ತಮಿಳುನಾಡಿನ ನಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸುಡರ್ ಪ್ರಶಸ್ತಿಯನ್ನು ಬಹಳ ಅಭಿಮಾನ ಮತ್ತು ಗೌರವದಿಂದ ಸ್ವೀಕರಿಸಿದ್ದೇನೆ. ನನ್ನ ಮೇಲೆ ಪ್ರೀತಿ-ಅಭಿಮಾನವಿಟ್ಟು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವ ಎಲ್ಲ ಹಿರಿಯರಿಗೆ ನಾನು ಕೃತಜ್ಞನಾಗಿದ್ದೇನೆ.

ಚೆನ್ನೈಗೆ ಕಾಲಿಟ್ಟ ಗಳಿಗೆಯಿಂದ ಈ ಕ್ಷಣದ ವರೆಗೆ ತಮಿಳುನಾಡಿನ ಜನತೆ ನನ್ನ ಮೇಲೆ ತೋರಿದ ಪ್ರೀತಿ ಮತ್ತು ಅಭಿಮಾನ ಕಂಡು ಮನಸ್ಸು ತುಂಬಿಬಂದಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಭೇಟಿ ನನ್ನ ಚೆನ್ನೈ ಭೇಟಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮಾಡಿತ್ತು. ದಿವಂಗತ ಎಂ.ಕೆ.ಕರುಣಾನಿಧಿ ಅವರನ್ನು ಹಿಂದೆ ಕೆಲವು ಬಾರಿ ಭೇಟಿ ಮಾಡಿದ್ದರೂ, ಸ್ಟಾಲಿನ್ ಮತ್ತು ನನ್ನ ಭೇಟಿ ಇದೇ ಮೊದಲ ಬಾರಿ.

ಇದನ್ನೂ ಓದಿ : Commonwealth Games 2022: ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಖಾತೆ ತೆರೆದ ಮೀರಾಬಾಯಿ ಚಾನು

ದ್ರಾವಿಡ ಚಳುವಳಿಯ ಅರ್ಹ ವಾರಸುದಾರನಂತೆ ಕಾಣಿಸುತ್ತಿರುವ ಎಂ.ಕೆ.ಸ್ಟಾಲಿನ್ ಅವರ ಸೈದ್ಧಾಂತಿಕ ಬದ್ಧತೆ, ಜನಪರ ಯೋಜನೆಗಳು ಮತ್ತು ಆಡಳಿತ ಕೌಶಲ ಅವರನ್ನು ತಮಿಳುನಾಡಿನ ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವೇ ಇಲ್ಲ. 

ನಿಡುದಲೈ ಚಿರುದೈಗಳ್ ಪಕ್ಷ ಅಂಬೇಡ್ಕರ್ ಸುಡರ್ ಪ್ರಶಸ್ತಿಯನ್ನು ನನಗೆ ನೀಡಿದ್ದರೂ, ಇದು ವೈಯಕ್ತಿಕವಾಗಿ ನನಗೆ ಸಂದಿದ್ದಲ್ಲ. ಇದು  ನಾನೊಬ್ಬ ಶಾಸಕ, ಸಚಿವ, ಮುಖ್ಯಮಂತ್ರಿಯಾಗಿ ಕರ್ನಾಟಕದ ಜನರಿಗೆ ಮಾಡಿದ ಸೇವೆಗಾಗಿ ನೀಡಿರುವ ಪ್ರಶಸ್ತಿ ಎಂದು ನಾನು ತಿಳಿದುಕೊಂಡಿದ್ದೇನೆ. ಇದರಿಂದಾಗಿ ಈ ಪ್ರಶಸ್ತಿಯನ್ನು ಕರ್ನಾಟಕದ ಸಮಸ್ತ ಜನತೆಗೆ ಅರ್ಪಿಸುತ್ತೇನೆ.

ನಾನು ಸಾಮಾನ್ಯವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಲು ಹೋಗುವುದಿಲ್ಲ, ಹೀಗಿದ್ದರೂ ಹಿತೈಷಿಗಳು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕೆಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಈ ರೀತಿ ಪಡೆದುಕೊಂಡ ಎಲ್ಲ ಪ್ರಶಸ್ತಿಗಳಗಿಂತ ಇಂದು ನೀವು ನೀಡಿದ ಪ್ರಶಸ್ತಿ ನನಗೆ ಹೆಚ್ಚು ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ಹೇಳಬಯಸುತ್ತೇನೆ.

ಇದಕ್ಕೆ ಮುಖ್ಯ ಕಾರಣ ನನ್ನ ರಾಜಕೀಯ ಜೀವನದ ಮಾರ್ಗದರ್ಶಕರು ಮತ್ತು ರೋಲ್ ಮಾಡೆಲ್ ಎಂದು ತಿಳಿದುಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನ ಪ್ರಶಸ್ತಿ ಇದು.ನನ್ನ ಸಾರ್ವಜನಿಕ ಬದುಕಿನ ವ್ಯಕ್ತಿತ್ವವನ್ನು ರೂಪಿಸಿರುವ ರಾಜಕೀಯ ಚಿಂತನೆಗಳು ಮತ್ತು ಆಲೋಚನೆಗಳು ಸಮಾಜವಾದಿ, ಮತ್ತು ಅಂಬೇಡ್ಕರ್ ವಾದಿ ದಲಿತ ಹೋರಾಟಗಳಿಂದ ಪ್ರೇರಣೆ ಪಡೆದು, ರೂಪುಗೊಂಡಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ನಾನು ವಿನಮ್ರತೆಯಿಂದ ಅರಿಕೆ ಮಾಡಿಕೊಳ್ಳುತ್ತೇನೆ.

ಇದನ್ನೂ ಓದಿ : ಶೂಟಿಂಗ್ ನಲ್ಲಿ 4 ಚಿನ್ನ, 2 ಕಂಚಿನ ಪದಕ ಗೆದ್ದ ತಮಿಳು ನಟ ಅಜಿತ್

ಒಂದು ಸಾಮಾನ್ಯ ಹಿಂದುಳಿದ ಜಾತಿಯ ರೈತ ಕುಟುಂಬದಿಂದ ಬಂದ ನಾನು ನಾಲ್ಕು ದಶಕಗಳ ರಾಜಕೀಯದಲ್ಲಿದ್ದು ಶಾಸಕ,ಸಚಿವ, ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಡಾ.ಬಾಬಾಸಾಹೇಬ್ ಅಂಬೇಡ್ಕರ್. ಅವರ ಹೋರಾಟ, ಚಿಂತನೆ ಮತ್ತು ಅವರು ದೇಶಕ್ಕೆ ಕೊಟ್ಟ ಸಂವಿಧಾನ ಕಾರಣ. ಅಂಬೇಡ್ಕರ್ ಹುಟ್ಟದೆ ಇದ್ದಿದ್ದರೆ, ಅವರು ನಮ್ಮೆಲ್ಲರ ಪರವಾಗಿ ಹೋರಾಟ ಮಾಡದೆ ಇದ್ದಿದ್ದರೆ, ಸಂವಿಧಾನವನ್ನು ಬರೆಯದೆ ಇದ್ದಿದ್ದರೆ. ನಾನು ಖಂಡಿತ ಶಾಸಕ, ಸಚಿವ ಮುಖ್ಯಮಂತ್ರಿ ಯಾವುದೂ ಆಗುತ್ತಿರಲಿಲ್ಲ. ಬಹುಷ: ರಾಜಕೀಯಕ್ಕೂ ಬರುತ್ತಿರಲಿಲ್ಲ, ನಾನು ನಮ್ಮೂರಲ್ಲಿ ಕುರಿ-ದನ ಮೇಯಿಸಿಕೊಂಡು ಇರುತ್ತಿದ್ದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಋಣದ ಭಾರ ನನ್ನ ತಲೆ ಮೇಲಿದೆ.

ಸಮಾಜದ ತಳಸ್ಥರದಲ್ಲಿರುವ ದಲಿತರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಒಂದುಗೂಡಿದರೆ ಮಾತ್ರ ಅಂಬೇಡ್ಕರ್ ಅವರ ಕನಸುಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ಸಾಕಾರಗೊಳಿಸಲು ಸಾಧ್ಯ ಎನ್ನುವುದನ್ನು ಹದಿವಯಸ್ಸಿನಲ್ಲೇ ಮನಗಂಡವನು ನಾನು.

ನನ್ನ ರಾಜಕೀಯ ಜೀವನದ ಉದ್ದಕ್ಕೂ ಅಂಬೇಡ್ಕರ್ ನಮಗೆ ಕೊಟ್ಟ ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನಾತ್ಮಕ ಚೌಕಟ್ಟನ್ನು, ಬಸವಣ್ಣನವರ ಸಮಾನತೆಯ ಆಶಯವನ್ನು ಹಾಗೂ ಮಹಾತ್ಮ ಗಾಂಧಿಯವರ ಅಂತ್ಯೋದಯದ ದೃಷ್ಟಿಕೋನವನ್ನು ಮಿಲಿತಗೊಳಿಸಿ, ನನ್ನ ಕೆಲಸಗಳ ಮೂಲಕ ಪ್ರತಿಪಾದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಮನುಷ್ಯನನ್ನು ಎರಡು ಸಂಬಂಧಗಳು ಪರಸ್ಪರ ಬೆಸೆಯುತ್ತವೆ, ಒಂದು ರಕ್ತ ಸಂಬಂಧ, ಇನ್ನೊಂದು ವೈಚಾರಿಕ ಸಂಬಂಧ. ತಮಿಳರು ಮತ್ತು ಕನ್ನಡಿಗರ ನಡುವೆ ಈ ಎರಡೂ ಸಂಬಂಧಗಳೂ ಇದೆ ಎಂದು ನಾನು ನಂಬಿದ್ದೇನೆ. ಕುಲಮೂಲವನ್ನು ಶೋಧಿಸುತ್ತಾ ಹೋದರೆ ತಮಿಳರು, ಕನ್ನಡಿಗರು ಮಾತ್ರವಲ್ಲ ತೆಲುಗರು ಮತ್ತು ಮಲೆಯಾಳಿಗಳು ಕೂಡಾ ನಮ್ಮ ಅಣ್ಣ-ತಮ್ಮಂದಿರೇ ಆಗಿದ್ದಾರೆ.

ನಮ್ಮದು ವಿಶಾಲವಾದ ದ್ರಾವಿಡ ಕುಟುಂಬ. ನಾವು ತಮಿಳು, ಕನ್ನಡ, ತೆಲುಗು, ಮಲೆಯಾಳಿ ಮತ್ತು ತುಳು ಎನ್ನುವ ಪಂಚ ದ್ರಾವಿಡ ಭಾಷೆಯ ಸೋದರರು. ನಮ್ಮ ಸಂಸ್ಕೃತಿ, ನಂಬಿಕೆ. ಆಚಾರ, ವಿಚಾರ, ಹಬ್ಬ ಹರಿದಿನ ಎಲ್ಲದರಲ್ಲಿಯೂ ಅನೇಕ ಸಾಮ್ಯತೆಗಳಿವೆ. ಆದರೆ ನಮ್ಮ ವಿರೋಧಿಗಳು ಯಾವುದೋ ಭಾಷೆಯ ವಿಚಾರವನ್ನೋ, ನೀರಿನ ವಿಚಾರವನ್ನೋ ಎಳೆದು ತಂದು ಪರಸ್ಪರ ಕಾದಾಟಕ್ಕಿಳಿಸುತ್ತಾರೆ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು.

ಕರ್ನಾಟಕದಲ್ಲಿ ಬಹಳ ಮುಖ್ಯವಾಗಿ ಬೆಂಗಳೂರು ಮಹಾನಗರ ಮತ್ತು ಗಡಿಭಾಗದಲ್ಲಿ ಅಪಾರ ಸಂಖ್ಯೆಯ ತಮಿಳರಿದ್ದಾರೆ. ಅವರೇನು ಕೋಟ್ಯಾಧಿಪತಿ, ಲಕ್ಷಾಧಿಪತಿಗಳಲ್ಲ. ಅವರಲ್ಲಿ ಹೆಚ್ಚಿನವರು ದುಡಿಯುವ ವರ್ಗಕ್ಕೆ ಸೇರಿರುವ ಹಿಂದುಳಿದ-ದಲಿತ ಸಮುದಾಯಗಳ ಶ್ರಮಜೀವಿಗಳು. ಕನ್ನಡ-ತಮಿಳು ಭಾಷೆಗಳನ್ನು ಆಡುವ ಅವರು ನಮ್ಮವರೇ ಆಗಿದ್ದಾರೆ. ಇಂದಿನ ಕರ್ನಾಟಕದ ನಿರ್ಮಾಣದಲ್ಲಿ ತಮಿಳರ ದುಡಿಯುವ ಕೈಗಳ ಪಾಲೂ ಇದೆ ಎನ್ನುವುದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತೇನೆ. ಅವರು ಅಲ್ಲಿ ಸುರಕ್ಷಿತವಾಗಿದ್ದಾರೆ, ಅವರ ಸುರಕ್ಷೆಯ ಜವಾಬ್ದಾರಿಯನ್ನು ನಾವು ಹೊತ್ತಿದ್ದೇವೆ. ಇದೇ ರೀತಿ ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಇಲ್ಲಿ ಬಂದು ನೆಲೆಸಿದ್ದಾರೆ. ಅವರನ್ನು ಕೂಡಾ ಪ್ರೀತಿ ಮತ್ತು ಕಾಳಜಿಯಿಂದ ನೀವು ನೋಡಿಕೊಳ್ಳುತ್ತಿದ್ದೀರಿ ಎನ್ನುವುದು ನನಗೆ ಗೊತ್ತು. ಇದಕ್ಕಾಗಿ ಸಮಸ್ತ ಕನ್ನಡ ನಾಡು ನಿಮಗೆ ಋಣಿಯಾಗಿದೆ.

