ಚನ್ನಪಟ್ಟಣ: “ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ನೀನು ಹಿಟ್ ಅಂಡ್ ರನ್, ಬ್ಲಾಕ್ ಮೇಲರ್” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹರಿಹಾಯ್ದರು.
ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು, “ಕುಮಾರಣ್ಣ ನೀನು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಬದಲು ಮೊದಲಿನಿಂದಲೂ ಚರ್ಚೆ ಮಾಡು. ನಿನ್ನ ಸಹೋದರ ಬಾಲಕೃಷ್ಣ ಗೌಡ ಅವರ ಕುಟುಂಬ ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ನೀವು ರಾಮನಗರದಲ್ಲಿ ಉತ್ತರ ನೀಡಬೇಕು. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ, ಯಾವ ಈರುಳ್ಳಿ, ಆಲುಗಡ್ಡೆಯಲ್ಲಿ ಅದು ಸಂಪಾದನೆ ಆಯ್ತು? ಎಂದು ಲೆಕ್ಕ ಕೊಡಬೇಕು” ಎಂದು ಸವಾಲೆಸೆದರು.
ಇದನ್ನೂ ಓದಿ: ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ
“ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ. ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೀಯ. ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀವಲ್ಲ”
“ನನ್ನ ಮೇಲೆ, ನನ್ನ ಧರ್ಮಪತ್ನಿ, ನನ್ನ ಸಹೋದರಿ, ನನ್ನ ಸಹೋದರನ ಮೇಲೆ ನೀವು ಕೇಸ್ ದಾಖಲಿಸಿ ಏನು ಮಾಡಿದಿರಿ? ಏನು ಮಾಡಲು ಆಗಿಲ್ಲ. ಮಿಲಿಟರಿಯವರು ಬಂದು ನನ್ನನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ನೀನು ಹೇಳಿದ್ದೀಯಾ. ಹಾಗಿದ್ದರೆ ನಾನು ಜೈಲಲ್ಲಿ ಇದ್ದಾಗ ಯಾಕೆ ಬಂದು ನನ್ನನ್ನು ನೋಡಿದೆ? ನನ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಅದು ಗೊತ್ತಿದೆಯೇ? ನನ್ನ ಕುಟುಂಬದವರ ಮೇಲೆ ಹಾಕಿಸಿದ್ದ ಕೇಸು ವಜಾ ಆಗಿದೆ ಗೊತ್ತಿದೆಯಾ?” ಎಂದು ಕುಟುಕಿದರು.
“ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಗಣಿ ಕೇಸ್ ಇನ್ನು ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಇನ್ನು ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡುತ್ತೇನೆ” ಎಂದು ಸವಾಲೆಸೆದರು.
ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ, ಅದೇ ರೀತಿ ಎಲ್ಲರೂ ರೈತನ ಮಗ ಆಗುವುದಿಲ್ಲ:
