ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಮತ್ತಿತರರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;
ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳನ್ನು ತೆಗೆದುಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಆದರೆ ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ ಅವರಿಗೆ ಗ್ಯಾರಂಟಿಗಳನ್ನು ಮುಟ್ಟಲು ರಾಜ್ಯದ ಜನ ಅವಕಾಶ ನೀಡುವುದಿಲ್ಲ.
ಕಾಂಗ್ರೆಸ್ ಪಕ್ಷದ ಮೇಲಿನ ಜನರ ಪ್ರೀತಿ ಕಂಡು ಅವರಿಗೆ ಅಸೂಯೆ ಆಗಿದೆ. ಆದ ಕಾರಣ ನಮ್ಮ ತಾಯಂದಿರ ಬಗ್ಗೆ ಮಾತನಾಡುತ್ತಿದ್ದಾರೆ. ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿರುವ ಅವರಿಗೆ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯಿತು ಎನ್ನುವುದಕ್ಕೆ ನಿಮ್ಮ ಹೇಳಿಕೆಗಳೇ ಸಾಕ್ಷಿ. ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ವೇಳೆ ಪಕ್ಷ ಭೇದ ಮರೆತು ಸೇರಿದ್ದ ಜನರನ್ನು ನೋಡಿದ ನಂತರ ಅನಿಸಿತು, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಸುಪುತ್ರ ರಾಘವೇಂದ್ರ ಗೆಲ್ಲಲು ಸಾಧ್ಯವಿಲ್ಲ ಎಂದು.
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಗ್ಯಾರಂಟಿಗಳ ಅಲೆಯಿದೆ. ಇಡೀ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಿದೆ. ಮಂಗಳವಾರ ಕೇರಳ ರಾಜ್ಯ ಪ್ರವಾಸಕ್ಕೆ ಹೋಗಿದ್ದೆ, ಅಲ್ಲಿಯೂ ಸಹ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲಲಿದೆ.
ಇಡೀ ದೇಶದಲ್ಲಿ 100 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಎನ್ಡಿಎ ಬದಲಾಯಿಸಿದೆ. ರಾಜ್ಯದಲ್ಲಿ 14 ಸ್ಥಾನಗಳನ್ನು ಬದಲಾಯಿಸಿದೆ. ಯಾವುದೇ ಕಾರಣಕ್ಕೂ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. "ಇಂಡಿಯಾ ಒಕ್ಕೂಟ ಗೆದ್ದೇ, ಗೆಲ್ಲಲಿದೆ".
ನಿರುದ್ಯೋಗ, ಬೆಲೆಏರಿಕೆ ಸಮಸ್ಯೆಯ ಬಗ್ಗೆ ಜನರು ಚಿಂತನೆ ಮಾಡುತ್ತಿದ್ದಾರೆ. ಧರ್ಮ, ಜಾತಿ ಆದಾರದ ಮೇಲೆ ನಡೆಯುತ್ತಿರುವ ರಾಜಕಾರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಪ್ರಧಾನಿ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ.
ಬಿಜೆಪಿಯ ಹಾಲಿ ಸಂಸದರೊಬ್ಬರು 400 ಸ್ಥಾನಗಳನ್ನು ಕೊಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಎರಡು ಮೂರು ಬಾರಿ ಹೇಳಿದರು. ಅವರನ್ನು ಪಕ್ಷದಿಂದ ಉಚ್ಚಾಟಿಸುವುದಕ್ಕೆ ಬಿಜೆಪಿ ಏಕೆ ಮುಂದಾಗಿಲ್ಲ? ಸಂವಿಧಾನ ಬದಲಾವಣೆ ಹೇಳಿಕೆಯ ನಂತರ ಉತ್ತರ ಭಾರತದಲ್ಲಿ ಜನ ದಂಗೆ ಎದ್ದಿದ್ದಾರೆ. ಆದ ಕಾರಣ ಈಗ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಮೇಲೆ ಗ್ಯಾರಂಟಿ ವಿರುದ್ಧ ಮಾತನಾಡುತ್ತಿದ್ದವರು, ಈಗ ಅದರ ಪರವಾಗಿ ಮಾತನಾಡುತ್ತಿದ್ದಾರೆ. ಮೋದಿ ಗ್ಯಾರಂಟಿ ಎಂದು ಕರೆಯುತ್ತಿದ್ದಾರೆ.
ಬಿಜೆಪಿಗೆ ಸೋಲು ಗ್ಯಾರಂಟಿ ಎಂದು ಗೊತ್ತಾದ ಮೇಲೆ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸಂಬಂಧವೇ ಇಲ್ಲದ ಚಂದ್ರಬಾಬು ನಾಯ್ಡು ಜೊತೆ ಸೇರಿಕೊಂಡಿದ್ದಾರೆ. ಕರ್ನಾಟಕದಲ್ಲಿ ದಳದೊಟ್ಟಿಗೆ ಸೇರಿಕೊಂಡಿದ್ದಾರೆ.
ಸವದಿಯವರು ಹೇಳುತ್ತಿದ್ದರು, ಕರಡಿ ಸಂಗಣ್ಣ ಅವರನ್ನು ನಾನೇ ದಳದಿಂದ ಬಿಜೆಪಿಗೆ ಸೇರಿಸಿದ್ದೆ ಎಂದು. ಸರಳ, ಸಜ್ಜನಿಕೆಯ ನಾಯಕ. ಬಿಜೆಪಿ ಸುಮ್ಮನೆ ಅಬ್ಬರ ಮಾಡುತ್ತಿರುವ ಹೊತ್ತಿನಲ್ಲಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಏಕೆಂದರೆ ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತ, ಕಾರ್ಯಕ್ರಮಗಳನ್ನು ಅವರು ಮೆಚ್ಚಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಬಿಜೆಪಿಯನ್ನು ರಾಜ್ಯದಲ್ಲಿ ತೊಳೆದು ಹಾಕುತ್ತಿವೆ. ಬೆಳಗಾವಿಯ ಗಾಂಧಿ ಬಾವಿಯಿಂದ ನೀರನ್ನು ತೆಗೆದು ಕೊಳೆ ತೊಳೆದಂತೆ, ರಾಜ್ಯದ ಜನತೆ ಬಿಜೆಪಿಯನ್ನು ಗುಡಿಸಿ ಹಾಕುತ್ತಾರೆ.
ಕರಡಿ ಸಂಗಣ್ಣ ಅವರು ತಳಮಟ್ಟದ ರಾಜಕಾರಣದಿಂದ ಬೆಳೆದವರು. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ನಂತರ 1999 ರಲ್ಲಿ ಜೆಡಿಯು ಪಕ್ಷದಿಂದ ಶಾಸಕರಾಗಿದ್ದರು. ನಂತರ ಎರಡು ಬಾರಿ ಸಂಸದರಾಗಿದ್ದರು. ಕೊಪ್ಪಳ ಭಾಗದಲ್ಲಿ ಭಾರಿ ಜನಸಂಪರ್ಕ ಹೊಂದಿರುವ ವ್ಯಕ್ತಿ.
ಇದೇ ವೇಳೆ ಅರಕಲಗೂಡಿನ ಪುಟ್ಟಸ್ವಾಮಿ, ರಾಜಾಜಿನಗರದ ಕೃಷ್ಣಮೂರ್ತಿ, ಮೂರು ಬಾರಿ ಶಾಸಕರಾಗಿದ್ದ ಶಿವಪುತ್ರ ಮಾಳಗಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿ, ಶಾಸಕ ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.
ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು:
“ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ನಾಳೆ ನಾನು ವಯನಾಡಿಗೆ ಹೋಗಿ ಪ್ರಚಾರ ಮಾಡಲಿದ್ದೇನೆ. ರಾಹುಲ್ ಗಾಂಧಿ ಅವರು ಯಾವುದಕ್ಕೂ ಹೆದರುವುದಿಲ್ಲ. ಅವರೊಬ್ಬ ಹೋರಾಟಗಾರ. ಅವರ ಪರಿಶ್ರಮ ಅವರಿಗೆ ತಕ್ಕ ಫಲ ನೀಡಲಿದೆ ಎಂಬ ವಿಶ್ವಾಸವಿದೆ” ಎಂದರು.
