ನವದೆಹಲಿ: "2019ರ ಲೋಕಸಭಾ ಚುನಾವಣೆಯಲ್ಲಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಲೆ ಮುಂದುವರೆದಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದ ಕನಸು ಕಾಣಲು ಕನಿಷ್ಠ ಇನ್ನೈದು ವರ್ಷವಾದರೂ ಕಾಯಬೇಕು" ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಜೀ ನ್ಯೂಸ್ ನಡೆಸಿದ ಇಂಡಿಯಾ ಕಾ ಡಿಎನ್ಎ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಹಂಚಿಕೊಂಡರು. ಇದೇ ವೇಳೆ 2019 ರ ಚುನಾವಣೆಯಲ್ಲಿ ಮತ್ತೆ ಮೋದಿ ಸರ್ಕಾರವೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೆಂದು ಏಕೆ ಭಾವಿಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲೂ ಮೋದಿ ಅಲೆ ಮುಂದುವರೆದಿದೆ. ಹಾಗಂತ ನಾವು ಚುನಾವಣೆಯನ್ನು ಹಗುವರಾಗಿ ಪರಿಗಣಿಸುವುದಿಲ್ಲ ಎಂದರು.
ಪ್ರತಿ ಚುನಾವಣೆಯೂ ಬಿಜೆಪಿಗೆ ಸವಾಲಾಗಿದೆ, ಪಕ್ಷದ ಕಾರ್ಯಕರ್ತರು ಯಾವುದೇ ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಮೋದಿ ಅಲೆಯೂ ಇದೆ. ಪ್ರಧಾನಿ ಮೋದಿಯ ನಿರ್ಣಾಯಕ ನಾಯಕತ್ವದಿಂದಾಗಿ ಇಡೀ ಪ್ರಪಂಚವು ಭಾರತ ಕಡೆಗೆ ನೋಡುತ್ತಿದೆ ಎಂದು ಅಮಿತ್ ಶಾ ಹೇಳಿದರು.
"ಸಾಕಷ್ಟು ನಿರೀಕ್ಷೆಗಳಿದ್ದವು ಮತ್ತು ನಾವು ಅವುಗಳನ್ನು ಪೂರೈಸಿದ್ದೇವೆ ಎಂದು ನಂಬಿದ್ದೇನೆ, ಕೆಲವು ವಿಷಯಗಳಲ್ಲಿ ನಾವು ನಿರೀಕ್ಷೆ ಮಟ್ಟಕ್ಕಿಂತ ಉತ್ತಮ ಕೆಲಸ ಮಾಡಿದ್ದೇವೆ". ಈ ಚುನಾವಣೆಯಲ್ಲಿ ನಮ್ಮ ಸರ್ಕಾರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಮೊದೀಜಿ ಸಾಕಷ್ಟು ವಿಷಯಗಳನ್ನು ಖುದ್ದಾಗಿ ಪರಾಮರ್ಶಿಸುತ್ತಾರೆ. ಕಳೆದ ಐದು ವರ್ಷಗಳಲ್ಲಿ ಭಾರತೀಯ ಪಾಸ್ಪೋರ್ಟ್ನ ಮೌಲ್ಯವು ಹೆಚ್ಚಿದೆ ಎಂದು ಶಾ ತಿಳಿಸಿದರು.
ಈ ಎಲ್ಲಾ ಸಂಗತಿಗಳು ಮುಂಬರುವ ಚುನಾವಣೆಯಲ್ಲಿ ಬೆಳಕು ಚೆಲ್ಲಲಿವೆ. ಹಾಗಾಗಿ ನರೇಂದ್ರ ಮೋದಿ ಖಂಡಿತವಾಗಿಯೂ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ಪ್ರಾಥಮಿಕ ಹಂತ ಮತ್ತು ಯಾವುದೇ ಸಂಖ್ಯೆಯು ಅಕಾಲಿಕವಾಗಿದೆ. ಆದರೆ 2014 ರ ಚುನಾವಣೆಗೆ ಹೋಲಿಸಿದರೆ 2019 ರಲ್ಲಿ ನರೇಂದ್ರ ಮೋದಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರದ ಕನಸು ಕಾಣಲು ಕನಿಷ್ಠ ಇನ್ನೈದು ವರ್ಷವಾದರೂ ಕಾಯಬೇಕು ಎಂದು ತಿಳಿಸಿದ ಅಮಿತ್ ಶಾ, ಈ ಬಾರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಮೇಥಿ ಸಂಸದೀಯ ಕ್ಷೇತ್ರದಿಂದ ಗೆಲುವು ಸಾಧಿಸುವುದು ಕಷ್ಟಕರ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಹುಲ್ ಗಾಂಧಿ ವಿರುದ್ಧ ಅಮೇಥಿಯಿಂದ ಕಣಕ್ಕಿಳಿಸಿದೆ.
"ಈ ಚುನಾವಣೆಯಲ್ಲಿ ಕೂಡ ಜನಾದೇಶ ನಮ್ಮ ಪರವಾಗಿಯೇ ಇರಲಿದೆ ಮತ್ತು 5 ವರ್ಷಗಳಲ್ಲಿ ಭಾರತವು ಪ್ರಬಲವಾದ ಶಕ್ತಿಯಾಗಲಿದೆ ಎಂಬ ವಿಶ್ವಾಸವಿದೆ" ಎಂದು ಅವರು ಹೇಳಿದರು.
ಮೋದಿ ಸರಕಾರ ಈ ಅವಧಿಯಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. "ಮತ ಬ್ಯಾಂಕ್ ಕೆಲವು ನಾಯಕರ ವೈಯಕ್ತಿಕ ಆಸ್ತಿ ಎಂದು ನಂಬಲಾಗಿತ್ತು, ಆದರೆ ಇದೀಗ ಮತದಾರನು ಸ್ವತಂತ್ರವಾಗಿ ಯೋಚಿಸುತ್ತಾರೆ ಮತ್ತು ಅವರ ಯೋಚನೆಗೆ ಅನುಗುಣವಾಗಿ ಕರೆದೊಯ್ಯುತ್ತಾರೆ ಎಂದು ನಂಬಲಾಗಿದೆ" ಎಂದು ಶಾ ವಿವರಿಸಿದರು.
ಅಮಿತ್ ಶಾ ಅವರ ಪ್ರಕಾರ ಚುನಾವಣಾ ಅಜೆಂಡಾ ದೇಶದ ಭದ್ರತೆ. "ರಾಷ್ಟ್ರದ ನಾಗರಿಕರು ಯಾವಾಗಲೂ ದೇಶದ ಭದ್ರತೆಯ ಬಗ್ಗೆ ಯೋಚಿಸಬೇಕು, ದೇಶದ ಭದ್ರತೆ ಚುನಾವಣಾ ಅಜೆಂಡಾ ಆಗಿರಬೇಕು, ಅದೇ ಮತದಾನಕ್ಕೆ ಮಾನದಂಡವಾಗಿರಬೇಕು" ಎಂದು ಅವರು ಹೇಳಿದರು.