“ನೀವು ರೈತನ ಮಗ ಎಂದು ಹೇಳುತ್ತೀರಿ. ನಮ್ಮ ಹಳ್ಳಿ ಕಡೆ ಒಂದು ಮಾತು ಹೇಳುತ್ತಾರೆ. ‘ಹುಟ್ಟಿದವೆಲ್ಲಾ ಬಸವ ಆಗುವುದಿಲ್ಲ’ ಎಂದು. ಅಂದರೆ ಹಳ್ಳಿಗಳಲ್ಲಿ ಹುಟ್ಟುವ ಎಲ್ಲಾ ಕರುಗಳು ಬಸವ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ರೈತರು ರೈತರ ಮಕ್ಕಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರೈತರ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ್ದೇವೆ. ಅರಣ್ಯ ಕಾಯ್ದೆಯಲ್ಲಿ ರೈತರಿಗೆ ಜಮೀನು ನೀಡಿದ್ದೇವೆ. ಕುಮಾರಸ್ವಾಮಿ ಅವರೇ, ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ನಾನು ಚನ್ನಪಟ್ಟದ ವಿವಿಧ ಕಡೆಗಳಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕರೆದುಕೊಂಡು ಬಂದು ಅವರ ಕಷ್ಟ ಕೇಳಿದ್ದೇನೆ. ಈ ಕ್ಷೇತ್ರದಲ್ಲಿ 22 ಸಾವಿರ ಜನ ತಮ್ಮ ಕಷ್ಟ ಬಗೆಹರಿಸುವಂತೆ ಅರ್ಜಿ ನೀಡಿದ್ದಾರೆ. ನಿವೇಶನ, ಮನೆ, ಪಿಂಚಣಿ, ಜಮೀನಿನ ಖಾತೆ ಇಲ್ಲ ಎಂದು ಅರ್ಜಿ ಕೊಟ್ಟಿದ್ದಾರೆ. ಆಗಿದ್ದರೆ ನೀವು ಯಾವ ಆಡಳಿತ ಮಾಡಿದ್ದೀರಿ? ಯಾರಿಗೆ ಸಹಾಯ ಮಾಡಿದ್ದೀರಿ? ಇದಕ್ಕೆ ಈ ಕ್ಷೇತ್ರದ ಜನ ಮುಂದಿನ ಉಪಚುನಾವಣೆಯಲ್ಲಿ ಉತ್ತರ ನೀಡಬೇಕು. ನೀವೆಲ್ಲರೂ ಉತ್ತರ ನೀಡುತ್ತೀರಿ ಅಲ್ಲವೇ? ಬೆಂಗಳೂರು ದಕ್ಷಿಣ ನಿಮ್ಮ ಜಿಲ್ಲೆಯಲ್ಲವೇ? ಆ ಸ್ವಾಭಿಮಾನ ನಿಮ್ಮದಲ್ಲವೇ?” ಎಂದು ತಿಳಿಸಿದರು.
ಕುಮಾರಸ್ವಾಮಿ ಹಿಡ್ ಅಂಡ್ ರನ್, ಬ್ಲಾಕ್ ಮೇಲರ್
“ನನ್ನ ಅಧ್ಯಕ್ಷತೆಯಲ್ಲಿ ನನ್ನ ಪಕ್ಷಕ್ಕೆ 136 ಸೀಟು ಬಂದಿದೆ. ನಿನ್ನ ಅಧ್ಯಕ್ಷತೆಯಲ್ಲಿ ನಿನ್ನ ಪಕ್ಷಕ್ಕೆ 19 ಸೀಟು ಬಂದಿದೆ. ಈಗ ನಿನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದೀಯ. ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ.ಟಿ ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ?” ಎಂದು ಪ್ರಶ್ನಿಸಿದರು.
“ಪಾದಯಾತ್ರೆಗೆ ಬರಲ್ಲ ಎಂದು ಹೇಳಿದವನು, ಈಗ ಯಾಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೀಯಾ? ಕೇವಲ ನಿನ್ನ ಅಧಿಕಾರಕ್ಕೋಸ್ಕರ. ನಿನ್ನ ಪಕ್ಷವನ್ನು ಮುಳುಗಿಸಲು ಹೊರಟಿದ್ದೀಯಾ” ಎಂದು ಮಾತಿನ ಮೂಲಕ ತಿವಿದರು.
ಪೆನ್ ಡ್ರೈವ್ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ
“ಇನ್ನು ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ದಿನಕ್ಕೊಂದು ಮಾತನಾಡಿದ್ದಾರೆ. ಮೊದಲು ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಎಂದರು. ಮೊದಲು ಡಿ.ಕೆ.ಶಿವಕುಮಾರ್ ಪೆನ್ ಡ್ರೈವ್ ಹಂಚಿದ್ದಾರೆ ಎಂದರು. ಕುಮಾರಸ್ವಾಮಿ ಶಿವಕುಮಾರ್ ಎಂದಿಗೂ ನೇರವಾಗಿ ಹೋರಾಟ ಮಾಡುವವನು. ಈ ರೀತಿ ಹಿಂದೆ ನಿಂತು ಯುದ್ಧ ಮಾಡುವುದಿಲ್ಲ ಎಂದು ನಿಮಗೂ ಗೊತ್ತಿದೆ. ಈಗಾಗಲೇ ನೀನು ನನ್ನ ವಿರುದ್ಧ ಹೋರಾಡಿ ಸೋತಿದ್ದೀಯಾ. ದೇವರು ಅವಕಾಶ ಕೊಟ್ಟರೆ ಮತ್ತೊಮ್ಮೆ ಸೆಣೆಸಾಡೋಣ” ಎಂದು ತಿಳಿಸಿದರು.
ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಬಿಜೆಪಿಯವರು ಯಾಕೆ ಚರ್ಚೆ ಮಾಡುತ್ತಿಲ್ಲ? ಆ ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿದೆ, ಈಗ ಪ್ರೀತಂ ಗೌಡ ಬಗ್ಗೆ ಮಾತನಾಡುತ್ತಿದ್ದೀಯಾ? ನನಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿದ್ದೆ. ಈಗ ನಮ್ಮ ದೇವೇಗೌಡರ ಕುಟುಂಬ ಎಂದು ಹೇಳುತ್ತಿದ್ದೀಯಾ? ಈ ಬಗ್ಗೆ ಚರ್ಚೆ ಮಾಡು.
ಕುಮಾರಸ್ವಾಮಿ ನವರಂಗಿ ಬಣ್ಣ ಬಯಲಾಗಬೇಕು:
“ಕುಮಾರಸ್ವಾಮಿ ಅವರು ಮಂಡ್ಯ ಚುನಾವಣೆ ವೇಳೆ ಎನ್ ಡಿಎ ಸರ್ಕಾರ ಬಂದರೆ ಐದು ನಿಮಿಷದಲ್ಲಿ ಮೋದಿ ಅವರ ಜತೆ ಮಾತಾಡಿ ಮೇಕೆದಾಟಿಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಈಗ ನಾನು ಹಾಗೆ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಏನೆಲ್ಲಾ ಹೇಳಿದ್ದಾರೆ ಅವುಗಳನ್ನು ದೊಡ್ಡ ಪರದೆಯಲ್ಲಿ ಹಾಕಿಸಬೇಕು. ಅವರ ನವರಂಗಿ ಬಣ್ಣ ರಾಜ್ಯದ ಜನತೆಗೆ ಅರ್ಥವಾಗಬೇಕು” ಎಂದು ತಿಳಿಸಿದರು.
ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ಮುಂದುವರಿಯಲಿ:
“ಕುಮಾರಸ್ವಾಮಿ ಅವರೇ ನೀವು ನಿಮ್ಮ ಟೂರಿಂಗ್ ಟಾಕೀಸ್ ರಾಜಕಾರಣ ಮಾಡಿ ನಮ್ಮ ಅಭ್ಯಂತರವಿಲ್ಲ. ಮಧುಗಿರಿ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮಾಡಿ, ಮುಂದೆ ಕನಕಪುರಕ್ಕೂ ಬನ್ನಿ. ಕೆಲವರು ನಿಮ್ಮನ್ನು ತಿರಸ್ಕರಿಸಿದ್ದಾರೆ, ಮತ್ತೆ ಕೆಲವರು ಗೆಲ್ಲಿಸಿದ್ದಾರೆ. ಎಲ್ಲಾ ದಿನ ಒಂದೇ ಆಗಿರುವುದಿಲ್ಲ. ಜನ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
“ಕುಮಾರಣ್ಣ ನೀನು ಬಿಜೆಪಿಗೂ ಬ್ಲಾಕ್ ಮೇಲೆ ಮಾಡಲು ಶುರು ಮಾಡಿದ್ದೀಯ. ನೀವಿಬ್ಬರೂ ಚೆನ್ನಾಗಿರಿ. ಒಂದಾಗಿರಿ. ನಿಮ್ಮ ಪಕ್ಷ ಬಿಜೆಪಿ ಜತೆ ವಿಲೀನವಾದರೂ ಮಾಡಿಕೊಳ್ಳಿ. ನಮಗೂ ಒಳ್ಳೆಯದು. ನಮ್ಮ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಈಗಾಗಲೇ ಹೇಳಿದ್ದೀರ. ಆ ಕೆಲಸವನ್ನು ಶುಭಮುಹೂರ್ತ, ಶುಭ ಗಳಿಗೆಯಲ್ಲಿ ಮಾಡಿದರೆ ಎಲ್ಲರಿಗೂ ಉತ್ತಮ” ಎಂದರು.
