ಕೊಪ್ಪಳ: ಹೊಸಪೇಟೆ-ಹಂಪಿ-ಗಂಗಾವತಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸಂಬಂಧಿಸಿದಂತೆ ಕಾರ್ಯ ಸಾಧ್ಯತಾ ಅಧ್ಯಯನ, ಸಮಗ್ರ ಯೋಜನಾ ವರದಿ ತಯಾರಿಕೆ ಕುರಿತು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಚರ್ಚೆ ನಡೆಯಿತು. ಹಿಂದುಳಿದ ಪ್ರದೇಶದ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತಂತೆ ಹೊಸಪೇಟೆ, ಹಂಪಿ ಹಾಗೂ ಗಂಗಾವತಿ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ಕುರಿತಂತೆ ಕಾರ್ಯ ಸಾಧ್ಯತಾ ಅಧ್ಯಯನ ಹಾಗೂ ಸಮಗ್ರ ಯೋಜನಾ ವರದಿ ತಯಾರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್.ಹೆಚ್.ಎ.ಐ)ದಿಂದ ಸಭೆ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ ಅವರು ಮಾತನಾಡಿ, ಹಿಂದುಳಿದ ಪ್ರದೇಶದ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೊಸಪೇಟೆ, ಹಂಪಿ ಹಾಗೂ ಗಂಗಾವತಿ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬರುವ ಅರಣ್ಯ ಇಲಾಖೆಗೆ ಸೇರಿದ ಕಾಯ್ದಿಟ್ಟ ಅರಣ್ಯ ಪ್ರದೇಶಗಳ ಬಗ್ಗೆ ಅರಣ್ಯ, ಲೋಕೋಪಯೋಗಿ ಇಲಾಖೆ ಹಾಗೂ ಎನ್.ಹೆಚ್.ಎ.ಐ ಯಿಂದ ಪುನಃ ಸರ್ವೇ ಕಾರ್ಯ ಕೈಗೊಳ್ಳಬೇಕು.ಇದ್ದಕ್ಕಾಗಿ ಅರಣ್ಯ ಪ್ರದೇಶವನ್ನು ಆದಷ್ಟು ಕಡಿಮೆ ಬಳಕೆ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿ ಹತ್ತಿರ ಬೈಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಹೊಸಪೇಟೆ, ಹಂಪಿ ಯಿಂದ ಗಂಗಾವತಿ ವರೆಗೆ ಸಂಪರ್ಕ ಕಲ್ಪಿಸುವ ಈ ಹೊಸ ಎನ್.ಹೆಚ್ ಮಾರ್ಗದ ನಿರ್ಮಾಣದಿಂದ ಈ ಭಾಗದ ಸಾರ್ವಜನಿಕರಿಗೆ, ಪ್ರವಾಸಿಗಳಿಗೆ ಹಾಗೂ ವಿಶೇಷವಾಗಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿರುವ ಭಕ್ತಾಧಿಗಳಿಗೆ ತುಂಬಾ ಅನುಕೂಲವಾಗಲಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೈಜೋಡಿಸಿದ್ದು, ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಿದರು.
ಅಂಜನಾದ್ರಿ ಬೆಟ್ಟದ ಮಾರ್ಗವಾಗಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾಪ:
ಹೊಸಪೇಟೆ-ಹಂಪಿ-ಗಂಗಾವತಿ ಚತುಷ್ಪಥ ರಸ್ತೆಯನ್ನು ಹೊಸಪೇಟೆ-ಹಂಪಿಯಿಂದ ಹಿಟ್ನಾಳ್ ಕ್ರಾಸ್ ಮೂಲಕ ಅಂಜನಾದ್ರಿ ಬೆಟ್ಟ, ಗಂಗಾವತಿಯವರೆಗೆ ನಿರ್ಮಾಣ ಮಾಡುವ ಬಗ್ಗೆ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತದಿಂದ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಈ ಬಾರಿ ಬಿಜೆಪಿ ಸೋಲಿಸಿ ಜನರು ಮತ್ತೆ ಕಾಂಗ್ರೆಸ್‍ಗೆ ಮತ್ತೆ ಆಶೀರ್ವಾದ ಮಾಡಲಿದ್ದಾರೆ: ಸಿದ್ದರಾಮಯ್ಯ
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ತ್ರಿವೇದಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಆರ್.ಎಸ್ ಕಡಿವಾಳ್, ಎನ್.ಹೆಚ್.ಎ.ಐ ಯೋಜನಾ ನಿರ್ದೇಶಕರಾದ ವಿ.ಸುರೇಶ್ ರಾಜು, ಸಮಾಲೋಚಕರಾದ ಸಿ.ಪಿ ತಿವಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.