ತಮಿಳರು ಕನ್ನಡ ವಿರೋಧಿಗಳು, ಕರ್ನಾಟಕ ವಿರೋಧಿಗಳು, ಪ್ರಾಂತೀಯ ಮನಸ್ಸಿನವರು ಎಂದೆಲ್ಲ ಪ್ರಚಾರ ಮಾಡುತ್ತಾರೆ.. ಆದರೆ ವಾಸ್ತವ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ನಮ್ಮ ಮಂಡ್ಯದ ಹೆಣ್ಣುಮಗಳು ಜೆ.ಜಯಲಲಿತಾ ಅವರನ್ನು ಸೂಪರ್ ಸ್ಟಾರ್ ಆಗಿ ಬೆಳೆಸಿದವರು ತಮಿಳರು, ನಂತರ ಅವರನ್ನು ಮುಖ್ಯಮಂತ್ರಿಯಾಗಿ ಮೆರೆಸಿದರು. ಒಂದು ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಆಗಿನ ಮದ್ರಾಸ್ ನಲ್ಲಿಯೇ ಬೀಡುಬಿಟ್ಟಿತ್ತು. ನಮ್ಮ ವರನಟ ಡಾ.ರಾಜಕುಮಾರ್ ತಮ್ಮ ಅರ್ಧ ಆಯುಷ್ಯವನ್ನು ಮದ್ರಾಸ್ ನಲ್ಲಿಯೇ ಕಳೆದಿದ್ದಾರೆ. ರಾಜ್ ಕುಮಾರ್ ಅವರು ತಮಿಳು ಮತ್ತು ಕನ್ನಡಿಗರ ಪ್ರೀತಿ ಅಭಿಮಾನಗಳನ್ನು ಉಂಡು ಬೆಳೆದವರು.

ಇದನ್ನೂ ಓದಿ: Ananya Panday ಮೇಲೆ ಕಣ್ಣು ಹಾಕಿದ್ದಳಂತೆ ಈ ನಟಿ... ಮುತ್ತಿಕ್ಕಲು ಕೂಡ ಮುಂದಾಗಿದ್ದಳಂತೆ!

ನಮ್ಮವರೇ ಆಗಿರುವ ರಜನಿಕಾಂತ್ ಅವರನ್ನು ತಮ್ಮ ರಾಜ್ಯದಲ್ಲಿಯೇ ತಮಿಳರು ಸೂಪರ್ ಸ್ಟಾರ್ ಆಗಿ ಬೆಳೆಸಿದರು, ಈ ಬಂಧುತ್ವ ನಿನ್ನೆ ಮೊನ್ನೆ ಹುಟ್ಟಿಕೊಂಡದ್ದಲ್ಲ, ನಾವು ಈ ನೆಲದ ಮೂಲನಿವಾಸಿಗಳಾದ ದ್ರಾವಿಡರು, ನಾವು ಯುರೋಪ್ ನಿಂದಲೋ, ಮಧ್ಯ ಏಷ್ಯಾದಿಂದಲೋ ಬಂದಿರುವ ವಲಸೆಕೋರರೂ ಅಲ್ಲ, ದಾಳಿಕೋರರೂ ಅಲ್ಲ. ನಾವು ಈ ನೆಲದಲ್ಲಿ ಹುಟ್ಟಿ ಹೋರಾಟದ ಮೂಲಕವೇ ಬದುಕನ್ನು ಕಟ್ಟಿಕೊಂಡವರು. ಹೊರದೇಶಗಳಿಂದ ಇಲ್ಲಿಗೆ ಬಂದು ನಮ್ಮ ಕುಲವನ್ನೇ ನಾಶ ಮಾಡಲು ಹೊರಟವರನ್ನು ಎದುರಿಸಿ ಗೆದ್ದವರು. ಈ ಆರ್ಯ-ದ್ರಾವಿಡ ಸಂಘರ್ಷದ ಇತಿಹಾಸವನ್ನು ನಾನು ಮುಂದುವರಿಸಲು ಬಯಸುವುದಿಲ್ಲ.

