ಕರಾಚಿ : ಇಡೀ ಪ್ರಪಂಚದವನ್ನೇ ಬೆಂಬಿಡದಂತೆ ಕಾಡುತ್ತಿರುವ ಮಹಾಮಾರಿ ಕೊರೊನಾವೈರಸ್ (Coronavirus) ಪಾಕಿಸ್ತಾನದ ಪರಿಸ್ಥಿತಿಯನ್ನು ಚಿಂತಾಜನಕವನ್ನಾಗಿ ಮಾಡಿದೆ. ಕೋವಿಡ್ -19 (COVID-19) ಜೊತೆಗೆ ಪಾಕಿಸ್ತಾನದ ಜನರು ಒಂದೊತ್ತಿನ ಊಟಕ್ಕೂ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ಹಸಿವಿನಿಂದಾಗಿ ಸಾಯುತ್ತಿರುವ ಬಗ್ಗೆಯೂ ಸುದ್ದಿಗಳು ಬರಲಾರಂಭಿಸಿವೆ. ಮೃತ ಅಂತ್ಯಕ್ರಿಯೆಗೂ ದೇಣಿಗೆ ಕೇಳುವ ಅತ್ಯಂತ ಹೀನಾಯ ಪರಿಸ್ಥಿತಿಯನ್ನು ಜನರ ಎದುರಿಸುತ್ತಿದ್ದಾರೆ.
Covid-19: ಜನರು ಹಸಿವಿನಿಂದ ಸಾಯುತ್ತಿದ್ದಾರೆ ದಯವಿಟ್ಟು ಸಹಾಯ ಮಾಡಿ, ಪಾಕ್ ಪ್ರಧಾನಿ ಮನವಿ
ಪಾಕಿಸ್ತಾನದಲ್ಲಿ ಕರೋನಾ ವೈರಸ್ನಿಂದಾಗಿ ಸೋಂಕು ತಡೆಗಟ್ಟಲು ಜಾರಿಗೆ ತರಲಾಗಿರುವ ಲಾಕ್ ಡೌನ್ ನಿಂದಾಗಿ ಸಿಂಧ್ ಪ್ರಾಂತ್ಯದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಸುದ್ದಿಯನ್ನು ಭಿತ್ತರಿಸಿವೆ.
'ಡೈಲಿ ಎಕ್ಸ್ಪ್ರೆಸ್' ಪತ್ರಿಕೆಯ ಸುದ್ದಿಯ ಪ್ರಕಾರ ಸಿಂಧ್ ಪ್ರಾಂತ್ಯದ ಮಿರ್ಪುರ್ ಖಾಸ್ ಜಿಲ್ಲೆಯ ಝುಡೋ ಪಟ್ಟಣದಲ್ಲಿ ಸುಘ್ರಾ ಬೀಬಿ ಎಂಬ ಗರ್ಭಿಣಿ ಮಹಿಳೆ ಹಸಿವಿನಿಂದ ಮೃತಪಟ್ಟಿದ್ದಾರೆ. ಬೀಬಿಯ ಪತಿ ಅಲ್ಲಾ ಬಕ್ಷ್ ಅವರು ದಿನನಿತ್ಯದ ಕೂಲಿ ಕಾರ್ಮಿಕರಾಗಿದ್ದು ಲಾಕ್ಡೌನ್ (Lockdown) ಜಾರಿಗೆ ಬಂದಾಗಿನಿಂದ ಆತನಿಗೆ ಕೂಲಿ ಮಾಡಲು ಕೆಲಸ ಸಿಗದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಒಂದೊತ್ತಿನ ಊಟ ನೀಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಅಳಲು ತೋಡಿಕೊಂಡಿರುವ ಅಲ್ಲಾ ಬಕ್ಷ್ ಕುಟುಂಬದಲ್ಲಿ ಆರು ಮಕ್ಕಳಿದ್ದಾರೆ. ನನ್ನ ಹೆಂಡತಿಯನ್ನು ಹೂಳಲು ತನ್ನ ಬಳಿ ಹಣವಿಲ್ಲ. ಸ್ಥಳೀಯ ನಿವಾಸಿಗಳು ಬೀಬಿ ಸಮಾಧಿಗಾಗಿ ಹಣವನ್ನು ಸಂಗ್ರಹಿಸಿದರು ಎಂದು ಹೇಳಿಕೊಂಡಿದ್ದಾರೆ.
ಲಾಕ್ಡೌನ್ನಿಂದಾಗಿ ಪಾಕಿಸ್ತಾನದಲ್ಲಿ ಹಾಹಾಕಾರ, ರೇಷನ್ಗಾಗಿ ಬೀದಿಗಿಳಿದ ಲಕ್ಷಾಂತರ ಜನ
ಪ್ರಾಂತ್ಯದ ಗ್ರಾಮೀಣ ಪ್ರದೇಶದ ಬಡವರಿಗೆ ಪಡಿತರವನ್ನು ಉಚಿತವಾಗಿ ವಿತರಿಸಲು ಸರ್ಕಾರ ವ್ಯವಸ್ಥೆ ಮಾಡಿರುವುದರಿಂದ ತಕ್ಷಣ ವರದಿ ಸಲ್ಲಿಸುವಂತೆ ಮಿರ್ಪುರ್ ಖಾಸ್ ಆಡಳಿತಕ್ಕೆ ಸೂಚಿಸಲಾಗಿದೆ.
ಪಾಕಿಸ್ತಾನ (Pakistan)ದಲ್ಲಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಲಾಕ್ಡೌನ್ ಜಾರಿಯಲ್ಲಿದೆ. ಪಾಕಿಸ್ತಾನದಲ್ಲಿ ಈ ಕಾಯಿಲೆಯಿಂದ ಇಲ್ಲಿಯವರೆಗೆ 176 ಜನರು ಸಾವನ್ನಪ್ಪಿದ್ದರೆ ಸುಮಾರು 8,500 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ.