Karnataka Assembly Election 2023: ಆತ ನಿಜಕ್ಕೂ ಕಮಲ ಎಂಬ ಹೂವನ್ನು ಹಚ್ಚಿ ಬೆಳೆಸಿ ರಾಜಕೀಯ ಕೃಷಿ ಮಾಡಿದ ಹಿರಿಯ ನಾಯಕ. ತಾನು ಬೆಳೆಸಿದ ಮನೆಯಿಂದಲೇ ಈಗ ಹೊರಬಂದು ಹೊಸ ಮನೆಯ ಅತಿಥಿಯಾಗಿದ್ದಾನೆ. ಮೈಮೇಲೆ ತೊಟ್ಟ ಬಟ್ಟೆಯಂತೆಯೇ ಹೂವನ್ನು ಬಿಟ್ಟು ಕೈ ಹಿಡಿದು ಬಂದವನ ಆಗಮನಕ್ಕೆ ಕಣ್ಣೀರ ಸ್ವಾಗತವೇ ನಡೆದು ಹೋಯಿತು. ಅಷ್ಟಕ್ಕೂ ಏನಿದು ಸ್ಟೋರಿ..? ಯಾಕೇ ಈ ಕಣ್ಣೀರು ಅಂತೀರಾ ಮುಂದೆ ಓದಿ...
ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಬಿಜೆಪಿ ಕಟ್ಟಿ ಬೆಳೆಸಿರುವ ನಾಯಕ ಜಗದೀಶ್ ಶೆಟ್ಟರ್. ಬಿಜೆಪಿಗಾಗಿಯೇ ಸಾಕಷ್ಟು ಶ್ರಮವಹಿಸಿದ್ದ ನಾಯಕ. ಈಗ ರಾಜಕೀಯದಲ್ಲಿ ಕರ್ಣನ ಪಾತ್ರಕ್ಕೆ ಬಂದು ನಿಲ್ಲುವಂತಾಗಿದೆ. ಹೌದು... ತನಗಾಗಿ ಅಲ್ಲದೇ ಇದ್ದರೂ ರಾಜ್ಯದಲ್ಲಿ ಬಿಜೆಪಿ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮವಹಿಸಿದ ನಾಯಕ ಜಗದೀಶ್ ಶೆಟ್ಟರ್. ಆರು ಬಾರಿ ಶಾಸಕರಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದವರು. ಆದರೆ ಗೆಲ್ಲುವ ಕುದುರೆ ಕಟ್ಟಿ ಹಾಕಲು ಬಿಜೆಪಿ ಹುನ್ನಾರ ನಡೆಸಿದ ಬೆನ್ನಲ್ಲೇ ಈಗ ಜಗದೀಶ್ ಶೆಟ್ಟರ್ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಹೊರಹೊಮ್ಮಿದ್ದಾರೆ. ಈಗ ಕಾಂಗ್ರೆಸ್ ವಲಯದಲ್ಲಿ ನೂರಾನೆ ಬಲ ಬಂದಿದ್ದರೂ ಕೂಡ ಮನೆಯಲ್ಲಿ ಮಾತ್ರ ಕಣ್ಣೀರ ಸ್ವಾಗತ, ನೀರವಮೌನ. ದುಡಿಸಿಕೊಂಡ ಮನೆ ಹೊರದೂಡಿದ ವಾತಾವರಣದಲ್ಲಿ ಶೆಟ್ಟರ್ ಕುಟುಂಬ ಕಣ್ಣೀರು ಹಾಕಿರುವುದು ನಿಜಕ್ಕೂ ಕಣ್ಣಂಚಿನಲ್ಲಿ ನೀರು ಬರಿಸುವಂತಿದೆ. ಶೆಟ್ಟರ್ ಟಿಕೆಟ್ ತಪ್ಪಿಸಲು ಷಡ್ಯಂತ್ರವೇ ನಡೆದಿದೆಯಂತೆ.
ಇದನ್ನೂ ಓದಿ- Karnataka Election 2023: ಭೋವಿ ಸಮುದಾಯದಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ!
ಇನ್ನು ದೊಡ್ಡ ಸಂಖ್ಯೆಯಲ್ಲಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಜಗದೀಶ್ ಶೆಟ್ಟರ್ ಅವರ ಬೆಂಬಲಿಗರನ್ನು ಕಟ್ಟಿ ಹಾಕಲು ಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ವಿಮಾನ ನಿಲ್ದಾಣದ ಸ್ವಾಗತಕ್ಕೆ ಬಾರದಂತೆ ಕಟ್ಟಿಹಾಕಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎಂಟ್ರಿ ಕೊಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ಬಹು ದೊಡ್ಡ ಹೊಡೆತ ಬೀಳಲಿದೆ. ಉತ್ತರ ಕರ್ನಾಟಕದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಲಿಂಗಾಯತ ನಾಯಕರು ಜಗದೀಶ್ ಶೆಟ್ಟರ್ ಅಭಿಮಾನಿಗಳು ಪಕ್ಷ ತೊರೆಯುವ ಭೀತಿ ಕಾಡುತ್ತಿದೆ. ಇದಕ್ಕೆ ಮುಲಾಮು ಹಚ್ಚಲು ಕಮಲ ಕಲಿಗಳು ರಾಷ್ಟ್ರೀಯ ಅಧ್ಯಕ್ಷರನ್ನೇ ಕರೆತರಲು ಮುಂದಾಗಿದ್ದಾರೆ. ಎರಡೂ ದಿನಗಳು ಹುಬ್ಬಳ್ಳಿಯಲ್ಲಿಯೇ ಬೀಡು ಬಿಡಲಿರುವ ಅವರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಶೆಟ್ಟರ್ ಸ್ಪರ್ಧೆ ಮಾಡುವ ಸೆಂಟ್ರಲ್ ಕ್ಷೇತ್ರದಲ್ಲಿಯೇ ನಡ್ಡಾ ಆರ್ಭಟ ಮಾಡಲಿದ್ದಾರೆ.
ಇದನ್ನೂ ಓದಿ- Karnataka Election 2023: ಸುಡಾನ್ನಲ್ಲಿ ಸಿಲುಕಿರುವ ಹಕ್ಕಿ ಪಿಕ್ಕಿ ಜನರ ರಕ್ಷಣೆಗೆ ಸಿದ್ದರಾಮಯ್ಯ ಆಗ್ರಹ
ಒಟ್ಟಿನಲ್ಲಿ ಶೆಟ್ಟರ್ ಕಟ್ಟಿ ಹಾಕಲು ಶತಾಯು ಗತಾಯು ಹೋರಾಟ ನಡೆಸಿದ್ದು, ಕಾಂಗ್ರೆಸ್ ಮೂಲಕವೇ ಬಿಜೆಪಿಗೆ ತೊಡೆ ತಟ್ಟಿ ನಿಲ್ಲಲು ಮುಂದಾಗಿದ್ದಾರೆ. ಹಾಗಿದ್ದರೇ ಜಗದೀಶ್ ಶೆಟ್ಟರ್ ಕಾರ್ಯವೈಖರಿ ಹಾಗೂ ಕಾಂಗ್ರೆಸ್ ಪಾಳೆಯದಲ್ಲಿ ಶೆಟ್ಟರ್ ಅಬ್ಬರ ಹೇಗಿರುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.