ಬೆಂಗಳೂರು : ಸ್ಥಗಿತಗೊಂಡಿರುವ ಕಾಮಗಾರಿ ಪುನರಾರಂಭದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ನಾನು ಎಲ್ಲಾ ಯೋಜನೆ ಡಬಲ್ ಚೆಕ್ ಮಾಡಿಸುತ್ತೇನೆ. ಕಾಮಗಾರಿ ಅಂದಾಜು ಪರಿಶೀಲನೆ ಮಾಡಿಸುತ್ತೇನೆ. ಎಲ್ಲವೂ ಸರಿಯಾಗಿದ್ದರೆ ಮಾತ್ರ ಪುನರಾರಂಭವಾಗಲಿದೆ. ಈ ವಿಚಾರವಾಗಿ ನಾನು ಚುನಾವಣೆಗೂ ಆರು ತಿಂಗಳು ಮುಂಚಿತವಾಗಿ ಎಚ್ಚರಿಕೆ ನೀಡಿದ್ದೆ. ಯಾರು ಎಷ್ಟಾದರೂ ಕೂಗಿಕೊಳ್ಳಲಿ ನಾವು ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ' ಎಂದು ಹೇಳಿದರು.
ಬ್ರಾಂಡ್ ಬೆಂಗಳೂರು ವಿಚಾರವಾಗಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ದಂಧೆಗೆ ರೇಟ್ ಫಿಕ್ಸ್ ಆಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ಅವರು ತಡ ಮಾಡದೇ ಲೋಕಾಯುಕ್ತಕ್ಕೆ ದೂರು ನೀಡಲಿ’ ಎಂದು ತಿಳಿಸಿದರು.
ಟೆಂಡರ್ ಸ್ಥಗಿತಗೊಳಿಸಿರುವ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಅವರು ಜೋರಾಗಿ ಟೀಕೆ ಮಾಡಲು ಹೇಳಿ. ಎಲ್ಲವನ್ನು ಬಿಚ್ಚಿಡುತ್ತೇನೆ. ನಾನು ಅವರ ಸಲಹೆ ಕೇಳುತ್ತಿದ್ದೇನೆ. ಆರ್ ಆರ್ ನಗರದಲ್ಲಿ ಯಾವುದೇ ಕೆಲಸ ಮಾಡದೇ 123 ಕೋಟಿ ಬಿಲ್ ಪಡೆದಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬಿಡಿಎಯಲ್ಲೂ ಎಸ್ಐಟಿ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಾಲಿಕೆಯಲ್ಲೂ ಆಗಲಿದೆ. ಈ ಬಗ್ಗೆ ಚರ್ಚೆ ಮಾಡೋಣ' ಎಂದರು.
ಇದನ್ನೂ ಓದಿ- ಸಾಮಾಜಿಕ ಜಾಲತಾಣಗಳಲ್ಲಿನ ಫೇಕ್ ನ್ಯೂಸ್ ನಿಯಂತ್ರಣಕ್ಕೆ ಮುಂದಾದ ರಾಜ್ಯ ಸರ್ಕಾರ
ಬ್ರಾಂಡ್ ಬೆಂಗಳೂರು :
ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ನನಗೆ ಸಾರ್ವಜನಿಕರ ಅಭಿಪ್ರಾಯ ಬಹಳ ಮುಖ್ಯ. ಈಗಾಗಲೇ ಬೆಂಗಳೂರಿನ ಸರ್ವಪಕ್ಷ ಶಾಸಕರ ಸಭೆ ಮಾಡಿದ್ದೇನೆ. ಬೆಂಗಳೂರಿನ ಎಲ್ಲಾ ವರ್ಗಗಳ ಬ್ರ್ಯಾಂಡ್ ಅಂಬಾಸಿಡರ್ ಗಳ ಜತೆ ಚರ್ಚಿಸಿದ್ದೇನೆ. ಇವರ ಜತೆಗೆ ಸಾರ್ವಜನಿಕರ ಅಭಿಪ್ರಾಯವೂ ಮುಖ್ಯ. ಹೀಗಾಗಿ ಅಭಿಪ್ರಾಯ ಸಂಗ್ರಹಿಸಲು ಪೋರ್ಟಲ್ ಆರಂಭಿಸುತ್ತಿದ್ದೇವೆ. ಬೆಂಗಳೂರಿನ ನಾಗರೀಕರು ಹಾಗೂ ವಿದೇಶದಲ್ಲಿರುವ ಕನ್ನಡಿಗರು ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ತಮ್ಮ ಸಲಹೆಗಳನ್ನು www.brandbengaluru.karnataka.gov.in ವೆಬ್ ಸೈಟ್ ನಲ್ಲಿ ನಿಗದಿತ ಕಾಲಮಿತಿ ಜೂನ್ 30 ರ ಒಳಗಾಗಿ ನೀಡಬೇಕು ಎಂದು ವಿನಂತಿಸಿದರು.
