ಬೆಂಗಳೂರು: 45 ವರ್ಷಗಳ ಹಿಂದೆ ಭಾರತೀಯ ಭೌತಶಾಸ್ತ್ರಜ್ಞ ರಾಜಾ ರಾಮಣ್ಣನವರಿಗೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಅತಿಥಿಯಾಗಿ ಇರಾಕಿಗೆ ಬಂದು ನೆಲೆಸುವಂತೆ ಆಮಂತ್ರಣ ನೀಡಲಾಯಿತು. ಅಂದುಕೊಂಡ ರೀತಿಯಲ್ಲೇ ಇರಾಕಿನ ಸರ್ವಾಧಿಕಾರಿ ಓರ್ವ ಪರಮಾಣು ಭೌತಶಾಸ್ತ್ರಜ್ಞರಿಗೆ ಇಂತಹ ಆಮಂತ್ರಣ ನೀಡಿದ್ದು ಖಂಡಿತಾ ಔಪಚಾರಿಕವಾಗಿರಲಿಲ್ಲ. ಇದರ ಹಿಂದೆ ರಹಸ್ಯ ಕಾರ್ಯತಂತ್ರಗಳೂ ಇದ್ದವು.
ಆಶ್ಚರ್ಯಕರವಾಗಿ ಡಾ.ರಾಜಾ ರಾಮಣ್ಣನವರು ಪೋಖ್ರಾನ್‌ನಲ್ಲಿ ಭಾರತದ ಪ್ರಥಮ ಪರಮಾಣು ಪರೀಕ್ಷೆ ನಡೆಸಿದ 4 ವರ್ಷಗಳ ಬಳಿಕ ಅವರಿಗೆ ಈ ಆಮಂತ್ರಣ ಸಿಕ್ಕಿತ್ತು. 1974ರಲ್ಲಿ ನಡೆದ ಈ ಅಣ್ವಸ್ತ್ರ ಪರೀಕ್ಷೆಯ ಮೂಲಕ ತೃತೀಯ ಜಗತ್ತಿನ ರಾಷ್ಟ್ರವಾಗಿದ್ದ ಭಾರತ ತಾನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿದ್ದೇನೆಂದು ಘೋಷಿಸಿತ್ತು. ಇದರಿಂದಾಗಿ ಜಗತ್ತೇ ಒಮ್ಮೆ ನಿದ್ದೆಯಿಂದ ಎಚ್ಚರವಾಗಿತ್ತು. ಸಹಜವಾಗಿಯೇ ಅದು ಸದ್ದಾಂ ಹುಸೇನ್ ಗಮನಕ್ಕೂ ಬಂದಿತ್ತು.
ಇದರಿಂದ ಕುಪಿತರಾಗಿದ್ದ, ಹತಾಶರಾಗಿದ್ದ ಸದ್ದಾಂ ಹುಸೇನ್ ಡಾ.ರಾಜಾ ರಾಮಣ್ಣ ಇರಾಕಿಗೆ ಬಂದು, ತನ್ನ ದೇಶದ ಪರಮಾಣು ಕಾರ್ಯಕ್ರಮದ ನೇತೃತ್ವ ವಹಿಸಿ, ಇರಾಕಿ ಅಣು ಬಾಂಬ್ ನಿರ್ಮಿಸಿಕೊಡಬೇಕೆಂದು ಆಶಿಸುತ್ತಿದ್ದರು. ಇರಾಕಿಗೆ ತೆರಳಿದ್ದ ರಾಜಾ ರಾಮಣ್ಣ ಅವರನ್ನು ಬಾಗ್ದಾದ್ ಮತ್ತು ಇರಾಕಿನ ಪ್ರಮುಖ ಪರಮಾಣು ಕೇಂದ್ರವಾದ ತುವೈತಾಗೆ ಪ್ರವಾಸ ಕರೆದೊಯ್ಯಲಾಗಿತ್ತು. ಆ ಪ್ರವಾಸದ ಅಂತ್ಯದಲ್ಲೇ ಸದ್ದಾಂ ಹುಸೇನ್ ರಾಜಾ ರಾಮಣ್ಣನವರಿಗೆ ಈ ಪ್ರಸ್ತಾಪವನ್ನು ಮಾಡಿದ್ದರು.
