No Clearance To Fly: ಅಫ್ಘಾನ್ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡ 6 ವಿಮಾನಗಳು..!

ಅಮೆರಿಕದ ನೂರಾರು ನಾಗರಿಕರು, ಸಿಬ್ಬಂದಿಗಳು ಇನ್ನೂ ಕೂಡ ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಲ್ಲಿಯೇ ಸಿಲುಕಿಕೊಂಡಿದ್ದಾರೆನ್ನುವ ಮಾಹಿತಿ ಹೊರಬಿದ್ದಿದೆ.

Written by - Puttaraj K Alur | Last Updated : Sep 6, 2021, 06:12 PM IST
  • ಅಫ್ಘಾನಿಸ್ತಾನದಲ್ಲಿಯೇ ಇನ್ನೂ ಸಿಲುಕಿಕೊಂಡಿರುವ ಅಮೆರಿಕದ ನಾಗರಿಕರು, ಸಿಬ್ಬಂದಿಗಳು
  • ಹಾರಾಟ ನೆಡಸಲು ತಾಲಿಬಾನ್ ಅನುಮತಿಗಾಗಿ ಕಾಯುತ್ತಿರುವ 6 ಚಾರ್ಟರ್ ಫ್ಲೈಟ್‌ಗಳು
  • ತನ್ನ ಬೇಡಿಕೆ ಈಡೇರಿಸಿಕೊಳ್ಳಲು ಅಮೆರಿಕನ್ನರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದೆಯೇ ತಾಲಿಬಾನ್
No Clearance To Fly: ಅಫ್ಘಾನ್ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡ 6 ವಿಮಾನಗಳು..!  title=
ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ 6 ವಿಮಾನಗಳು (Photo Courtesy:@ Wionews)

ವಾಷಿಂಗ್ಟನ್: ಆಗಸ್ಟ್ 31ರೊಳಗೆ ತನ್ನ ಸೈನಿಕರು ಸೇರಿದಂತೆ ನಾಗರಿಕರನ್ನು ಅಫ್ಘಾನಿಸ್ತಾನ(Afghanistan)ದಿಂದ ಸ್ಥಳಾಂತರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದರು. ಬರೋಬ್ಬರಿ 20 ವರ್ಷಗಳ ಬಳಿಕ ಅಮೆರಿಕ ಪಡೆ ಪೂರ್ತಿಯಾಗಿ ಅಫ್ಘಾನಿಸ್ತಾನದಿಂದ ಹೊರನಡೆದಿತ್ತು. ನಾಗರಿಕರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ ಅಂತಾ ದೊಡ್ಡಣ್ಣ ಹೇಳಿಕೊಂಡಿತ್ತು. ಆದರೆ ನಿಜವಾಗಿಯೂ ಅಮೆರಿಕ ಸಂಪೂರ್ಣವಾಗಿ ತನ್ನ ನಾಗರಿಕರನ್ನು ಸ್ಥಳಾಂತರ ಮಾಡಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಹೌದು, ಅಮೆರಿಕ(United States)ದ ನೂರಾರು ನಾಗರಿಕರು, ಸಿಬ್ಬಂದಿಗಳು ಇನ್ನೂ ಕೂಡ ತಾಲಿಬಾನ್ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಲ್ಲಿಯೇ ಸಿಲುಕಿಕೊಂಡಿದ್ದಾರೆನ್ನುವ ಮಾಹಿತಿ ಹೊರಬಿದ್ದಿದೆ. ಅಮೆರಿಕನ್ನರು ಸೇರಿದಂತೆ ಸುಮಾರು 1 ಸಾವಿರ ಜನರು ಅಫ್ಘಾನಿಸ್ತಾನದಲ್ಲಿ ತಮ್ಮ ಚಾರ್ಟರ್ ವಿಮಾನಗಳ ಹಾರಾಟಕ್ಕೆ ತಾಲಿಬಾನ್ ಅನುಮತಿಗಾಗಿ ಕಾಯುತ್ತಿದ್ದಾರೆಂದು ಸಂಘಟಕರೊಬ್ಬರು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇಷ್ಟು ದಿನವಾದರೂ ತಮ್ಮನ್ನು ಕರೆಸಿಕೊಳ್ಳಲಾಗದ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್(United States Department of State) ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ

ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲಿತ ಅಫ್ಘಾನ್ ಸರ್ಕಾರ ಪತನಗೊಂಡ ಬಳಿಕ ಆಗಸ್ಟ್ 15 ರಂದು ಕಾಬೂಲ್‌ ಅನ್ನು ತಾಲಿಬಾನ್(Taliban) ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. 2 ದಶಕಗಳ ಸುದೀರ್ಘ ಅವಧಿಯ ಬಳಿಕ ಅಮೆರಿಕ ಸೇನೆ ಅಫ್ಘಾನ್ ದೇಶದಿಂದ ಕಾಲ್ಕಿತ್ತಿದೆ. ಆದರೆ ತಾಲಿಬಾನ್ ಅನುಮತಿ ಇಲ್ಲದ ಕಾರಣ ಉತ್ತರ ನಗರವಾದ ಮಜರ್-ಐ-ಶರೀಫ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Mazar-i-Sharif International Airport)ದಲ್ಲಿ 3 ವಿಮಾನಗಳು ಸಿಕ್ಕಿಹಾಕಿಕೊಂಡಿವೆ. ಅಧಿಕಾರಿಗಳ ವಿಳಂಬದಿಂದ ಹತಾಶೆಗೊಂಡಿರುವ ಅನೇಕರು ವಿಮಾನ ಹಾರಾಟಕ್ಕೆ ಅನುಮತಿ ಪಡೆದುಕೊಳ್ಳಲು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ವಿಫಲವಾಗಿದೆ ಎಂದು ದೂರಿದ್ದಾರೆ.

‘ಅಫ್ಘಾನಿಸ್ತಾನ(Afghanistan)ದಲ್ಲಿಯೇ ಸಿಲುಕಿಕೊಂಡಿರುವ ಅಮೆರಿಕ ನಾಗರಿಕರ ಜೀವನವನ್ನು ಅಪಾಯದಲ್ಲಿರಿಸಿದ್ದಕ್ಕೆ ಅಧಿಕಾರಿಗಳೇ ಜವಾಬ್ದಾರರು. ಸಮಸ್ಯೆಯ ಸೂಕ್ಷ್ಮತೆಯನ್ನು ಅರಿತುಕೊಂಡು ಅವರು ತಮ್ಮ ನಾಗರಿಕರ ರಕ್ಷಣೆಗೆ ಮುಂದಾಗಬೇಕು’ ಎಂದು ಸಂಘಟಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಅಧಿಕಾರಿಯೊಬ್ಬರು, ಅಮೆರಿಕನ್ನರು ಅಪಾಯದಲ್ಲಿದ್ದಾರೆಂಬ ಕಲ್ಪನೆಯನ್ನೇ ಪ್ರಶ್ನಿಸಿದ್ದಾರೆ. ‘ಅಮೆರಿಕ ಸರ್ಕಾರವು ತನ್ನ ಯಾವುದೇ ನಾಗರಿಕರು ಮಜರ್-ಐ-ಷರೀಫ್ ವಿಮಾನ ನಿಲ್ದಾಣದಿಂದ ಹೊರಡಲು ಪ್ರಯತ್ನಿಸುತ್ತಿರುವ ಬಗ್ಗೆ ದೃಢಪಡಿಸಿಲ್ಲ’ವೆಂದು ಅವರು ಹೇಳಿದ್ದಾರೆ. ಅಫ್ಘಾನಿಸ್ತಾನ(Afghanistan)ದಲ್ಲಿ ಸಿಲುಕಿಕೊಂಡಿರುವ 3 ಚಾರ್ಟರ್ ಫ್ಲೈಟ್‌ಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಅಫ್ಘಾನಿಸ್ತಾನದಲ್ಲಿ ಅಮೆರಿಕದ ಯಾವುದೇ ನಾಗರಿಕರು ಇಲ್ಲ, ಆದ್ದರಿಂದ ಚಾರ್ಟರ್ ಫ್ಲೈಟ್‌ಗಳ ಮೂಲ ವಿವರಗಳನ್ನು ಖಚಿತಪಡಿಸಲು ಸಾಧ್ಯವಿಲ್ಲವೆಂದು’ ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕ ಪ್ರತಿನಿಧಿಗಳ ವಿದೇಶಾಂಗ ವ್ಯವಹಾರಗಳ ಸಮಿತಿಯ ಹಿರಿಯ ರಿಪಬ್ಲಿಕನ್ ಮೈಕ್ ಮೆಕ್‌ಕಾಲ್, ‘ಅಮೆರಿಕನ್ನರೊಂದಿಗೆ 6 ವಿಮಾನಗಳು ಮಜರ್-ಐ-ಶರೀಫ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಹಾರಾಟ ನಡೆಸಲು ತಾಲಿಬಾನ್ ಅನುಮತಿ ಸಿಕ್ಕಿಲ್ಲ’ವೆಂದು ಹೇಳಿದ್ದರು. ತಾಲಿಬಾನ್ ತನ್ನ ಬೇಡಿಕೆಗಳ ಪೂರೈಕೆಗಾಗಿ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದೆ ಎಂದು ಅವರು ಹೇಳಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News