ಮುಂಬೈ: ಲಾಕ್ ಡೌನ್ ಅವಧಿಯಲ್ಲಿ ಜನರ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕ ಬ್ಯಾಂಕುಗಳು ವಾಟ್ಸಾಪ್ ಜೊತೆ ಕೈಜೋಡಿಸಿವೆ. ಈ ಸಹಭಾಗಿತ್ವದಲ್ಲಿ, ಮೆಸೇಜಿಂಗ್ ಆ್ಯಪ್ ಮೂಲಕ ಮೂಲ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಗುರಿ ಹೊಂದಲಾಗಿದೆ. ಇದು ಬ್ಯಾಂಕುಗಳು ಮತ್ತು ವಾಟ್ಸಾಪ್ ಎರಡಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ.
ಫೇಸ್ಬುಕ್ ಒಡೆತನದ ಸೋಷಿಯಲ್ ಮೀಡಿಯಾ ಕಂಪನಿಯು ಕೆಲವು ದೊಡ್ಡ ಬ್ಯಾಂಕುಗಳೊಂದಿಗೆ ತನ್ನ ಅಸ್ತಿತ್ವದಲ್ಲಿರುವ ಸಹಭಾಗಿತ್ವವನ್ನು ಮುಂದುವರೆಸಿದೆ. ಈ ಬ್ಯಾಂಕುಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಆರ್ಬಿಎಲ್ ಬ್ಯಾಂಕ್ ಶಾಮೀಲಾಗಿವೆ.
ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಏಕೀಕರಣವು ಬ್ಯಾಂಕುಗಳಿಗೆ ಬ್ಯಾಲೆನ್ಸ್ ಏನ್ಕ್ವೈರಿ, ರುಟೀನ್ ಅಪ್ಡೇಟ್, ಮೊರೆಟೋರಿಯಂ ಸೌಲಭ್ಯ, ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಹಾಗೂ ಕೆಲ ಸಂದರ್ಭಗಳಲ್ಲಿ ಉಳಿತಾಯ ಖಾತೆ ತೆರೆಯುವಿಕೆಯಂತಹ ಮೂಲಭೂತ ಸೇವೆಗಳನ್ನು ಒದಗಿಸಲುಸಹಾಯ ಮಾಡಿದೆ.
ದೇಶಾದ್ಯಂತ ಲಾಕ್ ಡೌನ್ ಇರುವುದರಿಂದ ಇಂತಹ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಾರಣ, ಈ ಅವಧಿಯಲ್ಲಿ ಬ್ಯಾಂಕುಗಳ ಶಾಖೆಗಳು ಅಗತ್ಯ ಸೇವೆಗಳನ್ನು ಮಾತ್ರ ಒದಗಿಸುತ್ತಿವೆ. ಅಷ್ಟೇ ಅಲ್ಲ ಬ್ಯಾಂಕ್ ಗಳೇ ಸ್ವತಃ ತಮ್ಮ ಗ್ರಾಹಕರಿಗೆ ಡಿಜಿಟಲ್ ಸೇವೆಗಳನ್ನು ಬಳಸಲು ಪ್ರೋತ್ಸಾಹಿಸುತ್ತಿವೆ.
ಉದಾಹರಣೆಗಾಗಿ ಐಸಿಐಸಿಐ ಬ್ಯಾಂಕ್ ಅನ್ನು ತೆಗೆದುಕೊಳ್ಳೋಣ. 'ವಾಟ್ಸಾಪ್ ಬ್ಯಾಂಕಿಂಗ್' ಸೇವೆಗಳಿಗೆ ಅರ್ಜಿ ಸಲ್ಲಿಸಲು ಬ್ಯಾಂಕ್ ತನ್ನ ಸುಮಾರು 10 ಲಕ್ಷ ಬಳಕೆದಾರರನ್ನು ಅದು ಕೇಳಿಕೊಂಡಿದೆ. ಇದೇ ವೇಳೆ ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ವೇದಿಕೆಯಲ್ಲಿ ತಿಂಗಳಿಗೆ 15 ಲಕ್ಷ ಸಂದೇಶಗಳನ್ನು ನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥ (ಡಿಜಿಟಲ್ ಚಾನೆಲ್ ಮತ್ತು ಪಾಲುದಾರಿಕೆ) ಬಿಜಿತ್ ಭಾಸ್ಕರ್, “ಗ್ರಾಹಕರ ಪ್ರತಿಕ್ರಿಯೆಯಿಂದ ನಾವು ತುಂಬಾ ಉತ್ಸುಕರಾಗಿದ್ದೇವೆ. ಇದನ್ನು ಗಮನಿಸಿ ನಾವು ಶೀಘ್ರದಲ್ಲಿಯೇ ಉಳಿತಾಯ ಖಾತೆ ತೆರೆಯುವಿಕೆ ಹಾಗೂ ಲೋನ್ ಮೊರೆಟೋರಿಯಂ ಆರಿಸುವ ಆಯ್ಕೆಯಂತಹ ಹಲವು ವೈಶಿಷ್ಟ್ಯಗಳನ್ನು ನಾವು ಇದರಲ್ಲಿ ಜೋಡಿಸಿದ್ದೇವೆ” ಎಂದಿದ್ದಾರೆ.
ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಕೊಟಕ್ ಮಹೀಂದ್ರಾ ಬ್ಯಾಂಕಿನ ಮುಖ್ಯ ಡಿಜಿಟಲ್ ಅಧಿಕಾರಿ ದೀಪಕ್ ಶರ್ಮಾ, ಮೊದಲು ಬ್ಯಾಂಕ್ ಗಳು ತಮ್ಮ ಗ್ರಾಹಕರನ್ನು ಸಂಪರ್ಕಿಸಲು sms ಹಾಗೂ IVR ಗಳಂತಹ ಸೇವೆಗಳನ್ನು ಬಳಸುತ್ತಿದ್ದವು. ವಾಟ್ಸ್ ಆಪ್ ನಿಂದ ಈ ಸೇವೆ ಒದಗಿಸುವುದು ಇನ್ನಷ್ಟು ಸುಲಭವಾಗಿದೆ ಎಂದಿದ್ದಾರೆ.