12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ: ಸಿಎಂ ಬೊಮ್ಮಾಯಿ

Women Self Defense Training: 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

Edited by - Zee Kannada News Desk | Last Updated : Feb 6, 2022, 04:46 PM IST
  • ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಅಗತ್ಯ ಒತ್ತಿ ಹೇಳಿದ ಸಿಎಂ
  • 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ
  • ಗೃಹ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ: ಸಿಎಂ ಬೊಮ್ಮಾಯಿ title=
ಬಸವರಾಜ ಬೊಮ್ಮಾಯಿ

ಬೆಂಗಳೂರು: 12 ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. 

ಇಂದು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಓಬವ್ವ (Obavva) ಆತ್ಮ ರಕ್ಷಣಾ ಕಲೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯಸ್ಥಾನವಿದೆ. ಆದರೆ ಕಿಡಿಗೇಡಿಗಳು, ದುಷ್ಟಶಕ್ತಿಗಳು ತಾಯಂದಿರನ್ನು ಮಕ್ಕಳನ್ನು ನೋಡುವ ರೀತಿ ಅಮಾನುಷವಾಗಿದೆ. ಈ ಮನಸ್ಥಿತಿಗೆ ಹಲವಾರು ಹೆಣ್ಣುಮಕ್ಕಳು ಬಲಿಯಾಗಿರುವುದನ್ನು  ತಡೆಗಟ್ಟಲು ಕಾನೂನುಗಳಿವೆ ಎಂದರು.

ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆಗಳನ್ನು ನಿಷೇಧಿಸಿ ಆದೇಶ

ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಅಗತ್ಯವಿದೆ. ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಕಲೆ ಮಹಿಳೆಯರಿಗೆ (Women Saftey) ಇದ್ದರೆ ದುಷ್ಟ ಶಕ್ತಿಗಳಿಗೆ ಸರಿಯಾದ ಪಾಠವನ್ನು ಕಲಿಸಬಹುದೆಂಬ ವಿಶ್ವಾಸವಿದೆ. ಅದಕ್ಕಾಗಿ ಕಾನೂನು, ಶಿಕ್ಷಣ , ಗೃಹ ಇಲಾಖೆಗಳು,ಸಮಾಜ, ಸರ್ಕಾರ ಮಹಿಳೆಯರ ರಕ್ಷಣೆಗೆ ಒಗ್ಗಟ್ಟಾಗಿ ನಿಂತು ಅವರ ಆತ್ಮರಕ್ಷಣೆ ಮಾತ್ರವಲ್ಲದೆ ಅವರ ಗೌರವದ ರಕ್ಷಣೆಯನ್ನೂ ಮಾಡಬೇಕಿದೆ. ಈ ನಿಟ್ಟಿನಲ್ಲಿ  ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ  ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಿ, ಕರ್ನಾಟಕ ವಸತಿ ಶಾಲೆಗಳ ಮೂಲಕ  ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ವರ್ಷವಿಡೀ ಈ ಕಾರ್ಯಕ್ರಮ ನಡೆಸಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಕ್ರೂಡೀಕರಿಸಿ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುವುದು. ಹೆಣ್ಣುಮಕ್ಕಳು ಸ್ವಾಲವಂಬಿಗಳಾದರೆ (Independent Woman) ದೇಶದ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಾಂಸ್ಕೃತಿಕ, ಸಾಮಾಜಿಕ ಲೋಕ ಶ್ರೀಮಂತವಾಗಲಿದೆ. ಆತ್ಮರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಎಲ್ಲ ಪ್ರಾಣಿಗಳ, ಮಾನವರ ಗುಣಧರ್ಮ. ಆತ್ಮರಕ್ಷಣೆಗೆ ಬೇಕಾಗಿರುವುದು ಆತ್ಮವಿಶ್ವಾಸ. ಯಾವ ವ್ಯಕ್ತಿಗೆ ಆತ್ಮವಿಶ್ವಾಸ ಇರುತ್ತದೆಯೋ, ಅವನು ತನ್ನ ಆತ್ಮರಕ್ಷಣೆಯನ್ನು ಅತ್ಯಂತ ಸಮರ್ಥವಾಗಿ ಮಾಡಲು ಸಾಧ್ಯ ಎಂದರು.

ತಾವು ಪಡೆಯುವ ತರಬೇತಿ ಆತ್ಮ ವಿಶ್ವಾಸ ಎಂಬ ಮೂಲ ಗುಣಧರ್ಮವನ್ನಿಟ್ಟುಕೊಂಡು ಆತ್ಮರಕ್ಷಣೆಗೆ ಒಂದು ರೀತಿಯಲ್ಲಿ ಟಾನಿಕ್ ಇದ್ದಂತೆ. ಸಮಾಜಕಲ್ಯಾಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ನಿಮಗೆ ಈ ಟಾನಿಕ್ ನೀಡುತ್ತಿದ್ದಾರೆ. ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಹೆಸರಿನಲ್ಲಿಯೇ ಶಕ್ತಿ ತುಂಬಲು ಒನಕೆ ಓಬವ್ವನ ಹೆಸರಿಡಲಾಗಿದೆ ಎಂದು ಹೇಳಿದರು.
 