ಇದನ್ನೂ ಓದಿ: ಸಿನಿಮಾ ಹಾಲ್ ಜಿಮ್ ಕೇಂದ್ರವಲ್ಲ-ಸುಪ್ರೀಂಕೋರ್ಟ್
‘ನೀವು ನಿಮ್ಮ ರಾಷ್ಟ್ರಕ್ಕಾಗಿ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೀರಿ. ನೀವು ಮರಳಿ ಭಾರತಕ್ಕೆ ಹೋಗಬೇಡಿ. ನೀವು ಇರಾಕ್‌ನಲ್ಲೇ ಇದ್ದು, ನಮ್ಮ ನ್ಯೂಕ್ಲಿಯರ್ ಕಾರ್ಯಕ್ರಮದ ನಾಯಕತ್ವ ವಹಿಸಿಕೊಳ್ಳಿ. ನಿಮಗೆ ಬೇಕಾದಷ್ಟು ಹಣ ನಾನು ನೀಡುತ್ತೇನೆ’ ಎಂದಿದ್ದರು ಸದ್ದಾಂ ಹುಸೇನ್. ಈ ವಿಚಾರವನ್ನು ಸದ್ದಾಂಸ್ ಬಾಂಬ್ ಎಂಬ ಪುಸ್ತಕದಲ್ಲಿ ಬ್ರಿಟಿಷ್ ಪತ್ರಕರ್ತರಾದ ಶ್ಯಾಮ್ ಭಾಟಿಯಾ ಮತ್ತು ಡೇನಿಯಲ್ ಮೆಕ್‌ಗ್ರೋರಿ ದಾಖಲಿಸಿದ್ದಾರೆ.
ಸದ್ದಾಂ ಹುಸೇನ್ ಮಾತುಗಳನ್ನು ಕೇಳಿ ತಬ್ಬಿಬ್ಬಾದ, ಗಾಬರಿಗೊಂಡ ರಾಜಾ ರಾಮಣ್ಣನವರು ಅಲ್ಲಿ ನಿದ್ದೆಯನ್ನೂ ಕಳೆದುಕೊಂಡಿದ್ದರು. ಆಗ 53 ವರ್ಷ ವಯಸ್ಸಾಗಿದ್ದ ಅವರಿಗೆ ನಾನು ಮರಳಿ ಭಾರತವನ್ನು ನೋಡುತ್ತೇನೋ ಇಲ್ಲವೋ ಎಂಬುದುವೇ ದೊಡ್ಡ ಚಿಂತೆಯಾಗಿತ್ತು. ಅವರು ಮುಂದಿನ ಅವಕಾಶದಲ್ಲೇ ವಿಮಾನ ಟಿಕೆಟ್ ಖರೀದಿಸಿ ಭಾರತಕ್ಕೆ ಬಂದಿದ್ದರು.
ಬಹುಮುಖ ಪ್ರತಿಭೆಯ ರಾಜಾ ರಾಮಣ್ಣ
1925ರ ಜನವರಿ 28ರಂದು ಕರ್ನಾಟಕದ ತಿಪಟೂರಿನಲ್ಲಿ ಜನಿಸಿದ ರಾಜಾ ರಾಮಣ್ಣ ಸಾಕಷ್ಟು ಸ್ಥಿತಿವಂತ ಕುಟುಂಬದಿಂದ ಬಂದಿದ್ದರು. ಅವರ ತಂದೆ ಬಿ.ರಾಮಣ್ಣ ಅವರು ಮೈಸೂರು ರಾಜ್ಯದಲ್ಲಿ ನ್ಯಾಯಾಂಗ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರೋರ್ವ ಮೃದು ಹೃದಯದ ನ್ಯಾಯಾಧೀಶರೆಂದು ಹೆಸರಾಗಿದ್ದರು. ವಾವರ ತಾಯಿಯೂ ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದರು. ಅವರು ಸ್ವತಂತ್ರ, ಸ್ವಾವಲಂಬಿ ಮಹಿಳೆಯಾದರೂ, ಸಂಸ್ಕೃತಿ ಸಂಪ್ರದಾಯಗಳನ್ನು ಗೌರವಿಸುತ್ತಿದ್ದರು. ರಾಜಾ ರಾಮಣ್ಣನವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅವರ ತಂದೆ-ತಾಯಿಯವರೂ ಪ್ರಮುಖ ಪಾತ್ರ ವಹಿಸಿದ್ದರು.
