ನವದೆಹಲಿ: ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕೋಪವನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ. ಈ ಮಧ್ಯೆ, ಜನರು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಲಾಕ್ಡೌನ್ ವಿಸ್ತರಣೆಯ ಬಳಿಕ ಇದೀಗ ನಾಗರಿಕ ವಿಮಾನಯಾನ ಸಚಿವಾಲಯವು ಕೂಡ ಮೇ 03ರವರೆಗೆ ತನ್ನ ಎಲ್ಲಾ ನಾಗರಿಕ ವಿಮಾನ ಸೇವೆಗಳನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದೆ. ಏತನ್ಮಧ್ಯೆ ಕೇಂದ್ರ ರೈಲ್ವೆ ಇಲಾಖೆ ಕೂಡ ತನ್ನ ಎಲ್ಲಾ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಮೇ 3ರವರೆಗೆ ಮುಂದೂಡಿದ್ದು, ಗೂಡ್ಸ್ ರೈಲುಗಳ ಸೇವೆ ಎಂದಿನಂತೆ ಮುಂದುವರೆಯಲಿದೆ ಎಂದು ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ನಾಗರಿಕ ವಿಮಾನಯಾನ ಸಚಿವಾಲಯ "ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಮೇ 3 ನೇ ತಾರೀಖಿನ ರಾತ್ರಿ 11.59 ರವರೆಗೆ ಮುಂದೂಡಲಾಗಿದೆ" ಎಂದು ಹೇಳಿದೆ. ಈ ಮೊದಲು ಕೂಡ ಲಾಕ್ಡೌನ್ ಭಾಗ 1 ಘೋಷಣೆಯಾದ ಬಳಿಕವೂ ಕೂಡ ದೇಶಾದ್ಯಂತದ ಎಲ್ಲಾ ನಾಗರಿಕ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮೇ 3 ರವರೆಗೆ ಲಾಕ್ಡೌನ್ ಘೋಷಣೆಯಾದ ನಂತರ, ರೈಲ್ವೆ ಇಲಾಖೆ ಕೂಡ ಮೇ 3 ರವರೆಗೆ ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯನ್ನು ಈಗ ಮೇ 3 ರವರೆಗೆ ಮುಂದೂಡಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸರಕು ಸಾಗಣೆ ರೈಲು ಸೇವೆ ದೇಶಾದ್ಯಂತ ಅಗತ್ಯ ವಸ್ತುಗಳನ್ನು ತಲುಪಿಸಲು ಮುಂದುವರೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ರೇಲ್ವೆ ಇಲಾಖೆ "ಪ್ರೀಮಿಯಂ ರೈಲುಗಳು, ಮೇಲ್, ಎಕ್ಸ್ಪ್ರೆಸ್ ರೈಲುಗಳು, ಪ್ರಯಾಣಿಕರ ರೈಲುಗಳು, ಉಪನಗರ ರೈಲುಗಳು, ಕೋಲ್ಕತಾ ಮೆಟ್ರೋ ರೈಲು, ಕೊಂಕಣ ರೈಲ್ವೆ ಸೇರಿದಂತೆ ಭಾರತೀಯ ರೈಲ್ವೆಯ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು 2020 ಮೇ 3 ರವರೆಗೆ ರದ್ದುಗೊಳಿಸಲಾಗುವುದು " ಎಂದು ತಿಳಿಸಿದೆ.