ಬೆಂಗಳೂರು: ಉತ್ಪಾದನೆ ಮತ್ತು ಸುಸ್ಥಿರತೆ-ಸಂಬಂಧಿತ ವಲಯಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ, ಬೆಂಬಲಿಸುವ ‘ವೆಂಚುರೈಸ್’ ಸ್ಪರ್ಧೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ. ‘ವೆಂಚುರೈಸ್’ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ‘ಉತ್ಪಾದನೆ ಮತ್ತು ಸಂಬಂಧಿತ ವಲಯಗಳಲ್ಲಿನ ಸ್ಟಾರ್ಟ್ಅಪ್‌ಗಳಿಗೆ ರಾಜ್ಯವನ್ನು ಆದ್ಯತೆಯ ತಾಣವಾಗಿ ರೂಪಿಸುವುದು ನಮ್ಮ ಉದ್ದೇಶ. ಉದ್ಯಮಿಗಳಿಗೆ ಪೂರಕ ವಾತಾವರಣ ಕಲ್ಪಿಸಲು ಅತ್ಯುತ್ತಮ ಮೂಲಸೌಕರ್ಯ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು.
‘ಬೆಂಗಳೂರಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ‘ವೆಂಚುರೈಸ್- ಗ್ಲೋಬಲ್ ಸ್ಟಾರ್ಟ್‌ಅಪ್ ಪಿಚ್ ಚಾಲೆಂಜ್’ ಆಯೋಜಿಸಲಾಗಿದೆ. ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಯನ್ನು ಬೆಂಬಲಿಸಿ, ಅವರಿಗೆ ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಜೊತೆ ಸಂಪರ್ಕ ಕಲ್ಪಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದು ಹೇಳಿದರು.
ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿರಮಣರೆಡ್ಡಿ ಮಾತನಾಡಿ, ‘ವಾಣಿಜ್ಯ ಮತ್ತು ಕೈಗಾರಿಕೆ ವಲಯದಲ್ಲಿನ ಆವಿಷ್ಕಾರಗಳಿಗೆ ಕರ್ನಾಟಕವೇ ಗಮ್ಯ ಸ್ಥಾನವೆಂದು ಪ್ರತಿಪಾದಿಸುವುದು ಮತ್ತು ಉತ್ಪಾದನೆ ಮತ್ತು ಸಂಬಂಧಿತ ವಲಯಗಳಲ್ಲಿನ ಆವಿಷ್ಕಾರಗಳನ್ನು ಗುರುತಿಸುವುದು ಈ ಸ್ಪರ್ಧೆಯ ಉದ್ದೇಶ’ವೆಂದು ಹೇಳಿದರು.
ಇದನ್ನೂ ಓದಿ: BBMP Election 2022 : ಬಿಬಿಎಂಪಿ ಚುನಾವಣೆ ಹಿನ್ನೆಲೆ ಫುಲ್ ಆಕ್ಟೀವ್ ಆದ ಅಧಿಕಾರಿಗಳು!
‘ವೆಂಚುರೈಸ್ ಮೂಲಕ ಜಾಗತಿಕ ಸ್ಟಾರ್ಟ್ಅಪ್ ಸಮುದಾಯವನ್ನು ಕರ್ನಾಟಕಕ್ಕೆ ಕರೆತರುವ ಉದ್ದೇಶ ನಮ್ಮದಾಗಿದೆ. ನವೆಂಬರ್‌ನಲ್ಲಿ ನಿಗದಿಯಾಗಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕೈಗಾರಿಕಾಭಿವೃದ್ಧಿ ಆಯುಕ್ತ ಗುಂಜನ್ ಕೃಷ್ಣ ಹೇಳಿದ್ದಾರೆ.
