ಬಾಗಲಕೋಟೆ: ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ನೀಡಲಾಗುತ್ತಿರುವ ಸಂಯಮ 2021 & 2022ರ ವರ್ಷದ ಪ್ರಶಸ್ತಿಯನ್ನು ಬೀದರ ಜಿಲ್ಲೆ ಬಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಮತ್ತು ಮೈಸೂರಿನ ಬಸವ ಮಾರ್ಗ ಫೌಂಡೇಶನ್ ಮುಖ್ಯಸ್ಥ ಬಸವರಾಜು ಎಸ್ ಅವರಿಗೆ ಬುಧವಾರ ಪ್ರಧಾನ ಮಾಡಲಾಯಿತು.
ಜಿಲ್ಲೆಯ ಇಲಕಲ್ಲ ನಗರದ ಕಂಠಿ ಸರ್ಕಲ್ ಹತ್ತಿರವಿರುವ ಚಿತ್ತರಗಿ ವಿಜಯ ಮಹಾಂತೇಶ ಶಿವಯೋಗಿಗಳ ಅನುಭವ ಮಂಟಪದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಹಮ್ಮಿಕೊಂಡ ಸಂಯಮ 2021 & 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 1 ಲಕ್ಷ ರೂ.ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ 2021ನೇ ಸಾಲಿನ ಸಂಯಮ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಗುರುಗಳು ಹಾಕಿಕೊಟ್ಟ ಮಾರ್ಗದಿಂದ ಅನೇಕ ಜನರ ಹತ್ತಿರವಿರುವ ದುರ್ಗುಣ, ದುಶ್ಚಟಗಳನ್ನು ಬಿಡಿಸುವ ಕಾರ್ಯ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಆಗ ಪ್ರಚಾರ ಇರಲಿಲ್ಲ. ಮಾದ್ಯಮದವು ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿದ್ದರಿಂದ ಸರಕಾರ ನಮ್ಮನ್ನು ಗುರುತಿಸಿ ಆಯ್ಕೆ ಮಾಡಿ ಸಂಯಮ ಪ್ರಶಸ್ತಿಯನ್ನು ನೀಡಿದ್ದಾರೆ ಎಂದರು.
ಬೀದರ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಜೋಳಿಗೆ ಹಿಡಿದು ನಮಗೆ ಜೋಳ, ಬೇಳೆ, ದುಡ್ಡು ಬೇಡ ಅದರ ಬದಲಿಗೆ ನಿಮ್ಮಲ್ಲಿರುವ ದುರ್ಗುಣ, ದುಶ್ಚಟಗಳನ್ನು ಈ ಜೋಳಿಗೆ ಹಾಕಿರಿ ಎಂದಾಗ ತಮ್ಮಲ್ಲಿರುವ ದುಶ್ಚಟಗಳನ್ನು ಬಿಟ್ಟು ಪರಿವರ್ತನೆಯಾಗಿದ್ದಾರೆ. ನಂತರ ಅವರ ಮನೆ ಬೆಳಗಿರುವದನ್ನು ಕಂಡು ಸ್ಪೂರ್ತಿ ತುಂಬಿದಾಗ ಮತ್ತಷ್ಟು ಊರುಗಳಿಗೆ ತೆರಳಲಾಯಿತು. ಪ್ರಶಸ್ತಿಯನ್ನು ಪಡೆದುಕೊಂಡ ಮೇಲೆ ಜವಾಬ್ದಾರಿ ಸಹ ಹೆಚ್ಚಾಗಿದ್ದು, ವಿದ್ಯಾರ್ಥಿಗಳಲ್ಲಿ ಬಹಷ್ಟು ದುಶ್ಚಟಗಳಿವೆ. ಕ್ಲಬ್, ರಸ್ತೆಗಳಲ್ಲಿ ಬಿಟ್ಟು ಜೀವ ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ಸರಿ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ ಎಂದರು.
