ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಚದುರಂಗದ ಮಾಸ್ಟರ್ ಶರದ್ ಪವಾರ್ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಎನ್ಸಿಪಿ ನಾಯಕ ಶರದ್ ಪವಾರ್ ಅವರು ನನ್ನ ಕುಟುಂಬದ ಇಬ್ಬರು ಸದಸ್ಯರು ಈಗಾಗಲೇ ಸ್ಪರ್ಧಿಸುತ್ತಿದ್ದಾರೆ. ಅದಕ್ಕಾಗಿಯೇ ನಾನು ಚುನಾವಣಾ ಕಣದಿಂದ ಹೊರಗಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಹೇಗಾದರೂ, ನಾನು 14 ಬಾರಿ ಮೊದಲು ಚುನಾವಣೆ ಎದುರಿಸಿದ್ದೇನೆ ಎಂದಿದ್ದಾರೆ.
ಪವಾರ್ ಅವರು ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಈ ಮೊದಲೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು, ಆದರೆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಇದೀಗ ಮತ್ತೊಮ್ಮೆ ತಮ್ಮ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ, ಶರದ್ ಪವಾರ್ ಪ್ರಧಾನಿ ಆಕಾಂಕ್ಷಿಯಾಗಿದ್ದರು ಎನ್ನಲಾಗುತ್ತಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪವಾರ್, ತಾವು ಯಾವುದೇ ಉನ್ನತ ಹುದ್ದೆಯ ಆಕಾಂಕ್ಷಿಯಲ್ಲ ಎಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರ ಎನ್ಸಿಪಿ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. ತಮ್ಮ ಪಕ್ಷವು ಬಿಜೆಪಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿ ಒಗ್ಗೂಡಬೇಕೆಂದು ಪವಾರ್ ಹೇಳಿದ್ದಾರೆ. ಕೇಸರಿ ಪಕ್ಷದ ವಿರುದ್ಧ ಹೋರಾಡಲು ಒಂದೇ ರೀತಿಯ ಸಿದ್ಧಾಂತವನ್ನು ಹೊಂದಿರುವ ಎಲ್ಲ ಪಕ್ಷಗಳನ್ನು ಒಂದಾಗಬೇಕೆಂದು ಹೇಳಿದ್ದಾರೆ.