ಆದರೆ ಈ ಹೋರಾಟ ನಿಂತಿಲ್ಲ, ಇಂದಿಗೂ ಮುಂದುವರಿದಿದೆ ಮತ್ತು ಮುಂದುವರಿಯಬೇಕಾಗಿದೆ. ಶತಮಾನಗಳ ಹಿಂದೆ ನಾವು ಹಿಮ್ಮೆಟ್ಟಿಸಿದ್ದ ಆರ್ಯರು ಬೇರೊಂದು ರೂಪದಲ್ಲಿ ಮತ್ತೆ ದಾಳಿಗಿಳಿದಿದ್ದಾರೆ, ಅವರ ರೂಪ,ಬಣ್ಣ,ಭಾಷೆ, ಆಯುಧಗಳು ಬದಲಾಗಿರಬಹುದು, ಆದರೆ ಆಂತರ್ಯದ ದುಷ್ಟತನ ಬದಲಾಗಿಲ್ಲ. ಮೂಲನಿವಾಸಿಗಳಾದ ನಮ್ಮ ವಿರುದ್ದದ ದ್ವೇಷಾಸೂಯೆಗಳು ಬದಲಾಗಿಲ್ಲ. ಅವರಿಗೆ ತಮಿಳುನಾಡು,ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಕರ್ನಾಟಕ ರಾಜ್ಯದೊಳಗೆ ಅವರು ಪ್ರವೇಶ ಮಾಡಿದ್ದಾರೆ. ಅವರನ್ನು ಅಲ್ಲಿಂದ ಹೊರದಬ್ಬಲು ನಮಗೆ ನಿಮ್ಮ ನೆರವು ಕೂಡಾ ಬೇಕಾಗುತ್ತದೆ.

ರಾಜಕೀಯ ಸಂಘರ್ಷ ಒಮ್ಮೊಮ್ಮೆ ನಮ್ಮನ್ನು ಪರಸ್ಪರ ಎದುರುಬದುರಾಗಿ ನಿಲ್ಲಿಸುತ್ತದೆ. ಆದರೆ ನಮ್ಮ ಭಾಷೆ ಮತ್ತು ಸಂಸ್ಕೃತಿ ನಮ್ಮನ್ನು ಇನ್ನಷ್ಟು ಹತ್ತಿರವಾಗುವ ಹಾಗೆ ಬೆಸೆಯುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕನ್ನಡ ಅಭಿವೃದ್ದಿ ಪ್ರಾಧಿಕಾರದವರು ‘ದ್ರಾವಿಡ ಕಲಾ ಮೇಳ’ವನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿದ್ದರು. ಅದು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಐದೂ ರಾಜ್ಯಗಳ ಸಾಹಿತಿಗಳು, ಕಲಾವಿದರು ಮತ್ತು ಸಂಸ್ಕೃತಿ ಚಿಂತಕರನ್ನು ಸೇರಿಸಿ ಇಂತಹದ್ದೊಂದು ದ್ರಾವಿಡ ಕಲಾ ಮೇಳವನ್ನು ಮಾಡಬೇಕೆಂಬ ಯೋಜನೆ ಇದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಇದೆಯೆಂದು ನಂಬಿದ್ದೇನೆ. ನಾವು ಆಡುವ ಭಾಷೆ ದ್ರಾವಿಡ ಭಾಷಾ ಸಮೂಹಕ್ಕೆ ಸೇರಿರುವುದನ್ನು ಇತಿಹಾಸಕಾರರು ಈಗಾಗಲೇ ಸಾಬೀತುಪಡಿಸಿದ್ದಾರೆ, ಇದು ನಮ್ಮ ನಡುವಿನ ಸಂಬಂಧ-ಅನುಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿ ಬೆಸೆದಿದೆ.