ಬಿಜೆಪಿ 140 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ ಎಂದು ಕೇಳಿದಾಗ, “ಅವರಿಗೆ ಹೆಚ್ಚಿನ ಮಾಹಿತಿ ಇರಲಿದೆ. ಹೀಗಾಗಿ ಅವರು ಈ ರೀತಿ ಹೇಳಿದ್ದಾರೆ. ನಾನು ಕೂಡ ಎನ್ ಡಿಎ ಸರ್ಕಾರ ರಚಿಸುವುದಿಲ್ಲ, ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
ಅಪಾರ್ಟ್ ಮೆಂಟ್ ನಿವಾಸಿಗಳಿಗೆ ನೀವು ಬೆದರಿಕೆ ಹಾಕಿದ್ದೀರಿ ಎಂದು ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂದು ಕೇಳಿದಾಗ, “ಬೆಂಗಳೂರಿನ ಅಪಾರ್ಟ್ ಮೆಂಟ್ ನಿವಾಸಿಗಳಾಗಲಿ ಅಥವಾ ಬೇರೆಯವರ ಸಮಸ್ಯೆಗಳನ್ನು ನಿವಾರಣೆ ಮಾಡುವುದು ನನ್ನ ಕರ್ತವ್ಯ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮ ಪಕ್ಷದ ಗ್ಯಾರಂಟಿ ಮುಂದುವರಿಯುವುದಿಲ್ಲ ಎಂದು ಹೇಳುವ ಮೂಲಕ ಮತದಾರರನ್ನು ಬೆದರಿಸುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು 5 ವರ್ಷ ಇರಲಿದ್ದು, ಅದು ಮತ್ತೈದು ವರ್ಷ ಮುಂದುವರಿಯಲಿದೆ. ಈ ಸರ್ಕಾರ ಇರುವುದು 5 ವರ್ಷಕ್ಕಲ್ಲ, 10 ವರ್ಷಕ್ಕೆ. ಕೇಂದ್ರದಲ್ಲೂ ನಮ್ಮ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಅವರ ಸರ್ಕಾರ ಹೋಯಿತು, ಕೇಂದ್ರದಲ್ಲೂ ಅವರ ಸರ್ಕಾರ ಹೋಗಲಿದೆ ಎಂಬ ಹತಾಶೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಗ್ಯಾರಂಟಿ ಯೋಜನೆ ವಿಚಾರವಾಗಿ ವಿಜಯೇಂದ್ರ ಅವರು ಹೇಳಿರುವ ಹೇಳಿಕೆ ವಿರುದ್ಧ ನಾವು ಹೋರಾಟ ಮಾಡುತ್ತೇವೆ” ಎಂದರು.
ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದಿಂದ ಬಿಜೆಪಿಗೆ ಯಾವುದೇ ತೊಂದರೆ ಇಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಕೇಳಿದಾಗ, “ಕಳೆದ ಚುನಾವಣೆಯಲ್ಲಿ ಏನಾಯಿತು, ಶೋಭಾ ಕರಂದ್ಲಾಜೆ ಅವರ ಕ್ಷೇತ್ರದಲ್ಲಿ ಏನಾಯಿತು? ಅವರು ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಕ್ಷೇತ್ರ ಗೆಲ್ಲಲಿಲ್ಲ. ಅವರು ಚಿಕ್ಕಮಗಳೂರಿನಿಂದ ಜಾಗ ಖಾಲಿ ಮಾಡಿದ್ದು ಯಾಕೆ? ಅಲ್ಲಿನ ಜನರು ಶೋಭಕ್ಕಗೆ ಗೋ ಬ್ಯಾಕ್ ಎಂದರು” ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.