ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಿಗ್ಗೆ ವಿಧಿವಶರಾಗಿರುವ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್ ಅವರ ಅಂತ್ಯ ಸಂಸ್ಕಾರವನ್ನು ಯಾವುದೇ ವಿಧಿ ವಿಧಾನ ಅನುಸರಿಸದೆ, ವಿದ್ಯುತ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆಯ ಬಗ್ಗೆ ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ವೇಳೆ ಕೆಲವು ವಿಚಾರಗಳ ಬಗ್ಗೆ ತಿಳಿದುಬಂದಿದ್ದು, ಕಾರ್ನಾಡರ ಕೊನೆ ಆಸೆ ಬಗ್ಗೆ ತಿಳಿದುಬಂದಿದೆ. ತಮ್ಮ ಕೊನೆ ಆಸೆ ಬಗ್ಗೆ ಗಿರೀಶ್ ಕಾರ್ನಾಡ್ ಅವರು ತಮ್ಮ ಮಗ ರಘು ಕಾರ್ನಾಡ್ ಅವರಿಗೆ ತಿಳಿಸಿರುವುದಾಗಿ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.
ತಮ್ಮ ಕೊನೆಯಾಸೆ ಬಗ್ಗೆ ಕುಟುಂಬಸ್ಥರೊಂದಿಗೆ ಸ್ಪಷ್ಟವಾಗಿ ತಿಳಿಸಿರುವ ಗಿರೀಶ್ ಕಾರ್ನಾಡ್ ಅವರ ಮೂರು ಆಸೆಗಳಿವು...
1. ಯಾವುದೇ ಸರ್ಕಾರಿ ಗೌರವ ಬೇಡ
2. ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಅಂತ್ಯ ಸಂಸ್ಕಾರ ನಡೆಯಬೇಕು.
3. ಹೂಗುಚ್ಛ ಇಡುವುದು ಬೇಡ ಎಂದು ಕಾರ್ನಾಡರು ಅಪೇಕ್ಷಿಸಿದ್ದಾರೆ ಎನ್ನಲಾಗಿದೆ.
ಗಿರೀಶ್ ಕಾರ್ನಾಡ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡುತ್ತಿಲ್. ಹಾಗಾಗಿ, ಅವರನ್ನು ಕೊನೆಯಬಾರಿಗೆ ನೋಡಬೇಕು ಎನ್ನುವವರು ಬೈಯಪ್ಪನಹಳ್ಳಿಗೆ ಬರಬಹುದು. ಗಣ್ಯರ ಬಳಿಯೂ ನಾವು ಇದನ್ನೇ ಕೇಳಿಕೊಳ್ಳುತ್ತೇವೆ. ಮನೆಯ ಬಳಿ ಸಾಕಷ್ಟು ಜನರು ನೆರೆದರೆ ತೊಂದರೆ ಆಗುತ್ತದೆ. ಹೀಗಾಗಬಾರದು ಎನ್ನುವ ಬೇಡಿಕೆ ಕಾರ್ನಾಡ್ ಅವರದ್ದು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
ಕಾರ್ನಾಡ ಅಪೇಕ್ಷೆಯಂತೆಯೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.