“ಕೇಂದ್ರ ಸರ್ಕಾರ ನಿನಗೆ ಎರಡು ಖಾತೆ ನೀಡಿದೆ. ನೀನು 10 ಸಾವಿರ ಜನರಿಗೆ ಕೆಲಸ ಕೊಡುವ ಕಾರ್ಖಾನೆ ಆರಂಭಿಸುತ್ತೇನೆ ಎಂದು ಹೇಳಿಕೆ ನೀಡಿದ್ದೀಯ. ಸಂತೋಷ ಆ ಕೆಲಸ ಮಾಡು. ನಮ್ಮ ಸರ್ಕಾರದಿಂದ ನಾವು ಸಹಕಾರ ನೀಡುತ್ತೇವೆ. ನೀವು ಎಲ್ಲೆಲ್ಲಿ ಅಂಗಡಿ ಇಟ್ಟಿದ್ದೀರಿ ನನಗೆ ಗೊತ್ತಿದೆ. ನೀನು ಅಧಿಕಾರದಲ್ಲಿದ್ದಾಗ ನಿನ್ನ ಜನರಿಗೆ ಒಂದು ಮನೆ, ನಿವೇಶನ ನೀಡಲಿಲ್ಲ. ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ನೀಡಲಿಲ್ಲ. ನೀನು ನಿನ್ನ ಕುಟುಂಬ ಮಾತ್ರ ಅಧಿಕಾರ ಅನುಭವಿಸಿದ್ದೇ ಆಯ್ತು. ಯಡಿಯೂರಪ್ಪನವರು ಸದನದಲ್ಲಿ ನಿನ್ನ ಬಗ್ಗೆ ಮಾಡಿರುವ ಭಾಷಣದ ಬಗ್ಗೆ ನೀನು ಉತ್ತರ ನೀಡು ಸಾಕು” ಎಂದು ಸವಾಲೆಸೆದರು.
ಬಿಜೆಪಿ ಹಾಗೂ ಜೆಡಿಎಸ್ ನವರದ್ದು ಪಾಪ ವಿಮೋಚನಾ ಯಾತ್ರೆ:
“ಬಿಜೆಪಿ ಹಾಗೂ ಜೆಡಿಎಸ್ ನವರದ್ದು ಪಾಪವಿಮೋಚನಾ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಮಾಡಿರುವ ಎಲ್ಲಾ ಪಾಪಗಳನ್ನು ಕಳೆದುಕೊಳ್ಳಲು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
“ಕುಮಾರಸ್ವಾಮಿ ಅವರ ಅಕ್ರಮಗಳ ಬಗ್ಗೆ ಬಿಜೆಪಿಯವರು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಜಾಹೀರಾತಿನ ಬಗ್ಗೆ ಪಾದಯಾತ್ರೆ ಮಾಡುತ್ತಿರುವವರು ಉತ್ತರ ಕೊಡಬೇಕು. ಬಿಜೆಪಿಯ ಶಾಸಕರಾದ ಯತ್ನಾಳ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ” ಎಂದು ತಿಳಿಸಿದರು.
