ನಾಳೆಯಿಂದ ಎರಡು ದಿನ 5 ಜಿಲ್ಲೆಗಳಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.3 ಮತ್ತು ಏ.4ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 5 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 

Last Updated : Apr 2, 2018, 09:23 PM IST
ನಾಳೆಯಿಂದ ಎರಡು ದಿನ 5 ಜಿಲ್ಲೆಗಳಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ title=

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.3 ಮತ್ತು ಏ.4ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 

ಏ.3ರಂದು ಬೆಳಿಗ್ಗೆ 11.30ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿ ರೋಡ್ ಶೋ ನಡೆಸಿ, ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಹೊನ್ನಾಳಿಗೆ ತೆರಳಲಿದ್ದಾರೆ. ಅಲ್ಲಿಂದ ಹರಿಹರದಲ್ಲೂ ರೋಡ್ ಶೋ ನಡೆಸಿ ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಏ.4ರಂದು ಬೆಳಿಗ್ಗೆ ಚಿತ್ರದುರ್ಗದ ಹೊಳಲ್ಕೆರೆಗೆ ತೆರಳಿ ಆ ಭಾಗದ ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರ ಸಭೆ ನಡೆಸಲಿದ್ದಾರೆ. ನಂತರ ತುಮಕೂರಿನಲ್ಲಿ ರೋಡ್ ಶೋ ನಡೆಸಿ, ಅಲ್ಲಿಂದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವಕುಮಾರ ಸ್ವಾಮಿಜಿಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಅದೇ ದಿನ ಕುಣಿಗಲ್‌‌‌ನಲ್ಲಿ ರೋಡ್ ಶೋ ನಡೆಸಿ, ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಹುಲ್‌ ನಂತರ ದೆಹಲಿಗೆ ತೆರಳಲಿದ್ದಾರೆ. 

ಚುನಾವಣೆ ಅಂಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧೀ ನೇತೃತ್ವದಲ್ಲಿ ಕಾಂಗ್ರೆಸ್  ಹಮ್ಮಿಕೊಂಡಿರುವ ಜನಾಶಿರ್ವಾದ ಯಾತ್ರೆ ಏ.8ರಂದು ಸಮಾರೋಪಗೊಳ್ಳಲಿದೆ.

Trending News