ರಾಜಾ ರಾಮಣ್ಣ ತನ್ನ ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಪಡೆದರು. ಅಲ್ಲಿ ಅವರು ಬಿಶಪ್ ಕಾಟನ್ ಶಾಲೆ ಮತ್ತು ಸೈಂಟ್ ಜೋಸೆಫ್ ಶಾಲೆಗಳಲ್ಲಿ ಓದಿದ್ದರು. ಅವರು ಬಳಿಕ ಮದ್ರಾಸ್ ಕ್ರಿಸ್ಚಿಯನ್ ಕಾಲೇಜಿಗೆ ದಾಖಲಾಗಿ, ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಗಳಿಸಿದರು. ಬಳಿಕ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗಕ್ಕೆ ದಾಖಲಾದರು. ಡಾ. ಹೋಮಿ ಜಹಂಗೀರ್ ಭಾಬಾ ಅವರೊಡನೆ ರಾಜಾ ರಾಮಣ್ಣನವರ ಒಡನಾಟಕ್ಕೂ ಒಂದು ಸಂಗೀತದ ಹಿನ್ನೆಲೆಯಿದೆ. ಅವರಿಬ್ಬರಿಗೂ ಮಿತ್ರರಾದವರೊಬ್ಬರು 1944ರಲ್ಲಿ ಇಬ್ಬರಲ್ಲಿದ್ದ ಸಂಗೀತದ ಆಸಕ್ತಿಯ ಕಾರಣದಿಂದ, ಅದರಲ್ಲೂ ಖ್ಯಾತ ಸಂಗೀತಗಾರ ಮೊಜರ್ಟ್ ಮೇಲಿನ ಅಭಿಮಾನದ ಕಾರಣದಿಂದ ಭೇಟಿ ಮಾಡಿಸಿದ್ದರು.
ಇದನ್ನೂ ಓದಿ: Sonia Gandhi : ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು, ಯಾತ್ರೆ ಮದ್ಯಕ್ಕೆ ಕೈಬಿಟ್ಟು ಬಂದ ಪ್ರಿಯಾಂಕಾ!
ಈ ಭೇಟಿ ಅವರಿಬ್ಬರನ್ನೂ ಹತ್ತಿರವಾಗುವಂತೆ ಮಾಡಿತ್ತು. ಅದಾಗಿ 5 ವರ್ಷಗಳ ಬಳಿಕ ರಾಜಾ ರಾಮಣ್ಣನವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನಲ್ಲಿ ಉದ್ಯೋಗಕ್ಕೆ ಸೇರಿದರು. ಈ ಸಂಸ್ಥೆ ಭಾರತದ ಅಣು ಶಕ್ತಿ ಕಾರ್ಯಕ್ರಮದ ಕೇಂದ್ರವಾಗಿತ್ತು. ಡಾ.ಭಾಬಾ ಅವರ ಮಾರ್ಗದರ್ಶನದಲ್ಲಿ ರಾಜಾ ರಾಮಣ್ಣ ರಾಜಸ್ಥಾನದ ಪೋಖ್ರಾನ್‌ನಲ್ಲಿ ಮೇ 18, 1974ರಂದು ಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಿದರು.
