ಹುಬ್ಬಳ್ಳಿ: ‘ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ.ಭಯೋತ್ಪಾದನೆಯಿಂದ ನಾವು ನಮ್ಮ ನಾಯಕರುಗಳನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿಕೊಂಡು, ದಮನ ಮಾಡಿಕೊಂಡು ಬಂದಿದೆ. ನಾವು ಭಯೋತ್ಪಾದನಾ ಕೃತ್ಯ ಖಂಡಿಸುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು
ಇಂದು ಸಂಜೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಮೊದಲ ಸಭೆ ನಡೆಯಲಿದೆ.ನೂತನವಾಗಿ ರಚನೆಯಾಗಿರುವ ಚುನಾವಣಾ ಸಮಿತಿಯು ಟಿಕೆಟ್ ಆಕಾಂಕ್ಷಿಗಳ ಅರ್ಜಿಯನ್ನು ಹೇಗೆ ಪರಿಶೀಲಿಸಬೇಕು, ಆಯ್ಕೆ ಪ್ರಕ್ರಿಯೆ ಹೇಗಿರಬೇಕು ಎಂದು ತೀರ್ಮಾನಿಸಲಿದೆ.
ಇದನ್ನೂ ಓದಿ: ಸರ್ಕಾರಿ ಕಚೇರಿಗೇ ಕನ್ನ ಹಾಕಿದ ಖದೀಮರು: ದಾಖಲೆಗಳು ಸೇರಿ ಕಂಪ್ಯೂಟರ್ ಕಳ್ಳತನ!
ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಪದಾಧಿಕಾರಿಗಳ ಬಳಿ ಈ ಅರ್ಜಿ ರವಾನಿಸಲಾಗುವುದು. ಅವರಿಗೆ ನಾವು ಯಾವ ಮಾರ್ಗದರ್ಶನ ನೀಡಬೇಕು ಎಂಬುದನ್ನು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು. ಈ ಮಧ್ಯೆ ಪಕ್ಷದ 78 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಆಯಾ ಕ್ಷೇತ್ರಗಳಲ್ಲಿ ಪಕ್ಷದ ಸದಸ್ಯರ ಅಭಿಪ್ರಾಯ ಪಡೆಯಲು ಒಂದು ತಂಡ ರಚಿಸುವ ಬಗ್ಗೆ ಎಐಸಿಸಿ ಚಿಂತನೆ ಮಾಡುತ್ತಿದೆ. ಹೀಗೆ ಏನೆಲ್ಲಾ ಮಾಡಬೇಕು, ಯಾವ ನೀತಿ ರೂಪಿಸಬೇಕು ಎಂದು ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ.
ಪಕ್ಷದ ವತಿಯಿಂದ ಬಸ್ ಯಾತ್ರೆ ಮಾಡಲಾಗುತ್ತಿದ್ದು, 30 ರಂದು ವಿಜಯಪುರದಲ್ಲಿ ಕೃಷ್ಣಾ ನೀರಿನ ಹಂಚಿಕೆ ವಿಚಾರವಾಗಿ ದೊಡ್ಡ ಸಭೆ ಹಮ್ಮಿಕೊಳ್ಳಲಿದ್ದೇವೆ. ಮುಂದಿನ ತಿಂಗಳು 2 ರಂದು ಮಹದಾಯಿ ವಿಚಾರವಾಗಿ ಹೋರಾಟ, ಜನಜಾಗೃತಿಯನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಮಾವೇಶ ಹಮ್ಮಿಕೊಂಡಿದ್ದೇವೆ.
ಬಸ್ ಯಾತ್ರೆ ಮೊದಲ ಹಂತದಲ್ಲಿ ಯಾವ ಜಿಲ್ಲೆಗಳಿಗೆ ಯಾವಾಗ ಪ್ರಯಾಣ ಮಾಡುತ್ತದೆ ಎಂಬುದು ಇಂದಿನ ಸಭೆಯಲ್ಲಿ ತೀರ್ಮಾನಿಸುತ್ತೇವೆ. ವೇಳಾಪಟ್ಟಿ ಬಹುತೇಕ ಅಂತಿಮವಾಗಿದ್ದು, ಇಂದು ಸಭೆಯಲ್ಲಿ ಪಾಲ್ಗೊಳ್ಳಲಿರುವ ನಾಯಕರ ಮುಂದೆ ಈ ವಿಚಾರ ಇಟ್ಟು ನಂತರ ಅಂತಿಮ ತೀರ್ಮಾನ ಘೋಷಿಸುತ್ತೇವೆ.
