ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಹರಿದುಬರುತ್ತಿದೆ ಶುಭಾ ಹಾರೈಕೆಗಳ ಮಹಾಪೂರ

ಹಿಂದೆ ಬಹಳ ವರ್ಷ ಜೊತೆಗೇ ಇದ್ದ ಮತ್ತು ಈಗ ಬದ್ದ ರಾಜಕೀಯ ವೈರಿಗಳೆಂದೇ ಹೇಳಲಾಗುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, 'ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರಿಗೆ ಕೊರೊನ ಸೋಂಕು ತಗುಲಿರುವುದು ಕೇಳಿ ಮನಸ್ಸಿಗೆ ಬಹಳ ನೋವುಂಟಾಯಿತು ಆದಷ್ಟು ಅವರು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.  

Last Updated : Aug 4, 2020, 11:19 AM IST
ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಹರಿದುಬರುತ್ತಿದೆ ಶುಭಾ ಹಾರೈಕೆಗಳ ಮಹಾಪೂರ title=

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ (Siddaramaiah)  ಅವರಿಗೆ  ಕೋವಿಡ್ -19 (Covid 19)  ಪಾಸಿಟಿವ್ ಇರುವುದು ದೃಢಪಡುತ್ತಿದ್ದಂತೆ ಅವರ ಪಕ್ಷದ ನಾಯಕರು, ವಿರೋಧ ಪಕ್ಷದ ಮುಖಂಡರು, ಸಚಿವರು ಸೇರಿದಂತೆ ಅವರು ಬೇಗ ಗುಣಮುಖರಾಗಲೆಂದು ಶುಭಾ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿದೆ.

ಸಿದ್ದರಾಮಯ್ಯ ಅವರಿಗೂ COVID-19 ಪಾಸಿಟಿವ್; ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ಆಗುವಂತೆ ಮನವಿ

'ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು‌ ಶೀಘ್ರವೇ ಗುಣಮುಖರಾಗಲಿ. ಉತ್ತಮ ಆರೋಗ್ಯದೊಂದಿಗೆ ಎಂದಿನಂತೆ ತಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಲಿ' ಎಂದು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ (BS Yediyurappa)  ಹಾರೈಸಿದ್ದಾರೆ. ನಿನ್ನೆ ಯಡಿಯೂರಪ್ಪ ಬಗ್ಗೆ‌ ಸಿದ್ದರಾಮಯ್ಯ ಇದೇ ರೀತಿ ವಿಶ್ ಮಾಡಿದ್ದರು.

ಹಿಂದೆ ಬಹಳ ವರ್ಷ ಜೊತೆಗೇ ಇದ್ದ ಮತ್ತು ಈಗ ಬದ್ದ ರಾಜಕೀಯ ವೈರಿಗಳೆಂದೇ ಹೇಳಲಾಗುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda), 'ಆತ್ಮೀಯರಾದ ಶ್ರೀ ಸಿದ್ದರಾಮಯ್ಯ ಅವರಿಗೆ ಕೊರೊನ ಸೋಂಕು ತಗುಲಿರುವುದು ಕೇಳಿ ಮನಸ್ಸಿಗೆ ಬಹಳ ನೋವುಂಟಾಯಿತು ಆದಷ್ಟು ಅವರು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ರಾಜಕೀಯವಾಗಿ ತೀವ್ರ ಭಿನ್ನಾಭಿಪ್ರಾಯವುಳ್ಳ ಮತ್ತೊಬ್ಬ ಮಾಜಿ‌ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರಂತೂ ಸಿದ್ದರಾಮಯ್ಯ ಬಗ್ಗೆ ಬಲು ಮೆಚ್ಚುಗೆಯ ಮಾತನಾಡಿ ಬೇಗ ಹುಷಾರಾಗಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಶುಭ ಹಾರೈಸಿದ್ದಾರೆ. ಈ‌ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ವಿರೋಧ ಪಕ್ಷದ ನಾಯಕ @siddaramaiah ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಮನಸ್ಸಿಗೆ ಘಾಸಿಯಾಯಿತು. ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ಅಲ್ಲದೆ 'ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜನಪ್ರತಿನಿಧಿಗಳು ಅತಿಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಚಾಚೂತಪ್ಪದೆ ಪಾಲಿಸುವಂತೆ ಮನವಿ ಮಾಡುತ್ತೇನೆ' ಎಂದು ಮನವಿ ಮಾಡಿಕೊಂಡಿದ್ದಾರೆ.

ಹಾಗೂ 'ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳುವ ಮೂಲಕ ಅಮೂಲ್ಯವಾದ ಜೀವ ಮತ್ತು ಜೀವನವನ್ನು ರಕ್ಷಿಸಿಕೊಳ್ಳಬೇಕು ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ (DK Shivakumar) ಕೂಡ 'ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶೀಘ್ರವಾಗಿ ಗುಣಮುಖರಾಗುವಂತೆ ಆಶಿಸಿದ್ದಾರೆ.

ಆಲ್ ಇಂಡಿಯಾ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (BV Srinivas) ಅವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ವಿರೋಧ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಬೇಸರವಾಯಿತು. ಅವರು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದುಃಖದ ವಿಚಾರ.  ಶ್ರೀಯುತ ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಆಶಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ಟ್ವೀಟ್ 'ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ಹಿನ್ನಲೆಯಲ್ಲಿ ಅವರು ಬೇಗ ಚೇತರಿಸಿಕೊಳ್ಳುವಂತೆ ನಾನು ಪ್ರಾರ್ಥನೆ ಮಾಡುವುದಾಗಿ ತಿಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, 'ಸಿದ್ದರಾಮಯ್ಯ ರಾಜ್ಯ ಕಂಡ ಆದರ್ಶ ರಾಜಕಾರಣಿ ಪಾಸಿಟಿವ್ ಬದಿರುವುದು ನೋವಾಗಿದೆ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು, 'ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೋವಿಡ್19 ಸೋಂಕು ತಗುಲಿರುವ ಸುದ್ದಿ ಕೇಳಿ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ಇದಲ್ಲದೆ ಮಾಜಿ ಕೆಪಿಸಿಸಿ ಅಧ್ಯಕ್ಷ, ದಿನೇಶ್ ಗುಂಡೂರಾವ್, ಮಾಜಿ ಮಂತ್ರಿ ಜಮೀರ್ ಅಹಮದ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹಮದ್, ಈಶ್ವರ ಖಂಡ್ರೆ ಮತ್ತಿತರರು ಕೂಡ ಸಿದ್ದರಾಮಯ್ಯ ಬೇಗ ಹುಷಾರಾಗುವಂತೆ ಹಾರೈಸಿದ್ದಾರೆ.
 

Trending News