ಅಂಬೇಡ್ಕರ್ ಪ್ರಶಸ್ತಿಯನ್ನು ನನ್ನ ಪಾಲಿನ ಇನ್ನೊಬ್ಬ ವೈಚಾರಿಕ ಗುರು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಹುಟ್ಟಿದ ಮತ್ತು ತನ್ನ ಕ್ರಾಂತಿಕಾರಿ ಚಿಂತನೆಗಳ ಮೂಲಕ ಕಟ್ಟಿದ ದ್ರಾವಿಡನಾಡಿನ ನೆಲದಲ್ಲಿ ನನ್ನ ಸೋದರರಾದ ದ್ರಾವಿಡ ಬಂಧುಗಳು ನೀಡಿರುವುದು ನನಗೆ ವಿಶೇಷವಾದ ಗೌರವ ಎಂದು ತಿಳಿದುಕೊಂಡಿದ್ದೇನೆ.

ನನ್ನ ಯೌವ್ವನದ ದಿನಗಳಲ್ಲಿ ಪೆರಿಯಾರ್ ಅವರ ಬಗ್ಗೆ ಕೇಳಿದ್ದೆ, ಅವರ ಚಿಂತನೆಗಳನ್ನು ಒಂದಷ್ಟು ಓದಿ ತಿಳಿದುಕೊಂಡು ಪ್ರಭಾವಿತನಾಗಿದ್ದೇನೆ, ಆದರೆ ವೈಯಕ್ತಿಕವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇಂದಿನ ಚುನಾವಣಾ ರಾಜಕೀಯದಲ್ಲಿ ಪೆರಿಯಾರ್ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಸವಾಲಿನ ಕೆಲಸ ಎನ್ನುವುದು ನಮಗೆಲ್ಲ ಗೊತ್ತಿದೆ.

ಪೆರಿಯಾರ್ ಅವರು ಇಂದು ಭೌತಿಕವಾಗಿ ನಮ್ಮೊಡನೆ ಇಲ್ಲ, ಆದರೆ ತಮಿಳು ನಾಡಿನ ಜನ ಅವರನ್ನು ಅವರ ಚಿಂತನೆಗಳ ಮೂಲಕ ಜೀವಂತವಾಗಿಟ್ಟಿದ್ದಾರೆ. ಈ ಕಾರಣದಿಂದಾಗಿ   ದೇಶಾದ್ಯಂತ ಆಕ್ರಮಿಸಿಕೊಂಡು ಕೇಕೆ ಹಾಕುತ್ತಿರುವ ಕೋಮುವಾದಿ ಶಕ್ತಿಗಳು ಏನೇ ತಂತ್ರ-ಕುತಂತ್ರಗಳನ್ನು ಮಾಡಿದರೂ  ಈ ದ್ರಾವಿಡ ಕೋಟೆಯ ಹೆಬ್ಬಾಗಿಲು ಮುರಿದು ಒಳಗೆ ಪ್ರವೇಶಿಸಲು ಇನ್ನೂ ಸಾಧ್ಯವಾಗಿಲ್ಲ.ಇದಕ್ಕಾಗಿ ತಮಿಳುನಾಡಿನ ಸಮಸ್ತ ದ್ರಾವಿಡ ಸೋದರರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಪೆರಿಯಾರ್ ಅವರು ಅಂದು ಬಿತ್ತಿದ್ದ ಚಿಂತನೆಯ ಬೀಜಗಳು ಇಂದು ಲಕ್ಷಾಂತರ ಸಸಿಗಳಾಗಿ ಬೆಳೆದು ನಿಂತು ಫಲ ಕೊಡುತ್ತಿದೆ. ಅವರ ಚಿಂತನೆಯ ಮೂಸೆಯಲ್ಲಿಯೇ ಲಕ್ಷಾಂತರ ಪೆರಿಯಾರ್ ಗಳು ಮರುಹುಟ್ಟು ಪಡೆದಿದ್ದಾರೆ. ಸಮಾಜವಿರೋಧಿ ಶಕ್ತಿಗಳ ವಿರುದ್ದ ಹೋರಾಡುತ್ತಿರುವ ತಮಿಳು ಬಂಧುಗಳು ನಮಗೆಲ್ಲ ಸ್ಪೂರ್ತಿ ಮತ್ತು ಭರವಸೆ. ಕರ್ನಾಟಕದ ಸಮಸ್ತ ಜಾತ್ಯತೀತ ಬಂಧುಗಳ ಪರವಾಗಿಯೂ ತಮಿಳು ಸೋದರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ' ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News