ಬಿಜೆಪಿ ಮುಖ್ಯಮಂತ್ರಿಗಳು ಏಕೆ ರಾಜೀನಾಮೆ ನೀಡಲಿಲ್ಲ:
“ಬಿಜೆಪಿ ಅವಧಿಯಲ್ಲಿ 25 ಹಗರಣಗಳಿವೆ. ನಮ್ಮ ಸಚಿವರು ನಿಮ್ಮ ಅವಧಿಯಲ್ಲಿ ಆಗಿರುವ ಹಗರಣದ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ. ಕಿಯೋನಿಕ್ಸ್ ಹಾಗೂ ಪಂಚಾಯ್ತಿಗಳಲ್ಲಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರಲ್ಲಾ ಅದೆಲ್ಲವನ್ನು ಹೊರಗೆ ತೆಗೆಯಬೇಕು. ನಿಮ್ಮ ಅವಧಿಯಲ್ಲಿ ನಡೆದ ಪಿಎಸ್ಐ ಹಗರಣ ನಡೆದಾಗ ಸಿಎಂ ಹಾಗೂ ಗೃಹ ಸಚಿವರು ಯಾಕೆ ರಾಜೀನಾಮೆ ನೀಡಲಿಲ್ಲ? ಹಗರಣವೇ ಇಲ್ಲದ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ರಾಜೀನಾಮೆ ಕೇಳುತ್ತಿದ್ದೀರಿ. ಭೋವಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ನಡೆದಾಗ ನಿಮ್ಮ ಮುಖ್ಯಮಂತ್ರಿಗಳು, ಮಂತ್ರಿಗಳು ಯಾಕೆ ರಾಜೀನಾಮೆ ನೀಡಲಿಲ್ಲ” ಎಂದು ಪ್ರಶ್ನಿಸಿದರು.
“ನಿಮ್ಮ ಸರ್ಕಾರದ ಅಕ್ರಮಗಳ ಬಗ್ಗೆ ನಾವು ಮಾತನಾಡಿರುವುದಕ್ಕಿಂತ ನಿಮ್ಮ ಪಕ್ಷದ ನಾಯಕರಾದ ಗೂಳಿಹಟ್ಟಿ ಶೇಖರ್, ಬಸನಗೌಡ ಪಾಟೀಲ್ ಯತ್ನಾಳ್, ಹೆಚ್ ವಿಶ್ವನಾಥ್ ಅವರು, ನಿಮ್ಮ ಸ್ನೇಹಿತರಾದ ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಉತ್ತರ ನೀಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಬಿಜೆಪಿ ನಾಯಕರಾದ ಮೋದಿ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ ತಿಳಿದಿದೆಯೇ” ಎಂದರು.
“ಜಾತ್ಯಾತೀತ ತತ್ವ ಉಳಿಸಲು ನಾನು, ಪರಮೇಶ್ವರ್, ಸಿದ್ದರಾಮಯ್ಯ ಅವರು ನಿನ್ನನ್ನು ಮುಖ್ಯಮಂತ್ರಿ ಮಾಡಿದಾಗ, ಯಡಿಯೂರಪ್ಪನವರು ನಿನ್ನ ಬಗ್ಗೆ ಎಚ್ಚರಿಕೆ ನೀಡಿದರು. 'ಡಿ.ಕೆ. ಶಿವಕುಮಾರ್, ಈ ಅಪ್ಪ ಮಕ್ಕಳ ಬಗ್ಗೆ ಹುಷಾರಾಗಿರಿ ಎಂದು ಹೇಳಿದ್ದರು'. ನೀನು ರಾಜ್ಯಪಾಲರ ಮೂಲಕ ಅವರನ್ನು ಜೈಲಿಗೆ ಕಳುಹಿಸಿದೆ. ಈಗ ಅವರನ್ನೇ ತಬ್ಬಾಡುತ್ತಿದ್ದೀಯಾ?” ಎಂದು ಲೇವಡಿ ಮಾಡಿದರು.