ಸ್ಮೈಲಿಂಗ್ ಬುದ್ಧನ ಹಿಂದಿನ ಕಥೆ
ಮೇ 18ರ 1974ರಂದು ಡಾ.ರಾಜಾ ರಾಮಣ್ಣನವರು ಭಾರತದ ಮೊದಲ ಭೂಮಿಯಾಳದ ಅಣು ಬಾಂಬ್ ಸ್ಫೋಟ ಪ್ರಯೋಗವನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸಾಕಷ್ಟು ಟೀಕೆಗಳ ಹೊರತಾಗಿಯೂ, ಈ ಅಣ್ವಸ್ತ್ರ ಪರೀಕ್ಷೆ ಯಾರಿಗೂ ಹಾನಿಯುಂಟು ಮಾಡಲಿಲ್ಲ, ಹಾನಿ ಉಂಟುಮಾಡುವ ಉದ್ದೇಶವನ್ನೂ ಹೊಂದಿರಲಿಲ್ಲ. ಅದರ ಉದ್ದೇಶ ಜಗತ್ತಿಗೆ ಒಂದು ದೃಢವಾದ ಸಂದೇಶ ಕಳುಹಿಸುವುದಾಗಿತ್ತು. ಆದ್ದರಿಂದ ಇದನ್ನು 'ಶಾಂತಿಯುತ ಪರಮಾಣು ಸ್ಫೋಟ' ಎಂದು ಕರೆಯಲಾಯಿತು. ಅದಕ್ಕೆ ಒಂದು ಆಸಕ್ತಿಕರ ಕೋಡ್ ನೇಮ್ ಸಹ ನೀಡಲಾಗಿತ್ತು. ಈ ಸ್ಫೋಟ ಬುದ್ಧ ಜಯಂತಿಯ ದಿನ ನಡೆದ ಕಾರಣ, ‘ದ ಸ್ಮೈಲಿಂಗ್ ಬುದ್ಧ’ ಎಂದೇ ಕರೆಯಲಾಯಿತು!
ಆದರೆ ಆರಂಭಿಕ ಹಂತದಲ್ಲಿ ಇದೊಂದು ಅತ್ಯಂತ ರಹಸ್ಯ ಯೋಜನೆಯಾಗಿತ್ತು ಎಂದು ಅಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಆರ್.ಚಿದಂಬರಂ ಮೆಲುಕು ಹಾಕುತ್ತಾರೆ. 1998ರಲ್ಲಿ ನಡೆದ ಅಣು ಶಕ್ತಿ ವಿಭಾಗದ ಒಂದು ಸಂದರ್ಶನದಲ್ಲಿ ಚಿದಂಬರಂ ಅವರು ಎಲ್ಲವನ್ನೂ ಬರವಣಿಗೆಯಲ್ಲಿ ದಾಖಲು ಮಾಡದಿರುವುದು ರಹಸ್ಯ ಕಾಯ್ದುಕೊಳ್ಳುವ ಪ್ರಮುಖ ಹಂತ ಎಂದಿದ್ದರು. ಮುಂದಿನ ಹಂತದಲ್ಲಿ ಅರೆಕಾಲಿಕವಾಗಿ ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವುದಾಗಿತ್ತು. ಚಿದಂಬರಂ ಅವರ ಪ್ರಕಾರ, ಡಾ.ರಾಜಾ ರಾಮಣ್ಣನವರು 1966ರಲ್ಲಿ ಡಾ.ಹೋಮಿ ಜಹಾಂಗೀರ್ ಭಾಬಾ ಅವರ ನಿಧನಕ್ಕೂ ಮೊದಲೇ ಅಣ್ವಸ್ತ್ರ ಪರೀಕ್ಷೆ ಅಭಿವೃದ್ಧಿ ನಡೆಸುವ ಕುರಿತು ಚಿಂತಿಸಿದ್ದರು.
