ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶೀಘ್ರದಲ್ಲೇ ಸುದ್ದಿಯೊಂದನ್ನು ನೀಡಲಿದೆ. ಪಟ್ಟಣ ಶಾಖೆಗಳಲ್ಲಿನ ಉಳಿತಾಯ ಖಾತೆಗಳಲ್ಲಿ ನಿಗದಿಗೊಳಿಸಿದ್ದ 3 ಸಾವಿರ ರೂ. ಠೇವಣಿಯ ಮೊತ್ತವನ್ನು ಕಡಿಮೆ ಮಾಡಲು ಎಸ್ಬಿಐ ಯೋಜಿಸುತ್ತಿದೆ ಮತ್ತು ಈ ಮೊತ್ತವನ್ನು 1,000 ರೂ.ಗಳಿಗೆ ನಿಗದಿಗೊಳಿಸುವ ಸಾಧ್ಯತೆ ಇದೆ. ಉಳಿತಾಯ ಖಾತೆಗಳಲ್ಲಿ ಕನಿಷ್ಠ 3 ಸಾವಿರ ಠೇವಣಿ ನಿಗದಿಗೊಳಿಸಿರುವ ಬಗ್ಗೆ ಸರ್ಕಾರ ಬಲವಾದ ಒತ್ತಡವನ್ನು ಎದುರಿಸುತ್ತಿದೆ. ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗಿಸುವ ದೃಷ್ಟಿಯಿಂದ ಎಸ್ಬಿಐ ಈ ನಿರ್ಧಾರಕ್ಕೆ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಉಳಿತಾಯ ಖಾತೆಗಳಲ್ಲಿ ನಿಗದಿಗೊಳಿಸಲಾಗಿರುವ ಕನಿಷ್ಠ ಠೇವಣಿ ಮೊತ್ತದಿಂದ ಗ್ರಾಹಕರಿಗೆ ತೊಂದರೆಯಾಗುತ್ತಿರುವುದರಿಂದ ಎಸ್ಬಿಐ ತನ್ನ ತೀರ್ಮಾನವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.
ಈ ಮೊದಲು 2017ರ ಜೂನ್ ನಲ್ಲಿ ಎಸ್ಬಿಐ ನಗರ ಪ್ರದೇಶಗಳಲ್ಲಿ 5,000 ರೂ., ಉಪನಗರಗಳಲ್ಲಿ 3,000 ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1,000 ರೂ.ಗಳನ್ನು ಕನಿಷ್ಠ ಠೇವಣಿಯನ್ನು ನಿಗದಿಗೊಳಿಸಿತ್ತು. ಆ ನಂತರದಲ್ಲಿ ನಗರ ಪ್ರದೇಶಗಳಲ್ಲಿ 3,000 ರೂ. ಮತ್ತು ಉಪನಗರಗಳಲ್ಲಿ 2,000 ರೂ. ಕನಿಷ್ಠ ಠೇವಣಿ ವಿಧಿಸಿ ಮುಂಚಿನ ನಿರ್ಧಾರವನ್ನು ಬದಲಾಯಿಸಿತ್ತು. ಆಲ್ಲದೇ, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಗ್ರಾಹಕರಿಗೆ ರೂ. 25 ರಿಂದ 100 ರೂ. ದಂಡ ವಿಧಿಸಲಾಗುತ್ತದೆ. ಕಳೆದ ವರ್ಷದ ಏಪ್ರಿಲ್-ನವೆಂಬರ್ ನಡುವೆ ಕನಿಷ್ಠ ಮೊತ್ತ ಹೊಂದಿರದ ಖಾತೆಗಳಿಂದ 1,772 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ.