ನವದೆಹಲಿ: ಸಿಜೆಐ ರಂಜನ್ ಗೋಗಯ್ ವಿರುದ್ಧ ಬಂದಿರುವ ಲೈಂಗಿಕ ಕಿರುಕುಳ ಆರೋಪದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಅಲ್ಲದೆ ಸಿಜೆಐ ವಿರುದ್ಧ ಬಂದಿರುವ ಆರೋಪಗಳೆಲ್ಲವೂ ಕೂಡ ಆಧಾರರಹಿತ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ ಮಾಜಿ ಉದ್ಯೋಗಿ ಏಪ್ರಿಲ್ 19 ರಂದು ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದರು.ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಇನ್-ಹೌಸ್ ತನಿಖಾ ಸಮಿತಿ ಈ ಆರೋಪಗಳು ಆಧಾರ ರಹಿತವಾಗಿವೆ ಎಂದು ಹೇಳಿ ಮುಖ್ಯ ನ್ಯಾಯಮೂರ್ತಿಗಳಿಗೆ ಕ್ಲೀನ್ ಚಿಟ್ ನೀಡಿದೆ.
ಸುಪ್ರೀಂಕೋರ್ಟ್ ನ ವೆಬ್ ಸೈಟ್ ನಲ್ಲಿ ನೀಡಿರುವ ಅಧಿಸೂಚನೆಯನ್ವಯ ಸಮಿತಿಯು ಈಗಾಗಲೇ ವರದಿಯನ್ನು ಹಿರಿಯ ನ್ಯಾಯಾಧೀಶರಿಗೆ ಸಲ್ಲಿಸಲಾಗಿದೆ.ಆದರೆ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲವೆಂದು ಹೇಳಲಾಗಿದೆ. 2003ರಲ್ಲಿನ ಇಂದಿರಾ ಜೈಸಿಂಗ್ vs ಸುಪ್ರೀಂಕೋರ್ಟ್ ಪ್ರಕರಣದ ಸಂದರ್ಭದಲ್ಲಿ ಇನ್-ಹೌಸ್ ತನಿಖಾ ಸಮಿತಿ ಪ್ರಕ್ರಿಯೆ ವರದಿಯನ್ನು ಬಿಡುಗಡೆ ಮಾಡಲು ಸಾದ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಈಗ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲ ಎನ್ನಲಾಗಿದೆ.