“ಯಡಿಯೂರಪ್ಪನವರೇ ನೀವು ಕಣ್ಣೀರು ಹಾಕುತ್ತಾ ರಾಜೀನಾಮೆ ಕೊಟ್ಟಿದ್ದು ಏಕೆ? ನಿಮ್ಮಿಂದ ರಾಜೀನಾಮೆ ಕೊಡಿಸಿದ್ದು ಯಾರು ಎಂದು ಹೇಳಬೇಕು. ನಿಮ್ಮ ಕಾಲದ ಹಗರಣಗಳು, ಬೊಮ್ಮಾಯಿ ಅವರ ಕಾಲದ ಹಗರಣಗಳ ಪಟ್ಟಿ ಇದೆ. ಕೋವಿಡ್ ಸಮಯದಲ್ಲಿ ಆಗಿರುವ ಹಗರಣದಲ್ಲಿ ಹೆಣದ ಮೇಲೆ ಹಣ ಮಾಡಿದಿರಿ. ಅವರು ಕೋವಿಡ್ ಸಮಯದಲ್ಲಿ ನಿಮ್ಮ ಬಳಿಗೆ ಬಂದು ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರಾ? ಯೋಗೇಶ್ವರ್, ಕುಮಾರಸ್ವಾಮಿ ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರಾ? ಕೋವಿಡ್ ಸಮಯದಲ್ಲಿ ಈ ಭಾಗದ ಹೆಣಗಳನ್ನು ಹೊತ್ತವರು ಡಿ.ಕೆ ಸುರೇಶ್ ಹಾಗೂ ಎಸ್ ರವಿ. ಮನೆ ಮನೆಗೆ ಆಹಾರ, ಹಣ್ಣು ಹಂಚಿದ್ದು ಇವರು” ಎಂದರು.
ಚನ್ನಪಟ್ಟಣದ ಜನರ ಕೈ ಹಿಡಿಯಲು ಕಾಂಗ್ರೆಸ್ ಬದ್ಧ
“ಚನ್ನಪಟ್ಟಣದ ಜನರಿಗೆ ಒಂದು ಮಾತು ಹೇಳುತ್ತೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿ ಆಗಬಹುದು. ಆದರೂ ಇಲ್ಲಿ ನಿಜವಾದ ಅಭ್ಯರ್ಥಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್. ಇಲ್ಲಿ ಹಸ್ತದ ಗುರುತೇ ಅಭ್ಯರ್ಥಿ. ನಾನು ಇಲ್ಲಿನ ಶಾಸಕನಂತೆ ಕೆಲಸ ಮಾಡುತ್ತೇನೆ. ಇದಕ್ಕೆ ನೀವು ಅವಕಾಶ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
“ವಸತಿ ಸಚಿವ ಜಮೀರ್ ಅವರು ಈ ಕ್ಷೇತ್ರಕ್ಕೆ 5 ಸಾವಿರ ಮನೆ ಮಂಜೂರು ಮಾಡುವುದಾಗಿ ಹೇಳಿದ್ದಾರೆ. ಇನ್ನು ಬಡವವರಿಗೆ ನಿವೇಶನ ನೀಡಲು ಜಾಗ ಗುರುತಿಸುತ್ತಿದ್ದೇವೆ. ಬಡವರಿಗೆ ನಿವೇಶನ ನೀಡುತ್ತಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ನೀಡಲು ಮುಖ್ಯಮಂತ್ರಿಗಳು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅರ್ಹರಿಗೆ ಬಗರ್ ಹುಕ್ಕುಂ ಜಮೀನು ನೀಡಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಸುರೇಶ್ ಸೋತಿರಬಹುದು. ಆದರೆ ನೀವು ನಮಗೆ 80 ಸಾವಿರ ಮತ ಹಾಕಿದ್ದೀರಿ. ನಿಮ್ಮನ್ನು ಬಿಡುವ ಪ್ರಶ್ನೆ ಇಲ್ಲ. ನಿಮ್ಮ ಕೈಯನ್ನು ನಾವು ಹಿಡಿಯುತ್ತೇವೆ” ಎಂದರು.
