ನವದೆಹಲಿ: ಇಂದೂ ಕೂಡ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳ ಮುಂದೆ ಹಾಜರಾಗಬೇಕಿರುವ ಮಾಜಿ ಸಚಿವ, ಶಾಸಕ ಡಿ.ಕೆ. ಶಿವಕುಮಾರ್, ತಮ್ಮ ಹಿರಿಯರ ಪೂಜೆಗೆ ಅವಕಾಶ ದೊರೆಯದೇ ಇರುವುದನ್ನು ನೆನೆದು ಗೌರಿ-ಗಣೇಶ ಹಬ್ಬದಂದು ಕಣ್ಣೀರಿಟ್ಟಿದ್ದಾರೆ.
ಇಡಿ ವಿಚಾರಣೆಗೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್, ಗಣೇಶ ಚತುರ್ಥಿ ದಿನದಂದೇ ಪ್ರತಿವರ್ಷ ನಮ್ಮ ಮನೆಯಲ್ಲಿ ಹಿರಿಯರ ಹಬ್ಬ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಸೋಮವಾರ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಮನವಿ ಮಾಡಿದೆ. ಆದರೆ ಹಬ್ಬದಂದೇ ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಇದರಿಂದಾಗಿ ನನಗಾಗಲಿ, ನನ್ನ ತಮ್ಮನಿಗಾಗಲಿ ನಮ್ಮ ಹಿರಿಯರಿಗೆ 'ಎಡೆ' ಇಡಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಬಹಳ ದುಃಖವಾಗುತ್ತಿದೆ ಎಂದು ಭಾವುಕರಾಗಿ ಕಣ್ಣೀರಿಟ್ಟರು.
ಇಂದು ತಮ್ಮ ಹಿರಿಯರ ಪೂಜೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ಅದಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ನಾನು ನನ್ನ ಮಗ ಪ್ರತೀವರ್ಷ ಸ್ಯಾಂಕಿ ಕೆರೆಯಲ್ಲಿ ಗಣೇಶನನ್ನು ಬಿಡುತ್ತಿದ್ದೆವು. ತಂದೆಗೆ ಎಡೆ ಇಡೋದಕ್ಕೂ ಬಿಡದೆ ಇರುವುದು ನನಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.