ಇದನ್ನೂ: ಮದ್ಯ ಖರೀದಿ ವಯಸ್ಸಿನ ಮಿತಿ ಕಡಿತ; ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ
ನಮ್ಮ ಮುಂದಿನ , ಸಂಕಲ್ಪ, ಉದ್ದೇಶವೇನೆಂದರೆ, ವಿಶ್ವವಿದ್ಯಾಲಯಗಳಲ್ಲಿ ಇಂಜಿನೀಯರಿಂಗ್, ವೈದ್ಯಕೀಯ, ಪದವಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ದುಶ್ಚಟಗಳಿದ್ದು, ಅವರನ್ನು ಸಹ ಪರಿವರ್ತಿಸಬೇಕಾಗಿದೆ. ನಮ್ಮ ರಾಜ್ಯ ಇತಿಹಾಸ, ಪರಂಪರೆ, ಸಂಸ್ಕøತಿಯಿಂದ ಕೂಡಿದ್ದು, ಸರಕಾರ ವ್ಯಸನಮುಕ್ತ ರಾಜ್ಯವನ್ನಾಗಿ ಘೋಷಣೆ ಮಾಡಿ, ದುಶ್ಚಟಗಲನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ ಎಂದರು.
2022ನೇ ಸಾಲಿನ ಸಂಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೈಸೂರಿನ ಬಸವ ಮಾರ್ಗ ಫೌಂಡೇಶನ್ ಮುಖ್ಯಸ್ಥ ಬಸವರಾಜು ಎಸ್ ಅವರು ಮೊದಲು ನಾನು ಕೂಡಾ ವ್ಯಸನಿಯಾಗಿದ್ದು, ಇದರಿಂದ ಹೊರಬಂದು ನನ್ನಂತ ವ್ಯಸನಿಗಳನ್ನು ಪರಿವರ್ತಿಸುವ ನಿಟ್ಟಿನಲ್ಲಿ ಬಸವ ಮಾರ್ಗ ಫೌಂಡೇಶನ್ ಪ್ರಾರಂಭಿಸಿ ಅದರ ಮೂಲಕ ವ್ಯಸನಿಗಳನ್ನು ಪರಿವರ್ತನೆ ಮಾಡಿ ಬೆಳೆಕಿಗೆ ತರಲಾಗುತ್ತಿದೆ. ಇಲ್ಲಿವರೆಗೆ 1700 ಜನರನ್ನು ವ್ಯಸನದಿಂದ ಮುಕ್ತಗೊಳಿಸಲಾಗಿದೆ. ಇದರಿಂದ ಉತ್ತಮ ಜೀವನ, ರಾಜ್ಯ ಕಟ್ಟಬಹುದಾಗಿದೆ ಎಂದರು.
ಇದನ್ನೂ ಓದಿ: Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು, ಶಿರೂರಿನ ಬಸವಲಿಂಗ ಶ್ರೀ ಹಾಗೂ ಇಲಕಲ್ಲ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರು ಮಹಾಂತ ಶ್ರೀಗಳು ಆಶೀರ್ವಚನ ನೀಡಿದರು, ಪ್ರಾರಂಭದಲ್ಲಿ ರಾಜ್ಯ ಸಂಯಮ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜು ತುಬಾಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಿಂಗಸೂರಿನ ಸಿದ್ದಲಿಂಗ ಶ್ರೀಗಳು, ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ, ಎಸ್ವಿಎಂ ಸಂಘದ ಚೇರಮನ್ ಎಂ.ವಿ.ಪಾಟೀಲ, ಸಿಎಸ್ವಿಎಂ ಸಂಘದ ಚೇರಮನ್ ಶ್ರೀಕಾಂತ ಹರಿಹರ, ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎಸ್.ಶಂಕರಪ್ಪ, ರಾಜ್ಯ ಮಾವು ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕ ಜಿ.ಎಸ್.ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.