Mysuru Dasara : ನಾಡಹಬ್ಬ ದಸರಾಗೆ ಚಾಮರಾಜನಗರ ಜಟ್ಟಿ ತಾಲೀಮು; ಮುಷ್ಠಿ ಕಾಳಗಕ್ಕೆ ರಕ್ತ ಹರಿಸಲು ರೆಡಿ

Vajramushti Kalaga : ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಮುಷ್ಠಿ ಕಾಳಗಕ್ಕೆ ಚಾಮರಾಜನಗರದ ಜಟ್ಟಿ ತಯಾರಿ ಜೋರಾಗಿದ್ದು ನಿತ್ಯ ಬೆವರು ಹರಿಸುತ್ತಿದ್ದಾರೆ. 

Written by - Chetana Devarmani | Last Updated : Sep 13, 2022, 10:31 AM IST
  • ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭ
  • ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಮುಷ್ಠಿ ಕಾಳಗ
  • ಜೋರಾಗಿದೆ ಚಾಮರಾಜನಗರದ ಜಟ್ಟಿ ತಯಾರಿ
Mysuru Dasara : ನಾಡಹಬ್ಬ ದಸರಾಗೆ ಚಾಮರಾಜನಗರ ಜಟ್ಟಿ ತಾಲೀಮು; ಮುಷ್ಠಿ ಕಾಳಗಕ್ಕೆ ರಕ್ತ ಹರಿಸಲು ರೆಡಿ  title=
ವಜ್ರಮುಷ್ಟಿ ಕಾಳಗ

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಮುಷ್ಠಿ ಕಾಳಗಕ್ಕೆ ಚಾಮರಾಜನಗರದ ಜಟ್ಟಿ ತಯಾರಿ ಜೋರಾಗಿದ್ದು ನಿತ್ಯ ಬೆವರು ಹರಿಸುತ್ತಿದ್ದಾರೆ. ನಾಡಹಬ್ಬ ದಸರಾದ ವಿಜಯದಶಮಿ ದಿನದಂದು ಮೈಸೂರಿನ ಅಂಬಾ ವಿಲಾಸ ಅರಮನೆಯ ಕರಿಕಲ್ಲುತೊಟ್ಟಿಯಲ್ಲಿ ನಡೆಯುವ  ಮೈನವಿರೇಳಿಸುವ ವಜ್ರಮುಷ್ಟಿ ಕಾಳಗಕ್ಕೆ ಚಾಮರಾಜನಗರ ಜಟ್ಟಿ , ಉಸ್ತಾದ್ ಕೃಷ್ಣಪ್ಪ ಅವರ ಪುತ್ರ ಅಚ್ಯುತ್ ಜಟ್ಟಿ ಸಜ್ಜುಗೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಚಾಮರಾಜನಗರದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಜಟ್ಟಿ ಮತ್ತು ಹೇಮಂತ್ ಜಟ್ಟಿ, ತಿರುಮಲೇಶ್ ಜಟ್ಟಿ ಅವರುಗಳಿಂದ ಅಚ್ಯುತ್  ತರಬೇತಿ ಪಡೆಯುತ್ತಿದ್ದಾರೆ.  ಈ ಹಿಂದೆ 2008 ರಲ್ಲಿ ಮುಷ್ಠಿ ಕಾಳಗದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : Bangalore Flood : ರಾಜಕಾಲುವೆ ಒತ್ತುವರಿ ಮಾಡಿದ್ದ 30 ಸಂಸ್ಥೆಗಳಿಗೆ ನೋಟಿಸ್

ದಸರಾ ಮಹೋತ್ಸವದಲ್ಲಿ ವಜ್ರಮುಷ್ಟಿ ಕಾಳಗಕ್ಕೆ ಅತ್ಯಂತ ಮಹತ್ವವಿದೆ. ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮೊದಲು ರಾಜ ಮನೆತನದವರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ಸಂಪ್ರದಾಯದ ಉದ್ದೇಶದಿಂದ ನಡೆಯುವ ಈ ಕಾಳಗ ಕೆಲವೇ ಸೆಕೆಂಡುಗಳಲ್ಲಿ ಮುಗಿಯುತ್ತದೆ. ಆದರೂ, ಈ ಕಾಳಗವನ್ನು ವೀಕ್ಷಿಸಲು ಜನರ ದಂಡೇ ನೆರೆಯುತ್ತದೆ. ನಾಲ್ವರು ಜಟ್ಟಿಗಳು: ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ವಜ್ರಮುಷ್ಟಿ ಕಾಳಗ ಮಾಡುತ್ತಾರೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡುವುದು ರೂಢಿಯಿಂದಲೂ ನಡೆದುಕೊಂಡು ಬಂದಿದೆ.

