ಬೆಂಗಳೂರು: ಸ್ಪೀಕರ್ ಹೆಸರು ಉಲ್ಲೇಖಿಸಿರುವ ಆಡಿಯೋ ಸಂಭಾಷಣೆ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ವಹಿಸುವ ನಿರ್ಧಾರ ಮರುಪರಿಶೀಲನೆಗೆ ಬಿಜೆಪಿ ಪಟ್ಟು ಹಿಡಿದಿದ್ದು, ಎರಡನೇ ದಿನವಾದ ಮಂಗಳವಾರ ಕೂಡ ಸದನದಲ್ಲಿ ದಿನವಿಡೀ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ "ಆಡಿಯೋ ಮೇಲಿನ ಚರ್ಚೆ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯಂತಾಗಿದೆ ನನ್ನ ಕಥೆ" ಎಂದು ಹೇಳಿದ್ದಾರೆ.
ಆಪರೇಶನ್ ಆಡಿಯೋದಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸ್ಪೀಕರ್ ರಮೇಶ್ ಕುಮಾರ್ ಹೆಸರು ಪ್ರಸ್ತಾಪ ಆಗಿರೋ ಬಗ್ಗೆ ಮಂಗಳವಾರ ಸಹ ಸದನದಲ್ಲಿ ಚರ್ಚೆ ನಡೆಯಿತು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪೀಕರ್ ರಮೇಶ್ ಕುಮಾರ್ ರವರ ಗುಣಗಾನ ಮಾಡುತ್ತಾ, "ನಿಮ್ಮ ಹೆಸರನ್ನು ಬೀದಿಗೆ ತಂದಿದ್ದೇ ಸಿಎಂ ಹೆಚ್.ಡಿ.ಕುಮಾರಸ್ವಾಮಿ" ಅಂದರು. ಮಧ್ಯಪ್ರವೇಶ ಮಾಡಿದ ಸ್ಪೀಕರ್ ರಮೇಶ್ ಕುಮಾರ್, "ನನ್ನ ಕಥೆ ಅತ್ಯಾಚಾರಕ್ಕೊಳಗಾದವರ ಸ್ಥಿತಿಯಂತಾಗಿದೆ. ಟೇಪ್ನಲ್ಲಿ ಒಮ್ಮೆ ಹೆಸರು ಹೇಳಿ ಅತ್ಯಾಚಾರ ಮಾಡಿದವನು ಹೊರಗೆ ಹೋಗಿದ್ದಾನೆ. ಈಗ , ನೀವು ಎರಡೂ ಕಡೆಯವರು ನೀವು ಹಣ ಪಡೆದಿದ್ದೀರಿ, ಹಣ ಪಡೆದಿದ್ದೀರಿ ಎಂದು ಪದೇ ಪದೇ ಪ್ರಸ್ತಾಪ ಮಾಡುತ್ತಿರುವುದರಿಂದ "ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ
ಕೋರ್ಟ್ ಮುಂದೆ ಹಾಜರಾದಾಗ ಯಾರು ರೇಪ್ ಮಾಡಿದ್ದು ? ಯಾವಾಗ ರೇಪ್ ಮಾಡಿದ್ದು ? ಹೇಗೆ ಮಾಡಿದರು ? ಎಷ್ಟು ಸಾರಿ ಮಾಡಿದರು ಎಂದು ಪ್ರಶ್ನಿಸುವಂತೆ ನನ್ನ ಪರಿಸ್ಥಿತಿಯೂ ಆಗಿದೆ". ಹಾಗೆ ಎರಡೂ ಕಡೆಯವರು ಸೇರಿ ನನ್ನನ್ನು ರೇಪ್ ಮಾಡ್ತಾ ಇದ್ದಾರೆ. ಇದಕ್ಕಿಂತ ಐವತ್ತು ಕೋಟಿ ಆರೋಪನೇ ಒಳ್ಳೆಯದಿತ್ತು. ನಿಮ್ಮಿಂದ ದಿನಾ ರೇಪ್ ಮಾಡಿಸಿಕೊಳ್ಳುವ ತೊಂದರೆ ಯಾರಿಗೆ ಬೇಕು ಎಂದರು.