ಓಬವ್ವಳ ರೋಮಾಂಚಕ, ಐತಿಹಾಸಿಕ ಕಥೆಯನ್ನು ನಾವೆಲ್ಲರೂ ಓದಿದ್ದೇವೆ. ಓಬವ್ವ ಅಂದರೆ ಶಕ್ತಿಯ ಪ್ರತೀಕ. ಕನ್ನಡ ನಾಡು ಇಂತಹ ಶಕ್ತಿಯನ್ನು ಒಳಗೊಂಡಿರುವ ನಾಡು. ಕಿತ್ತೂರು ಚನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ ಇವರೆಲ್ಲರೂ ಪುರುಷರನ್ನೂ ಮೀರಿಸುವ ಶೌರ್ಯವನ್ನು ಹೊಂದಿದ್ದರು. ನಮ್ಮೆಲ್ಲರಿಗೂ ಬಹಳ ದೊಡ್ಡ ಸ್ಫೂರ್ತಿ ಮತ್ತು ಪ್ರೇರಣೆ ಎಂದರು. 

ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದ ತುರುಕಲು ಸಿದ್ದರಾಮಯ್ಯ ಪ್ರಯತ್ನ: ಬಿಜೆಪಿ ಆರೋಪ

ನಮ್ಮ ರಾಜ್ಯ 75 ನೇ ರಾಜ್ಯೋತ್ಸವನ್ನು (Kannada Rajyotsava) ಆಚರಿಸುವಾಗ ದೇಶದಲ್ಲಿ ರಾಜ್ಯಕ್ಕೆ ಅಗ್ರಮಾನ್ಯ ಸ್ಥಾನವಿರಬೇಕು. ಅದಕ್ಕೆ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿದರೆ ಸಾಲದು. ನಮ್ಮ ನಾಡಿನ ಪ್ರತಿಯೊಬ್ಬ ನಾಗರಿಕನಿಗೂ  ವಿದ್ಯೆ, ಕೈಯಲ್ಲಿ ಕೆಲಸ, ಪ್ರೇರಣೆ ನೀಡುವ ಕೆಲಸ ಮಾಡಲು ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ.  ಐತಿಹಾಸಿಕ ಪುರುಷರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.

ಸುಭಾಷ್ ಚಂದ್ರ ಬೋಸ್ (Subhash Chandra Bose) ಅವರ 125ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ 7500 ಹೊಸ ಕೆಡೆಟ್ ಗಳನ್ನು ಎನ್.ಸಿ.ಸಿ ಗೆ ಸೇರ್ಪಡೆ ಗೊಳಿಸಲು ತಲಾ 12 ಸಾವಿರ ರೂ.ಗಳ ಅನುದಾನ ನೀಡಿದೆ. 75 ಹೊಸ ಘಟಕಗಳನ್ನು ಶಾಲಾಕಾಲೇಜುಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ. 44 ಸಾವಿರ ಎನ್.ಸಿ.ಸಿ ಕೆಡೆಟ್ ಗಳಿಗೆ ತರಬೇತಿಗೆ ಅನುಮತಿ ಕೋರಲಾಗಿದೆ. ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್ ಗಳನ್ನು ಎನ್.ಸಿ.ಸಿ ಗೆ 2023 ನೆ ಸಾಲಿನಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು.  ಮಿಲಿಟರಿಗೆ ಸಮಾನವಾದ ತರಬೇತಿಯ ಜೊತೆಗೆ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು. 

ಆತ್ಮರಕ್ಷಣಾ ಯೋಜನೆಗಳಿಗೆ ದೊಡ್ಡ ಅಡಿಪಾಯವನ್ನು ಇಂದು ಹಾಕಲಾಗಿದೆ. ಉತ್ತಮ ಮುನ್ನಡಿಯನ್ನು ಬರೆಯಲಾಗಿದೆ. ಕೆಳದಿ ಚನಮ್ಮ ಮತ್ತು ಬೆಳವಾಡಿ ಮಲ್ಲಮ್ಮನ ಉತ್ಸವವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಇವರು ಶಕ್ತಿ ಹಾಗೂ ಪ್ರೇರಣಾ ಕೇಂದ್ರಗಳು. ದಿನನಿತ್ಯ ಬಳಸುವ ವಸ್ತುಗಳನ್ನು  ಆತ್ಮರಕ್ಷಣೆಗೆ ಬಳಕೆ ಮಾಡಬಹುದೆಂಬ ಸಂದೇಶವನ್ನು ಓಬವ್ವ ನಮಗೆ ನೀಡಿದ್ದಾಳೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News