ನವದೆಹಲಿ: ಚೀನಾ ಸೇನೆಯು ಭಾರತದ ಕೆಲ ಭೂಭಾಗವನ್ನು ಆಕ್ರಮಿಸಿಕೊಂಡಿದೆ ಎಂಬ ದಟ್ಟ ವದಂತಿಗಳಿದ್ದು ಕೂಡಲೇ ಚೀನಾ ವಶಪಡಿಸಿಕೊಂಡಿರುವ ಭಾರತದ ಭೂಭಾಗವನ್ನು ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆಗ್ರಹಿಸಿದ್ದಾರೆ. ಜೊತೆಗೆ ಚೀನಾದಿಂದ ಭಾರತದ ಭೂಮಿ ವಾಪಸ್ ಪಡೆಯುವುದು ಕೂಡ ಆ್ಯಕ್ಟ್ ಆಫ್ ಗಾಢ್ (Act of God)ಗೆ ಬಿಟ್ಟಿದ್ದಾ? ಎಂದು ವ್ಯಂಗ್ಯ ಮಾಡಿದ್ದಾರೆ.
ಪ್ರತಿದಿನವೂ ಟ್ವೀಟರ್ ಮೂಲಕ ಖಡಕ್ ಪ್ರಶ್ನೆ ಕೇಳುವ ಸಂಸದರೂ ಆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಪೂರ್ವ ಲಡಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
The Chinese have taken our land.
When exactly is GOI planning to get it back?
Or is that also going to be left to an 'Act of God'?
— Rahul Gandhi (@RahulGandhi) September 11, 2020
ಗಡಿಯಲ್ಲಿ ಚೀನಾದ (China) ಸೇನೆ ಭಾರತದ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿದೆ. ಇದನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ಯಾವ ಯೋಚನೆ ಮಾಡುತ್ತಿದೆ? ಅಥವಾ ಇದನ್ನು ಆಕ್ಟ್ ಆಫ್ ಗಾಡ್ ಎಂದು ದೇವರ ಕಾರ್ಯಕ್ಕೆ ಬಿಡಲಾಗುವುದೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ಮೇ ತಿಂಗಳ 5ನೇ ತಾರೀಖಿನಿಂದ ಆರಂಭವಾದ ಗಡಿ ಸಂಘರ್ಷ ಈಗಾಗಲೇ ಗಲ್ವಾನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡಿದೆ. ಈನಡುವೆ ಚೀನಾ ಸೇನೆ ಈಗ ಪಾಂಗೊಂಗ್ ಸರೋವರದತ್ತ ಖ್ಯಾತೆ ತೆಗೆದಿದೆ. ಚೀನಾ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಗಡಿ ಗಸ್ತಿನಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಕೂಡ ತಿಳಿದುಬಂದಿದೆ. ಈ ಎಲ್ಲಾ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಗಡಿ ವಿಷಯದಲ್ಲಿ ಗಂಭೀರ ನಿಲುವು ತೆಳೆಯುವಂತೆ ಪ್ರತಿದಿನ ಒತ್ತಾಯಿಸುತ್ತಲೇ ಇದ್ದಾರೆ.