ಶಾಸಕರು, ಅಧಿಕಾರಿಗಳು, ಅಂಬಾಸಿಡರ್ ಗಳ ಸಭೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೈ ಡೆನ್ಸಿಟಿ ಕಾರಿಡಾರ್, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, ನೈಸ್ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣದಂತಹ ಸಲಹೆ ನೀಡಿದ್ದಾರೆ.
ಸ್ವಚ್ಛತೆ, ಪರಿಸರ ವಿಚಾರದಲ್ಲಿ ಕಸ ವಿಲೇವಾರಿ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಕೊಳಗೇರಿ ಪ್ರದೇಶ ಅಭಿವೃದ್ಧಿ ಸೇರಿದಂತೆ ದಕ್ಷ ಆಡಳಿತ, ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಅನೇಕ ಸಲಹೆ ನೀಡಿದ್ದಾರೆ.
ಈ ಮಧ್ಯೆ ಕೆಲವು ದೊಡ್ಡ ನಾಯಕರ ಮನೆಗೆ ಹೋಗಿ ಚರ್ಚೆ ಮಾಡಲು ತೀರ್ಮಾನಿಸಿದ್ದೇನೆ. ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ಇನ್ನು ಕೆಲವರನ್ನು ಭೇಟಿ ಮಾಡಬೇಕು. ಬೊಮ್ಮಾಯಿ ಅವರ ಸಮಯ ಕೇಳಿದ್ದು, ಅವರು ಬ್ಯುಸಿ ಇದ್ದ ಕಾರಣ ಭೇಟಿ ಮಾಡಿಲ್ಲ. ಅವರ ವಿಚಾರಧಾರೆಗಳನ್ನು ತಿಳಿಯಬೇಕು ಎಂದು ತಿಳಿಸಿದರು.
ಬೆಂಗಳೂರು ಟ್ರಾಫಿಕ್ ಸಮಸ್ಯೆ:
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂಚಾರದಟ್ಟಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಬೇರೆ ನಗರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾರಣ ಬೆಂಗಳೂರನ್ನು ಇಡೀ ವಿಶ್ವ ನೋಡುತ್ತಿದೆ. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ಗಮನ ಹರಿಸಬೇಕು. ಸಂಚಾರ ದಟ್ಟಣೆ ವಿಚಾರವಾಗಿ ನಿವೃತ್ತ ಟ್ರಾಫಿಕ್ ಪೊಲೀಸರ ಅಭಿಪ್ರಾಯ ಪಡೆಯುತ್ತೇನೆ. ಅನುಭವದ ಆಧಾರದ ಮೇಲೆ ಬರುವ ಸಲಹೆಗಳಿಗೆ ಹೆಚ್ಚಿನ ತೂಕ ಇರುತ್ತದೆ. ಇದಲ್ಲದೆ, ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಸಲಹೆ ಬಂದಿದ್ದು, ನಮ್ಮ ರಾಜ್ಯದವರು ಮುಂಬೈನಲ್ಲಿ ಸುರಂಗ ರಸ್ತೆ ನಿರ್ಮಿಸುತ್ತಿದ್ದಾರೆ. ಪಕ್ಕದ ರಾಜ್ಯದವರು ಕಾಶ್ಮೀರದಲ್ಲಿ ಸುರಂಗ ಮಾರ್ಗ ನಿರ್ಮಿಸುತ್ತಿದ್ದಾರೆ ಎಂದವರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ- Viral Video: ಬಸ್ ಚಾಲಕನ ಚಾಣಾಕ್ಷತನದಿಂದ ಪಾದಚಾರಿ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರು...!
