ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರೆಯುವ ಸಾಧ್ಯತೆ!

ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಇಂದು ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿದರು.  

Last Updated : May 28, 2019, 02:00 PM IST
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರೆಯುವ ಸಾಧ್ಯತೆ! title=
File Image

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಮನನೊಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಲಿನ ನೈತಿಕ್ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಮನವೊಲಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ್, ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿ ಇಂದೂ ಬೆಳಿಗ್ಗೆಯೂ ತಮ್ಮ ಕಸರತ್ತು ಮುಂದುವರೆಸಿದ್ದಾರೆ. 

ಏತನ್ಮಧ್ಯೆ, ಕಾಂಗ್ರೆಸ್ ಕಾರ್ಯಕಾರಿ ಸಮಿಸಿ ಸಭೆ ನಡೆಯುವುದಿಲ್ಲ. ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರೇ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ, ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನಕ್ಕಾಗಿ ಶನಿವಾರ ನಡೆಸಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿಸಿ(ಸಿಡಬ್ಲ್ಯುಸಿ) ಸಭೆಯಲ್ಲಿ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಕೂಡ ಪಕ್ಷ ಕಳಪೆ ಸಾಧನೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ತಮ್ಮ ಮಕ್ಕಳಿಗೆ ಟಿಕೆಟ್ ಬೇಕು ಎಂದು ಬೇಡಿಕೆ ಇರಿಸಿ ಪಡೆದುಕೊಂಡಿದ್ದರು.  ನಾಯಕರ ಮಕ್ಕಳಿಗೆ ಟಿಕೆಟ್ ನೀಡಲು ನನಗೆ ಇಷ್ಟವಿರಲಿಲ್ಲ. ಪಕ್ಷದಲ್ಲಿ ಕೆಲ ನಾಯಕರಿಗೆ ಪಕ್ಷದ ಹಿತಕ್ಕಿಂತ ಸ್ವ ಹಿತವೇ ಮುಖ್ಯವಾಗಿತ್ತು ಎಂದು ರಾಹುಲ್ ಅಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಅದೇ ಸಭೆಯಲ್ಲಿ, "ಈ ಸೋಲಿನ ಹೊಣೆ ನನ್ನದೇ. ಹಾಗಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೆಹರೂ-ಗಾಂಧಿ ಕುಟುಂಬದ ಯಾರೂ ಪಕ್ಷವನ್ನು ಮುನ್ನಡೆಸುವುದು ಬೇಡ" ಎಂದು ರಾಹುಲ್ ಹೇಳಿದ್ದರು. 
 

Trending News