ಬೆಂಗಳೂರು, ಮೈಸೂರು, ಚನ್ನಪಟ್ಟಣ ಮತ್ತು ಚಾಮರಾಜನಗರದ ತಲಾ ಒಬ್ಬೊಬ್ಬ ಜಟ್ಟಿ ಈ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ರೂಢಿ. ಈ ನಾಲ್ಕು ಊರುಗಳಿಂದ ಪ್ರತಿವರ್ಷ ಜಟ್ಟಿಗಳನ್ನು ಕಳುಹಿಸಲೇಬೇಕು. ಇದರಲ್ಲಿ ಭಾಗವಹಿಸುವವರು ಜಟ್ಟಿ ಜನಾಂಗದವರೇ ಆಗಬೇಕು. ತಾವು ಕೂಡ ಅನೇಕ ವರ್ಷಗಳಿಂದ ಓರ್ವರನ್ನು ಭಾಗವಹಿಸುತ್ತಿದ್ದು ತರಬೇತಿ ಕೊಡಲಾಗುತ್ತದೆ, ತರಬೇತಿ ನೋಡಲು ಯುವಪೀಳಿಗೆಯು ಬರಲಿದೆ ಎಂದು ಹಿರಿಯ ಪಟು ಪುಟ್ಟಪ್ಪ ಜಟ್ಟಿ ತಿಳಿಸಿದರು. ಈ ವರ್ಷ ಇಂತಹವರನ್ನು ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸುತ್ತೇವೆ. 

ದಸರಾ ಆರಂಭಕ್ಕೆ ಒಂದು ತಿಂಗಳು ಇರುವಾಗ ಆಯ್ಕೆ ಮಾಡಿದವರಿಗೆ ತರಬೇತಿ ನೀಡಲು ಆರಂಭಿಸುತ್ತೇವೆ. ಕಾಳಗದ ನಡೆಗಳನ್ನು ಕಲಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ತರಬೇತಿ ಇರುತ್ತದೆ, ಶನಿವಾರ-ಭಾನುವಾತ ದಿನಪೂರ್ತೀ ತರಬೇತಿ ನಡೆಯಲಿದ್ದು ಜಟ್ಟಿಗಳಾಗಿರುವುದು ನಮಗೆ ಹೆಮ್ಮೆ ಎಂದು ಹೇಮಂತ್ ಜಟ್ಟಿ  ಸಂತಸಪಟ್ಟರು. ಜಟ್ಟಿಯನ್ನು ಆಯ್ಕೆ ಮಾಡುವಾಗ ವಯಸ್ಸಿನ ಮಿತಿ ನೋಡುವುದಿಲ್ಲ. ಆರೋಗ್ಯದಿಂದ ಇರಬೇಕು.  ದೈಹಿಕವಾಗಿ ಸದೃಢರಾಗಿರಬೇಕು, ರಾಜಮನೆತನದ ಅಂಗರಕ್ಷಕರಾಗಿರುವ ಜಟ್ಟಿ ಸಮುದಾಯದ ಶೌರ್ಯ, ತ್ಯಾಗ, ರಾಜರಿಗೆ ಒಳಿತಾಗಲೆಂಬ ಸಂಕೇತ ಈ ಜಟ್ಟಿ ಕಾಳಗವಾಗಿದೆ ಎಂದು 2017 ರಲ್ಲಿ ದಸರಾದಲ್ಲಿ ಭಾಗಿಯಾಗಿದ್ದ ತಿರುಮಲೇಶ್ ಜಟ್ಟಿ ಹೇಳಿದರು.

ಇದನ್ನೂ ಓದಿ : Video : ಟ್ರಾಫಿಕ್‌ನಲ್ಲಿ ಸಿಲುಕಿದ ಕಾರು, ರೋಗಿಯ ಜೀವ ಉಳಿಸಲು 3 ಕಿಮೀ ಓಡಿದ ಡಾಕ್ಟರ್!

ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ಎಂದರೆ ಅದೊಂದು ಗೌರವ. ನಮ್ಮ ಜನಾಂಗಕ್ಕೆ ಮಾತ್ರ ಇದರಲ್ಲಿ ಭಾಗಿಯಾಗಲು ಅವಕಾಶ. ಇದಕ್ಕಾಗಿ ನಮಗೆ ಗೌರವಧನ ಸಿಗುತ್ತದೆ. ಆದರೆ, ದುಡ್ಡಿಗಾಗಿ ನಾವು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದು ನಮಗೆ ಮುಖ್ಯವೂ ಅಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ರೋಮಾಂಚಕಾರಿಯಾದ ಈ ಸಮರ ಕಲೆಯನ್ನು ಉಳಿಸುವುದಕ್ಕಾಗಿ ಸಂತೋಷದಿಂದಲೇ ಪಾಲ್ಗೊಳ್ಳುತ್ತೇವೆ  ಎಂದು ಈ ಬಾರಿ ಕಾಳಗಕ್ಕೆ ಅಣಿಯಾಗುತ್ತಿರುವ ಅಚ್ಯುತ್ ಜಟ್ಟಿ ಮಾಹಿತಿ ಹಂಚಿಕೊಂಡರು. ಕೊರೊನಾ ಕರಿಛಾಯೆ ಇಲ್ಲದ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುವ ಹಿನ್ನೆಲೆಯಲ್ಲಿ ಜಟ್ಟಿಗಳು ಕೂಡ ಸಂಭ್ರಮದಿಂದಲೇ ತಾಲೀಮು ನಡೆಸುತ್ತಿದ್ದಾರೆ, ಮೈ ನವಿರೇಳಿಸುವ ಕಾರ್ಯಕ್ರಮಕ್ಕೆ ಕೆಲವೇ ದಿನಗಳಲ್ಲಿ ಸಾಕ್ಷೀಕರಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News