ಪಕ್ಷದಲ್ಲಿ ಯಾರು ಯಾವ ಷರತ್ತು ಹಾಕುವಂತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷದ ಅಧ್ಯಕ್ಷನಾದರೂ ನಾನೊಬ್ಬನೇ ಎಲ್ಲವನ್ನು ತೀರ್ಮಾನಿಸುವುದಿಲ್ಲ. ನಾನು ಪ್ರತಿಯೊಂದು ವಿಚಾರವನ್ನು ಸಿದ್ದರಾಮಯ್ಯ, ಹರಿಪ್ರಸಾದ್, ಕಾರ್ಯಧ್ಯಕ್ಷರು, ಜಿಲ್ಲಾ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ಹುಬ್ಬಳ್ಲಿ ಧಾರವಾಡದಲ್ಲಿ ಕಾರ್ಯಕ್ರಮ ಮಾಡುವಾಗ ಹೆಚ್.ಕೆ. ಪಾಟೀಲ್ ಅವರ ಜತೆ, ಬಿಜಾಪುರದಲ್ಲಿ ಕಾರ್ಯಕ್ರಮ ಮಾಡುವಾಗ ಎಸ್.ಆರ್. ಪಾಟೀಲ್, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಅಲ್ಲಿನ ಶಾಸಕರ ಅವರ ಜತೆ ಚರ್ಚೆ ಮಾಡುತ್ತಿದ್ದೇನೆ.
ಅಧಿವೇಶನದ ನಡುವೆ ಸುರ್ಜೆವಾಲ ಹಾಗೂ ನಾವು ನಮ್ಮ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ.ಉತ್ತರ ಕರ್ನಾಟಕ ಭಾಗದ ಎಲ್ಲ ನಾಯಕರನ್ನು ಆಹ್ವಾನಿಸಿದ್ದೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸುರ್ಜೆವಾಲ ಅವರು ಭಾಗವಹಿಸಲಿದ್ದಾರೆ. ನಂತರ ಹುಬ್ಬಳ್ಳಿ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದೇನೆ.
ಪಕ್ಷದ ಟಿಕೆಟ್ ಯಾರಿಗೆ ನೀಡುತ್ತೀರಿ, ಮಾನದಂಡವೇನು ಎಂದು ಕೇಳಿದ ಪ್ರಶ್ನೆಗೆ, ‘ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೋ ಅವರೆಲ್ಲರಿಗೂ ಟಿಕೆಟ್ ನೀಡುತ್ತೇವೆ. ಎಐಸಿಸಿ ಮುಖಂಡರು ಪ್ರತಿ ಕ್ಷೇತ್ರದಲ್ಲೂ ಟಿಕೆಟ್ ನೀಡಿಕೆ ಸಂಬಂಧ ಚರ್ಚೆ ಮಾಡುತ್ತಾರೆ. ಕಷ್ಟಕಾಲದಲ್ಲಿ ಯಾರು ಗೆದ್ದು ಕ್ಷೇತ್ರ ಉಳಿಸಿಕೊಂಡಿದ್ದಾರೋ ಅವರಿಗೆ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುತ್ತೇವೆ’ ಎಂದರು.
