ನವದೆಹಲಿ: ಕೇಂದ್ರ ಸರ್ಕಾರವು 2020 ರ ಬಜೆಟ್ನಲ್ಲಿ ಕಂಪನಿಗಳಿಗೆ ಪರಿಹಾರವನ್ನು ತರುತ್ತಿದೆ. ಕೇಂದ್ರ ಸರ್ಕಾರವು ಈಗಿನ ಆದಾಯ ತೆರಿಗೆ ಕಾಯ್ದೆ(Income Tax Act) ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ(Prevention of Money Laundering Act) ಕ್ರಿಮಿನಲ್ ಪ್ರಕರಣಗಳನ್ನು ಕೊನೆಗೊಳಿಸಲು ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕ್ರಮವು ಕಂಪನಿಗಳಿಗೆ ವ್ಯಾಪಾರ ಮಾಡಲು ಉತ್ತೇಜನ ನೀಡುತ್ತದೆ ಎನ್ನಲಾಗಿದೆ.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ದೇಶದ ಕಂಪನಿಗಳ ಅಭಿವೃದ್ಧಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರವು ಈಗಿರುವ ಆದಾಯ ತೆರಿಗೆ ಕಾಯ್ದೆ(Income Tax Act) ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆ(Prevention of Money Laundering Act)ಯನ್ನು ಅಪರಾಧೇತರ ವರ್ಗಕ್ಕೆ ತರಲು ನಿರ್ಧರಿಸಿದೆ.
ಅಸ್ತಿತ್ವದಲ್ಲಿರುವ ಕಾಯಿದೆಯನ್ನು ನಿರ್ಣಯಿಸುವುದು, ತೆರಿಗೆ ವಿವಾದಗಳನ್ನು ಕೊನೆಗೊಳಿಸುವುದು ಮತ್ತು ಸರ್ಕಾರಿ ಸಂಸ್ಥೆಗಳ ಖಾಸಗೀಕರಣವು ಸರ್ಕಾರದ ಮುಖ್ಯ ಗುರಿಗಳಾಗಿವೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳ ಕಾಯ್ದೆಯನ್ನು ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವರು ಮಾಹಿತಿ ನೀಡಿದರು. ದೇಶದ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ದೇಶದ ಕೈಗಾರಿಕೆಗಳನ್ನು ಉತ್ತೇಜಿಸಲು ಅಪರಾಧೇತರ ವಿಭಾಗದಲ್ಲಿ ಎರಡೂ ಕಾಯ್ದೆಗಳನ್ನು ತರಲು ಸರ್ಕಾರ ಬಯಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಅಡಿಯಲ್ಲಿ, 46 ನಿಬಂಧನೆಗಳಿಂದ ಕ್ರಿಮಿನಲ್ ನಿಯಮಗಳನ್ನು ತೆಗೆದುಹಾಕಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ದಂಡ ವಿಧಿಸಲು ಮಾತ್ರ ಅವಕಾಶ ಕಲ್ಪಿಸಲು ಸರ್ಕಾರ ಬಯಸಿದೆ.
ಕಂಪನಿಗಳ ಹಿತದೃಷ್ಟಿಯಿಂದ ಬಜೆಟ್ಗೆ ಸ್ವಲ್ಪ ಮುಂಚಿತವಾಗಿಯೇ ಸರ್ಕಾರದ ನಿರ್ಧಾರ ಬರುತ್ತಿರುವುದು ಗಮನಾರ್ಹ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವರು 2020-2021ರ ಬಜೆಟ್ ಮಂಡಿಸಲಿದ್ದಾರೆ. ಈ ಸಮಯದಲ್ಲಿ ಕಂಪನಿಗಳ ಕಾಯ್ದೆಯ ಹೊಸ ಹೆಜ್ಜೆಯನ್ನೂ ಉಲ್ಲೇಖಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೂ ದೇಶದಲ್ಲಿ ವ್ಯಾಪಾರ ಮಾಡುವುದನ್ನು ಅನುಮಾನದಿಂದ ನೋಡಬಾರದು ಎಂಬ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಕಂಪನಿಗಳು ಅಭಿವೃದ್ಧಿ ಹೊಂದಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.