ಅಮೇಜಾನ್ ಇಂಡಿಯಾದ ಪಬ್ಲಿಕ್ ಪಾಲಿಸಿ ವಿಭಾಗದ ಮುಖ್ಯಸ್ಥ ಚೇತನ್ ಕೃಷ್ಣಸ್ವಾಮಿ ಮಾತನಾಡಿ, ‘ಸ್ಟಾರ್ಟ್‌ಅಪ್‌ಗಳು’ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಶಕ್ತಿ ತುಂಬುವ ಎಂಜಿನ್‌ನಂತೆ ಎಂಬ ಪ್ರಧಾನಿ ನರೇಂದ್ರ ಮೋದಿ ಆಶಯಕ್ಕೆ ಪೂರಕವಾಗಿ, ‘ಅಮೆಜಾನ್ ಲಾಂಚ್‌ಪ್ಯಾಡ್’, ‘ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ಪ್ರೋಗ್ರಾಮ್’ ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದೇ ರೀತಿ ಈಗ ಕರ್ನಾಟಕ ಸರ್ಕಾರದ ‘ವೆಂಚುರೈಸ್’ ಕಾರ್ಯಕ್ರಮದೊಂದಿಗೆ ಕೈಜೋಡಿಸಲು ಹರ್ಷವಾಗುತ್ತಿದೆ’ ಎಂದು ಹೇಳಿದರು.
ಏನಿದು ಚಾಲೆಂಜ್..?
ಮುಂದಿನ 2 ತಿಂಗಳ ಅವಧಿಯಲ್ಲಿ ನಡೆಯಲಿರುವ ಈ ಸ್ಪರ್ಧೆಯ ಮೊದಲ ಹಂತ ಆನ್‌ಲೈನ್ ಅರ್ಜಿ ಸಲ್ಲಿಕೆ. ಆನ್‌ಲೈನ್ ಪಿಚಿಂಗ್ 2ನೇ ಭಾಗವಾದರೆ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಪ್ರಪಂಚದಾದ್ಯಂತ 2000ಕ್ಕೂ ಹೆಚ್ಚು ಅರ್ಜಿಗಳನ್ನು ನಿರೀಕ್ಷಿಸಲಾಗಿದೆ. 2022ರ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸುವ ವಿಳಾಸ: https://investkarnataka.co.in/gim2022/venturise ಆಗಿರುತ್ತದೆ.
ಇದನ್ನೂ ಓದಿ: ಪ್ರಧಾನಿಗಳು ತಾಕತ್ತಿದ್ದಲ್ಲಿ 40% ಕಮಿಷನ್ ಬಗ್ಗೆ ಮಾತನಾಡಲಿ - ಪೃಥ್ವಿ ರೆಡ್ಡಿ ಸವಾಲು
ವಿಜೇತರಿಗೆ ಬಹುಮಾನ
ಸ್ಪರ್ಧೆಯ ವಿಜೇತರಿಗೆ 100,000 ಡಾಲರ್ ನಗದು ಬಹುಮಾನ ಘೋಷಿಸಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗುವ ಅವಕಾಶದ ಜೊತೆಗೆ ಹೂಡಿಕೆದಾರರು ಹಾಗೂ ಮಾರ್ಗದರ್ಶಕರ ಜೊತೆ ಮಾತುಕತೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಅಮೆಜಾನ್ ಪ್ರಾಯೋಜಿತ ಈ ‘ಸ್ಟಾರ್ಟ್‌ಅಪ್ ಪಿಚ್ ಚಾಲೆಂಜ್’ನ ಸುಗಮ ನಿರ್ವಹಣೆಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜೊತೆ ಟಿಐಇ ಕೈಜೋಡಿಸಿದೆ. ಕಾರ್ಯಕ್ರಮದಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂನ ಸಿಓಓ ಬಿ.ಕೆ.ಶಿವಕುಮಾರ್, ಟಿಐಇ ಗ್ಲೋಬಲ್ ಮುಖ್ಯಸ್ಥ ಬಿಜೆ ಅರುಣ್, ಟಿಐಇ ಬೆಂಗಳೂರಿನ ಅಧ್ಯಕ್ಷ ಮದನ್ ಫಡ್ಕಿ, ಉಪಸ್ಥಿತಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.