‘ಡಾ.ರಾಜಾ ರಾಮಣ್ಣನವರಿಗೆ ಪರೀಕ್ಷೆ ನಡೆಸಲು ಒಂದು ಬಾರಿ ಅನುಮತಿ ಸಿಕ್ಕ ಬಳಿಕ, ಮುಂದಿನ ಪ್ರಮುಖ ಕೆಲಸವೆಂದರೆ ಪ್ಲುಟೋನಿಯಂ ಸಾಗಿಸುವುದಾಗಿತ್ತು. ಅದನ್ನು ಮಿಲಿಟರಿ ಭದ್ರತೆಯ ಸಹಾಯದಿಂದ ಸ್ಥಳಾಂತರಿಸಲಾಯಿತು. ಅದನ್ನು ಏನೆಂದು ಹೇಳಿರದ ಪೆಟ್ಟಿಗೆಯಲ್ಲಿಟ್ಟು ಸಾಗಿಸಲಾಯಿತು. ಅಲ್ಲಿದ್ದ ಎಲ್ಲ ಜನರಿಗೂ ನಾನು ಮತ್ತು ರಾಯ್ ಯಾವಾಗಲೂ ಯಾಕೆ ಆ ಪೆಟ್ಟಿಗೆಯ ಬಳಿಯೇ ಇರುತ್ತೇವೆಂದು ಆಶ್ಚರ್ಯವಾಗಿತ್ತು. ನಾವು ಎಲ್ಲ ಉಪಕರಣಗಳೊಡನೆ ಪೋಖ್ರಾನ್ ತಲುಪಿದಾಗ ನಮ್ಮಲ್ಲಿದ್ದ ಆ ಉತ್ಸಾಹ ನನಗಿನ್ನೂ ನೆನಪಿದೆ’ ಎನ್ನುತ್ತಾರೆ ಚಿದಂಬರಂ.
ಇದನ್ನೂ ಓದಿ: Free Dish TV : 8 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಕೇಂದ್ರದಿಂದ ಉಚಿತ ಡಿಶ್ ಟಿವಿ
‘ಆಕಸ್ಮಿಕವಾಗಿ ನಾವು ಎಲ್ಲಾ ಸಿದ್ಧತೆಗಳನ್ನು ನಡೆಸಿದಾಗ ಧೂಳಿನ ಬಿರುಗಾಳಿಯೂ ಕಾಣಿಸಿಕೊಂಡಿತು. ಅದರಿಂದ ನಾವು ಕೆಲಕಾಲ ಗಾಬರಿಯಾಗಿದ್ದೆವು. ಆದರೆ ಅದು ನಮಗೆ ಸಹಕಾರಿಯೇ ಆಯಿತು. ಆ ಕಾರಣದಿಂದ ನಮ್ಮ ಕಾರ್ಯಾಚರಣೆ ಯಾವುದೇ ಬೇಹುಗಾರಿಕಾ ಉಪಗ್ರಹಗಳಿಗೆ ಕಾಣಲಿಲ್ಲ’ವೆಂದು ಚಿದಂಬರಂ ನೆನಪು ಮಾಡಿಕೊಳ್ಳುತ್ತಾರೆ.
ರಾಜಾ ರಾಮಣ್ಣ ಮತ್ತು ಸಂಗೀತ ಪ್ರೀತಿ
ರಾಜಾ ರಾಮಣ್ಣ ಅವರ ಸಂಗೀತ ಪ್ರೇಮ ಅವರು ಬಿಶಪ್ ಕಾಟನ್ ಶಾಲೆಯಲ್ಲಿ ಓದುತ್ತಿದ್ದಾಗ ಬೆಳಕಿಗೆ ಬಂದಿತಗ್ತು. ಸಂಗೀತದಲ್ಲಿ ಅವರ ಆಸಕ್ತಿಯನ್ನು ಗಮನಿಸಿದ ಶಿಕ್ಷಕರು ಅವರಿಗೆ ಪಿಯಾನೋ ನುಡಿಸಲು ಪ್ರೋತ್ಸಾಹಿಸಿದರು. ಅವರು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರೂ, ಅವರಿಗೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲೂ ಅಪಾರ ಆಸಕ್ತಿ ಇತ್ತು. ಡಾ.ರಾಜಾರಾಮಣ್ಣ ತನ್ನ ನಿವೃತ್ತಿಯ ನಂತರ ಸಾಕಷ್ಟು ಸಾರ್ವಜನಿಕ ಸಂಗೀತ ಕಚೇರಿಗಳನ್ನು ನಡೆಸಿದ್ದರು. ಅವರು ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್ ಜೊತೆ ಸಂಪರ್ಕ ಹೊಂದಿ, ಹಲವು ಪ್ರತಿಭಾವಂತ ಯುವ ಸಂಗೀತಗಾರರನ್ನು ಬೆಂಬಲಿಸಿದ್ದರು. ‘ದ ಸ್ಟ್ರಕ್ಚರ್ ಆಫ್ ಮ್ಯೂಸಿಕ್ ಇನ್ ರಾಗ ಆ್ಯಂಡ್ ವೆಸ್ಟರ್ನ್ ಸಿಸ್ಟಮ್’ ಎಂಬ ಅವರ ಕೃತಿ ಸಂಗೀತದ ಕುರಿತ ಅವರ ಪ್ರೀತಿಯನ್ನು ತೋರಿಸುತ್ತಿತ್ತು.