ಬೆಂಗಳೂರು ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ಮುಖ್ಯ!
ರಸ್ತೆ ಗುಂಡಿ ವಿಚಾರವಾಗಿ ಪ್ರತ್ಯೇಕ ಯೋಜನೆ ರೂಪಿಸುತ್ತೇವೆ. ತ್ಯಾಜ್ಯ ವಿಲೇವಾರಿ ಕುರಿತು ಅಧಿಕಾರಿಗಳ ಸಭೆ ಮಾಡಿದ್ದೇನೆ. ಈ ಬಗ್ಗೆ ಉತ್ತಮ ನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ತೀರ್ಮಾನಿಸಿದ್ದೇವೆ. ಚೆನ್ನೈ, ಇಂದೋರ್ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾವು ಈ ವಿಚಾರದಲ್ಲಿ ದೀರ್ಘಾವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಕಾನೂನು ಮಿತಿ, ಭೂಪ್ರದೇಶದ ಮಿತಿಯಲ್ಲಿ ನಾವು ಯೋಜನೆ ರೂಪಿಸಬೇಕು ಎಂದರು.
ಕಸ ವಿಲೇವಾರಿ:
ಇದೇ ವೇಳೆ ಕೇವಲ ಕಸ ತೆಗೆದುಕೊಂಡು ಹೋಗಿ ಸುರಿದರೆ ಆಗುವುದಿಲ್ಲ. ತ್ಯಾಜ್ಯದ ಬೆಟ್ಟ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಒಂದು ದಿನ ಅಥವಾ ವರ್ಷದಲ್ಲಿ ಬದಲಾವಣೆ ತರಲು ಆಗುವುದಿಲ್ಲ. ಆದರೂ ಕಾಲಮಿತಿ ನಿಗದಿ ಮಾಡಿಕೊಂಡು ಕೆಲಸ ಮಾಡಬೇಕಿದೆ. ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದೆ. 50 ಲಕ್ಷದಷ್ಟು ಮಂದಿ ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ರಾಜ್ಯ ಹಾಗೂ ದೇಶಕ್ಕೆ ಬೆಂಗಳೂರಿನಿಂದ ಹೆಚ್ಚಿನ ಪ್ರಮಾಣದ ಹಣ ತೆರಿಗೆ ರೂಪದಲ್ಲಿ ಹೋಗುತ್ತಿದೆ. ಬೆಂಗಳೂರಿಗೆ ಉದ್ಯೋಗ, ಶಿಕ್ಷಣಕ್ಕಾಗಿ ಬಂದವರು ಮತ್ತೆ ತಮ್ಮ ಊರಿಗೆ ಹೋಗುತ್ತಿಲ್ಲ. ಇಲ್ಲೇ ನೆಲೆಸುತ್ತಿದ್ದಾರೆ.
ಹೀಗಾಗಿ ನಮ್ಮ ಪ್ರಣಾಳಿಕೆಯಲ್ಲಿ ಬೆಂಗಳೂರಿನ ಹೊರೆ ತಪ್ಪಿಸಲು 2-3ನೇ ದರ್ಜೆ ನಗರಗಳ ಅಭಿವೃದ್ಧಿ, ಎಲ್ಲಾ ಪಂಚಾಯ್ತಿ ಮಟ್ಟದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಕಾರ್ಯಕ್ರಮ ರೂಪಿಸಿದ್ದೇವೆ.
ಬಜೆಟ್ ಲೆಕ್ಕಾಚಾರ:
ಕಳೆದ ಬಾರಿಯ ಬಜೆಟ್ ಅನ್ನು ಹೆಚ್ಚಿನ ಬದಲಾವಣೆ ಮಾಡಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಸ ರೂಪ ನೀಡಲು ಮುಖ್ಯಮಂತ್ರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪಾಲಿಕೆ ಮಟ್ಟದಲ್ಲಿ ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ಪ್ರಶ್ನಿಸಿದಾಗ, ‘ನಾನು ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಕೆಲವರು ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏನು ಮಾಡಬಹುದು ಎಂದು ಚರ್ಚೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.
