ನವದೆಹಲಿ: ಪೂರ್ವ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ವಿರೋಧ ಪ್ರದರ್ಶನದ ಹೆಸರಿನಡಿ ಹಿಂಸಾಚಾರ ನಡೆಸಿದ ಇಬ್ಬರು ಬಾಂಗ್ಲಾದೇಶಿ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ದೆಹಲಿಯ ಸೀಲಂಪುರ್ ಭಾಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಲಾದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿರುವ ನಾಗರಿಕರು ಶಾಮೀಲಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಇಬ್ಬರು ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಿರುವ ಪೊಲೀಸರು ಈ ಶಂಕೆಗೆ ಪುಷ್ಟಿ ನೀಡಿದ್ದಾರೆ.
ಸೀಲಂಪುರ್ ಹಿಂಸಾಚಾರದಲ್ಲಿ ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿತ್ತು
ಉತ್ತರ ಪೂರ್ವ ದೆಹಲಿಯಲ್ಲಿ ಡಿಸೆಂಬರ್ ೨೧ರಂದು ಪೊಲೀಸರು ಹಾಗೂ CAA ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಸಂಘರ್ಷದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದರು. ದೇಸಿ ಫಾರ್ಮ್ಯೂಲಾ ಬಳಸಿ ಈ ಪೆಟ್ರೋಲ್ ಬಾಂಬ್ ಗಳನ್ನು ತಯಾರಿಸಲಾಗಿತ್ತು. ಈ ಬಾಂಬ್ ಗಳನ್ನು ತಯಾರಿಸಲು ಹೆಚ್ಚಿನ ಸಾಮಗ್ರಿ ಬೇಕಾಗುವುದಿಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಇವುಗಳನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ ಹಾಗೂ ಇವು ಹೆಚ್ಚಿನ ಹಾನಿ ಮತ್ತು ಪ್ರಭಾವ ಬೀರಬಲ್ಲವು.
ಹೆಸರನ್ನು ಬಹಿರಂಗಪಡಿಸದಂತೆ ಸೂಚನೆ ನೀಡಿ ಈ ಕುರಿತು ಮಾಹಿತಿ ನೀಡಿರುವ ಉತ್ತರ ಪೂರ್ವ ದೆಹಲಿ ಪೊಲೀಸ್ ನ ಓರ್ವ ಹಿರಿಯ ಅಧಿಕಾರಿ, "ಬಂಧನಕ್ಕೋಳಪಡಿಸಲಾದ ಓರ್ವ ನಾಗರಿಕನನ್ನು ರಯೀಸ್ ಎಂದು ಗುರುತಿಸಲಾಗಿದ್ದು, ಆತನಿಗೆ ಸಾಥ್ ನೀಡಿದ್ದ ಹಸನ್ ನನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ರಯೀಸ್ ಪೊಲೀಸರ ಮೇಲೆ ದೇಶೀ ಸ್ಟೈಲ್ ನಲ್ಲಿ ತಯಾರಿಸಲಾಗಿದ್ದ ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದು, ಈ ದಾಳಿಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ರಯೀಸ್ ತನ್ನ ಕೈಯಲ್ಲಿ ವಸ್ತುವೊಂದನ್ನು ಹಿಡಿದು ಓಡುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು" ಎಂದು ಹೇಳಿದ್ದಾರೆ.
ದೆಹಲಿ ಪೊಲೀಸ್ ನ ಕ್ರೈಂ ಬ್ರಾಂಚ್ ನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, "ಸೀಲಂಪುರ್-ಜಾಫಾರಾಬಾದ್ ನಲ್ಲಿ ನಡೆದ ಹಿಂಸಾಚಾರದ ವೇಳೆ ಚಿತ್ರಿಸಲಾಗಿರುವ ವಿಡಿಯೋವೊಂದರಲ್ಲಿ ಬಾಂಬ್ ಎಸೆದ ವ್ಯಕ್ತಿಯೋರ್ವ ಹಿಮ್ಮುಖವಾಗಿ ಓಡುತ್ತಿರುವುದು ಗಮನಿಸಲಾಗಿತ್ತು. ಈತ ಕೊರಳಿಗೆ ಮಫ್ಲರ್ ಹಾಗೂ ಕಣ್ಣಿಗೆ ಕನ್ನಡಕ ಧರಿಸಿದ್ದ. ಈ ಶಂಕಿತನ ಜೊತೆಗೆ ಇತರೆ ಕೆಲವರು ಕೂಡ ಹಿಮ್ಮುಖವಾಗಿ ಹಿಂದಕ್ಕೆ ಓಡುತ್ತಿರುವುದನ್ನು ಗಮನಿಸಲಾಗಿತ್ತು. ಸ್ಫೋಟದ ಬಳಿಕ ಈ ಶಂಕಿತರು ಪರಾರಿಯಾಗುತ್ತಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ. ಈ ವೈರಲ್ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.