ಕುಕ್ಕರ್ ಬ್ಲಾಸ್ಟ್ ವಿಚಾರವಾಗಿ ತಮ್ಮ ಹೇಳಿಕೆಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಕೇಳಿದಾಗ, ‘ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ. ಭಯೋತ್ಪಾದನೆಯಿಂದ ನಾವು ನಮ್ಮ ನಾಯಕರುಗಳನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷ ಪ್ರತಿ ಹಂತದಲ್ಲೂ ಭಯೋತ್ಪಾದನೆಯನ್ನು ವಿರೋಧ ಮಾಡಿಕೊಂಡು, ದಮನ ಮಾಡಿಕೊಂಡು ಬಂದಿದೆ. ನಾವು ಭಯೋತ್ಪಾದನಾ ಕೃತ್ಯ ಖಂಡಿಸುತ್ತೇವೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಮುಖ ಆರೋಪಿಗೆ ಪ್ರಜ್ಞೆ ಬಂದಿಲ್ಲ. ಹೀಗಾಗಿ ಅವನ ವಿಚಾರಣೆ ಮಾಡಿಲ್ಲ. ಅವನ ತನಿಖೆ ನಂತರ ಮಾಹಿತಿ ಪಡೆಯಬೇಕು, ಆನಂತರ ಮಾಧ್ಯಮಗಳು ಈ ವಿಚಾರವಾಗಿ ಮಾಹಿತಿ ಪ್ರಕಟಿಸಬೇಕು ಎಂದು ಕೇಳಿಕೊಂಡಿದ್ದಾರೆ. ಪೊಲೀಸ್ ಆಯುಕ್ತರು ಹೇಳುವ ಮುನ್ನವೇ ಡಿಜಿ ಅವರು ಹೇಳಿಕೆ ನೀಡಿದ್ದಾರೆ. ಆತ ಭಯೋತ್ಪಾದಕನೆ ಇರಬಹುದು. ತನಿಖೆ ಮಾಡಿದ ನಂತರ ಸ್ಪಷ್ಟ ಮಾಹಿತಿ ನೀಡಬೇಕು. ಮತದಾರರ ಮಾಹಿತಿ ಕಳವು, ಬಿಜೆಪಿಗೆ ಮತ ಹಾಕದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮತವನ್ನೇ ತೆಗೆದು ಹಾಕಲಾಗಿದೆ. 8500 ಜನಕ್ಕೆ ಅಕ್ರಮವಾಗಿ ಬಿಎಲ್ಓ ಎಂದು ಪಟ್ಟ ನೀಡಿ ಈ ಅಕ್ರಮ ಮಾಡಲಾಗಿದೆ. ಸರ್ಕಾರಿ, ಅರೆ ಸರ್ಕಾರಿ, ಸರ್ಕಾರಿ ಶಿಕ್ಷಕರ ಹೊರತಾಗಿ ಬೇರೆಯವರಿಗೆ ಬಿಎಲ್ಓ ಆಗಿ ನೇಮಕ ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಚುನಾವಣಾ ಆಯೋಗ ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ವಿಚಾರವಾಗಿ ದೇಶದೆಲ್ಲೆಡೆ ಚರ್ಚೆ ಆರಂಭವಾದ ಹಿನ್ನೆಲೆಯಲ್ಲಿ ಈ ಹಗರಣವನ್ನು ಮುಚ್ಚಿಹಾಕಲು, ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಿದ್ದಾರೆ ಎಂದಷ್ಟೇ ನಾನು ಹೇಳಿದ್ದೇನೆ. ನಾನು ಯಾವುದೇ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ : ಶಾರೀಕ್‌ಗೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಚಿಕಿತ್ಸೆ
ಪಾಕಿಸ್ತಾನ ಸಚಿವ ಪ್ರಧಾನಿ ಬಗ್ಗೆ ಹೇಳಿರುವ ಮಾತಿನ ಬಗ್ಗೆ ಕಾಂಗ್ರೆಸ್ ಮೌನ ವಹಿಸಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ರಾಷ್ಟ್ರ, ರಾಷ್ಟ್ರದ ಭದ್ರತೆ, ರಾಷ್ಟ್ರ ಮಟ್ಟದ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಪಕ್ಷ ಏನು ಹೇಳಬೇಕೋ ಅದನ್ನು ಹೇಳಿದೆ. ನಾನು ರಾಜ್ಯಕ್ಕೆ ಸೀಮಿತಿವಾಗಿದ್ದು, ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ’ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.