“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಾವು ಅಧಿಕಾರದಲ್ಲಿ ಇದ್ದ ಕಾರಣಕ್ಕೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಡವರಿಗೆ ಅನುಕೂಲ ಮಾಡುವ ಇಂತಹ ಒಂದು ಯೋಜನೆಯನ್ನು ಯಡಿಯೂರಪ್ಪ, ಸಿ.ಟಿ.ರವಿ, ವಿಜಯೇಂದ್ರ, ಕುಮಾರಸ್ವಾಮಿ ನಿಮ್ಮಿಂದ ನೀಡಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದರು.
ಮಾಧ್ಯಮ ಪ್ರತಿಕ್ರಿಯೆ:
ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಿವಕುಮಾರ್ ಅವರು, “ಕುಮಾರಸ್ವಾಮಿ ಅವರು ಇಲ್ಲಿನ ಶಾಸಕರಾಗಿ ಎಷ್ಟು ಜನರಿಗೆ ನಿವೇಶನ, ಮನೆ ಹಂಚಿದ್ದಾರೆ. ಎಷ್ಟು ಜನ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿದ್ದಾರೆ? ಎಷ್ಟು ಜನಕ್ಕೆ ಬಗರ್ ಹುಕ್ಕುಂ ಸಾಗುವಳಿ ಜಮೀನು ನೀಡಿದ್ದಾರೆ ಎಂದು ಮತದಾರರಿಗೆ ಹೇಳಬೇಕು. ಮತದಾರರಿಂದ ಮತ ಪಡೆದು ಅಧಿಕಾರ ಮಾಡುವುದಷ್ಟೇ ಅಲ್ಲ, ಅವರ ಋಣವನ್ನು ತೀರಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ:ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ! 7.5 ಕೋಟಿ ಆಸ್ತಿ ಹೊಂದಿರುವ ಈ ಹೈಫೈ ಬೆಗ್ಗರ್ ಭಾರತದವನೇ..
ಶಿವಕುಮಾರ್ ನ್ಯಾಯುತವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಇಂತಹ ವಿಚಾರವನ್ನು ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ. ಮುಖ್ಯವಾದ ವೇದಿಕೆಗಳಲ್ಲಿ ಚರ್ಚೆ ಮಾಡಬೇಕು. ಈ ವಿಚಾರವಾಗಿ ನಾವು ಮಾಡುವ ಚರ್ಚೆ ದಾಖಲೆಯಾಗಿ ಉಳಿಯಬೇಕು. ಅದಕ್ಕಾಗಿಯೇ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡುತ್ತಿದ್ದೇನೆ. ಎರಡು ಬಾರಿ ಆಹ್ವಾನ ನೀಡಿದೆ. ಅವರು ಬರಲಿಲ್ಲ. ಈಗ ಅವರ ಸಹೋದರ ಹಾಗೂ ಅವರ ಪಕ್ಷದ ಶಾಸಕರು ಸದನದಲ್ಲಿ ಇದ್ದಾರೆ. ಅವರ ಬಳಿ ದಾಖಲೆಗಳನ್ನು ಕೊಟ್ಟು ಕಳಿಸಿ ಚರ್ಚೆ ಮಾಡಿಸಲಿ. ಇದ್ದೆಲ್ಲವೂ ಮುಂದಿನ ಪೀಳಿಗೆಗಳಿಗೂ ತಿಳಿಯಲಿ. ಸಾರ್ವಜನಿಕವಾಗಿ ಚರ್ಚೆ ಮಾಡಬೇಕೆಂದರೆ ಯಾವುದಾದರೂ ಸುದ್ದಿ ವಾಹಿನಿಯಲ್ಲಿ ಕೂತು ಚರ್ಚೆ ಮಾಡಬೇಕು. ಅವರ ಜತೆ ಚರ್ಚೆ ಮಾಡಲು ನಾನು ಸಿದ್ಧನಾಗಿದ್ದೇನೆ” ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