ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅನೇಕ ಪ್ರಮುಖ ನಾಯಕರು ಶುಕ್ರವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಹಿರಿಯ ನಾಯಕರು ಜೆಡಿಎಸ್ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು. ಕಾರವಾರದ ಚೈತ್ರ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ದಿವ್ಯಪ್ರಭಾ ಗೌಡ, ಸಲಾಂ ವಿಟ್ಲ ಸೇರಿದಂತೆ ನೂರಾರು ಪ್ರಮುಖ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದನ್ನೂ ಓದಿ: Karnataka Election 2023: JDS ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಭವಾನಿಗೆ ಕೈತಪ್ಪಿದ ಟಿಕೆಟ್!
ಜೆಡಿಎಸ್ ಸೇರ್ಪಡೆಯಾದ ನಂತರ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ‘ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನ ದೊಡ್ಡ ಪ್ರಮಾಣದಲ್ಲಿ ನಾಯಕರು ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಮ್ಮ ಪಕ್ಷದ ಶಕ್ತಿ ಏನು ಎಂಬುದು ಎಲ್ಲರಿಗೂ ಮನವರಿಕೆ ಆಗುತ್ತಿದೆ’ ಎಂದರು.
ಈ ಚುನಾವಣೆಗೆ ಇಂದು ನಡೆದ ಪಕ್ಷ ಸೇರ್ಪಡೆ ಒಂದು ದಿಕ್ಸೂಚಿಯಾಗಿದೆ. ಕಲ್ಬುರ್ಗಿ, ಕಾರವಾರ, ಮಂಗಳೂರು, ಚಿತ್ರದುರ್ಗ ಜಿಲ್ಲೆಗಳ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮಗೆ ಶಕ್ತಿ ಇಲ್ಲವೆಂದು ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದರು. ಆ ಭಾಗದಲ್ಲಿ ಕನಿಷ್ಠ 25-30 ಸ್ಥಾನ ಅಲ್ಲಿ ಗೆಲ್ಲುತ್ತೇವೆಂದು ಹೇಳಲಾಗುತ್ತಿತ್ತು. ಈಗ ನೋಡಿದರೆ 40 ಸ್ಥಾನದ ಮೇಲೆ ಗೆದ್ದರೂ ಆಶ್ಚರ್ಯವಿಲ್ಲ. ಪಕ್ಷವನ್ನು ಸಧೃಡ ಮಾಡಲು ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ಇದರ ಮೂಲಕ ಫಲ ದೊರಕುತ್ತಿದೆ ಎಂದು ಎಚ್ಡಿಕೆ ಹೇಳಿದರು.
ಇದನ್ನೂ ಓದಿ: ಭವಾನಿ ರೇವಣ್ಣಗಿಲ್ಲ ಹಾಸನ್ ಟಿಕೆಟ್...!
ಇವತ್ತು ಸೇರ್ಪಡೆ ಆದವರನ್ನು ನಾನು ಕಾಂಗ್ರೆಸ್, ಬಿಜೆಪಿಯವರು ಎಂದು ಹೇಳಲ್ಲ. ಏಕೆಂದರೆ ಅವರೆಲ್ಲಾ ಒಂದಲ್ಲ ಒಂದು ಕಡೆ ಜೆಡಿಎಸ್ ಪರಿವಾರಕ್ಕೆ ಸೇರಿದವರೇ. 2023ಕ್ಕೆ ಜನತಾ ದಳವನ್ನು ಜನರು ಬೆಂಬಲಿಸಲಿದ್ದಾರೆ. 123 ಕ್ಷೇತ್ರಗಳ ಗುರಿ ಇಟ್ಟು ಹೊರಾಟ ಮಾಡುತ್ತಿದ್ದೇವೆ. ಇನ್ನೂ ಅನೇಕರು ಪಕ್ಷಕ್ಕೆ ಬರುವವರಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ;ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾನು ಮೊದಲೇ ಹೇಳಿದ್ದೇ, ಬೇರೆ ಪಕ್ಷಗಳ ನಾಯಕರು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ಪಕ್ಷ ಸೇರುತ್ತರೆಂದು. ಈಗ ಆ ಮಾತು ಸತ್ಯವಾಗಿದೆ’ ಎಂದರು. ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.