ಈ ಬಾರಿ ಮಳೆ ಬಂದರೆ ಕಳೆದ ವರ್ಷಗಳಂತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲವೇ ಎಂಬ ಪ್ರಶ್ನೆಗೂ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ‘ನಿನ್ನೆಯವೆರೂ ಕೇವಲ ಬಡವರ ಮನೆಗಳನ್ನು ಮಾತ್ರ ಧರೆಗುರುಳಿಸಿ ರಾಜಕಾಲುವೆ ತೆರವು ಮಾಡುತ್ತಿದ್ದೀರಿ ಎಂದು ನೀವು ನನ್ನ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಿರಿ. ನಿನ್ನೆ ಕೆಲವು ರೆಸಾರ್ಟ್ ಹಾಗೂ ಇತರ ಪ್ರದೇಶಗಳಲ್ಲಿ ರಾಜಕಾಲುವೆ ತೆರವು ಮಾಡಿದ್ದೇವೆ. ಈ ಪ್ರದೇಶವನ್ನು ನಾನು ಹೋಗಿ ಗುರುತು ಮಾಡಿರಲಿಲ್ಲ. ಕಂದಾಯ ಅಧಿಕಾರಿಗಳು ಗುರುತು ಮಾಡಿದ್ದು, ಅದರ ಆಧಾರದ ಮೇಲೆ ರಾಜಕಾಲುವೆ ತೆರವು ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಈ ವಿಚಾರದಲ್ಲಿ ಕೆಲಸ ಮಾಡಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ನಿನ್ನೆ ಅತಿಯಾದ ಮಳೆಯಿಂದಾಗಿ ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಲಾಗಿದೆ. ಈ ವಿಚಾರದಲ್ಲಿ ಸರ್ಕಾರ ಎರಡು ವಿಚಾರವಾಗಿ ನಿರ್ಧಾರ ಕೈಗೊಳ್ಳಬೇಕು. ಸಿಡಿಪಿ ಹಾಗೂ ಕಂದಾಯ ಇಲಾಖೆ ಒಂದಾಗಿ ಕೆಲಸ ಮಾಡಬೇಕು. ಇವೆರಡು ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದರು.
ಮಾಸ್ಟರ್ ಪ್ಲಾನ್ ಯಾವಾಗ ನಿರ್ಧಾರವಾಗುತ್ತದೆ ಎಂದು ಕೇಳಿದಾಗ, ‘ಒಂದೇ ದಿನದಲ್ಲಿ ಎಲ್ಲವನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಹಂತಹಂತವಾಗಿ ಕೆಲಸ ಮಾಡೋಣ’ ಎಂದಷ್ಟೇ ಹೇಳಿದರು.
ಇದನ್ನೂ ಓದಿ- ಬಡವರ ತಟ್ಟೆಯ ಅನ್ನಕ್ಕೂ ವ್ಯಾಪಿಸಿದ ಬಿಜೆಪಿಯ ಹೀನ ರಾಜಕೀಯ: ಕಾಂಗ್ರೆಸ್ ಆಕ್ರೋಶ
ಬೆಂಗಳೂರಿನ ಅನೇಕ ಕಡೆಗಳಲ್ಲಿ ಕೆಬಲ್ ಗಳ ರಾಶಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆಶಿ, ‘ನಾನು ಇಂಧನ ಸಚಿವನಾಗಿದ್ದಾಗ ಕೇಬಲ್ ಹಾವಳಿ ನೋಡಿದ್ದೇವೆ. ತಮ್ಮನ್ನು ಯಾರೂ ಮುಟ್ಟಲು ಆಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಬಗ್ಗೆ ಆಲೋಚನೆ ಮಾಡಲಾಗುತ್ತಿದ್ದು, ಮಾಧ್ಯಮಗಳು ಸಹಕಾರ ನೀಡಿದರೆ ಎಲ್ಲ ಕೇಬಲ್ ಕಟ್ ಮಾಡಿಸುತ್ತೇನೆ’ಎಂದು ಪ್ರತಿಕ್ರಿಯಿಸಿದರು.