ಪ್ರಶಸ್ತಿ ಮತ್ತು ಮನ್ನಣೆ
ರಾಜಾ ರಾಮಣ್ಣ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ 1963ರಲ್ಲಿ ಲಭಿಸಿತು. 1968ರಲ್ಲಿ ಪದ್ಮಶ್ರೀ, 1973ರಲ್ಲಿ ಪದ್ಮ ಭೂಷಣ ಹಾಗೂ 1975ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಅವರಿಗೆ ಪ್ರದಾನ ಮಾಡಲಾಯಿತು. ಅವರು 1990ರ ವಿ.ಪಿ.ಸಿಂಗ್ ಸರ್ಕಾರದಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿ ನೇಮಕಗೊಂಡರು. 1997ರಲ್ಲಿ ಅವರು ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು.
ರಾಜಾ ರಾಮಣ್ಣನವರು ಸೆಪ್ಟೆಂಬರ್ 24ರ 2004ರಂದು 79ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಹೃದಯ ಸ್ತಂಭನದಿಂದ ದೈವಾಧೀನರಾದರು. ಪರಮಾಣು ಭೌತಶಾಸ್ತ್ರ ವಿಭಾಗದಲ್ಲಿ ಅವರ ಕಾರ್ಯಗಳಿಗೆ, ಸಾಧನೆಗಳಿಗೆ ಭಾರತ ಸದಾ ಅವರಿಗೆ ಕೃತಜ್ಞವಾಗಿರುತ್ತದೆ. ಅವರ ನಿಧನದ ಬಳಿಕವೂ, ವಿಜ್ಞಾನ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಅವರ ಕೊಡುಗೆಗಳು ಭಾರತವನ್ನು ಅಭಿವೃದ್ಧಿ ಹೊಂದಿದ ನಾಳೆಗಳ ಕಡೆ ಕರೆದೊಯ್ಯುತ್ತಿದೆ.
ಡಾ.ರಾಜಾ ರಾಮಣ್ಣನವರನ್ನು ತನ್ನ ಗುರು, ಫಿಲಾಸಫರ್ ಹಾಗೂ ಗೆಳೆಯ ಎಂದು ಗೌರವಿಸುವ ಆಗಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ರಾಜಾ ರಾಮಣ್ಣನವರ ಆರೋಗ್ಯ ಕೆಟ್ಟಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಔರಂಗಾಬಾದ್‌ನಿಂದ ಮುಂಬೈಗೆ ಗುರುವಾರ ರಾತ್ರಿ ಧಾವಿಸಿದ್ದರು. ಆಸ್ಪತ್ರೆಯ ಮೂಲಗಳ ಪ್ರಕಾರ, ರಾಷ್ಟ್ರಪತಿ ಕಲಾಂ ಅವರು ರಾಜಾ ರಾಮಣ್ಣನವರ ಬಳಿ 10 ನಿಮಿಷಗಳ ಕಾಲ ನಿಂತು, ಅವರ ಆರೋಗ್ಯ ಚೇತರಿಕೆಗಾಗಿ ಮೌನವಾಗಿ ಪ್ರಾರ್ಥನೆ ಸಲ್ಲಿಸಿದ್ದರು.
✍ ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.