ಸರ್ಕಾರದ ಅಧಿಕಾರಿಗಳೇ ಒತ್ತುವರಿಗೆ ಅನುಮತಿ ನೀಡಿರುವ ಬಗ್ಗೆ ...
ರಾಜಕಾಲುವೆ ತೆರವು ವಿಚಾರದಲ್ಲಿ ಸರ್ಕಾರದ ಅಧಿಕಾರಿಗಳೇ ಒತ್ತುವರಿಗೆ ಅನುಮತಿ ನೀಡಿರುವ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ಸೂಕ್ತ ಉದಾಹರಣೆ, ಪ್ರಕರಣಗಳ ಬಗ್ಗೆ ದೂರು ಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಅನುಮತಿ ನೀಡಿದ ಅನೇಕ ಅಧಿಕಾರಿಗಳು ನಿವೃತ್ತಿ ಹೊಂದಿರುತ್ತಾರೆ. ಅನೇಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿವೆ’ಎಂದು ತಿಳಿಸಿದರು..
ಕಸ ಸಂಗ್ರಹಕ್ಕೆ ತೆರಿಗೆ ಪಾವತಿ :
ತೆರಿಗೆ ಹೆಚ್ಚಳ ಹಾಗೂ ಕಸ ಸಂಗ್ರಹಕ್ಕೆ ತೆರಿಗೆ ಪಾವತಿ ವಿಚಾರವಾಗಿಯೂ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ‘ಒಂದೊಂದು ರಾಜ್ಯಗಳಲ್ಲಿ ಒಂದೊಂದು ಮಾದರಿ ಅಳವಡಿಸಿಕೊಳ್ಳಲಾಗಿದೆ. ಬಹಳ ಜನ ನಮ್ಮ ಬಳಿ ಹಣ ಪಡೆದರೂ ಸರಿ, ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಮಾಡಿ ಎಂದು ಕೇಳುತ್ತಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿ ನಿರ್ವಹಣೆಗಾಗಿ ಪ್ರತ್ಯೆಕ ಹಣ ಸಂಗ್ರಹಿಸಲಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿ ಇಂಧನ ಬೆಲೆ ಏರಿಕೆಯಾದಂತೆ ದರ ಏರಿಕೆಗೆ ಅಧಿಕಾರ ನೀಡಲಾಗಿದೆ. ಆದರೆ ನೀರು ಹಾಗೂ ಆಸ್ತಿ ತೆರಿಗೆ ವಿಚಾರವಾಗಿ ಆ ಅಧಿಕಾರ ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿ ವಾರ್ಡ್ ಗಳ ಮರು ವಿಂಗಡಣೆ:
ವಾರ್ಡ್ ಗಳ ಮರುವಿಂಗಡಣೆ ವಿಚಾರವಾಗಿ ನ್ಯಾಯಾಲಯ ಗಡವು ನೀಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದಕ್ಕಾಗಿ ನಾವು ಸಮಿತಿ ರಚನೆ ಮಾಡಿದ್ದೇವೆ. ಈ ವಿಚಾರವಾಗಿ ಮುಂದೆ ಮಾಹಿತಿ ನೀಡುತ್ತೇವೆ’ ಎಂದು ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರಿನಲ್ಲಿ ಹಸಿರು ನಗರವಾಗಿ ಪರಿವರ್ತಿಸಲು ಯೋಜನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಮಾತನಾಡಿ, ‘ಈ ವಿಚಾರವಾಗಿ ನಿಮ್ಮ ಬಳಿ ಯಾವುದಾದರೂ ಉತ್ತಮ ಸಲಹೆ ಇದ್ದರೆ ನೀಡಿ. ನಾವು ಅದನ್ನು ಸ್ವಾಗತಿಸುತ್ತೇವೆ. ಹಸಿರು ಬೆಂಗಳೂರು ನಿರ್ಮಾಣಕ್ಕೂ ನಾವು ಸಾರ್ವಜನಿಕರ ಅಭಿಪ್ರಾಯ ಕೇಳಿದ್ದೇವೆ. ಬೆಂಗಳೂರನ್ನು ಮತ್ತೆ ಹಸಿರು ನಗರವನ್ನಾಗಿ ಮಾಡಬೇಕು’ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