ನಾಳೆ ತೆರೆಗೆ ಬರಲಿದ್ದಾರೆ ಹೆಬ್ಬೆಟ್ ರಾಮಕ್ಕ!

ನಟಿ ತಾರಾ ಅಭಿನಯದ, ಮಹಿಳಾ ಪ್ರಾತಿನಿಧ್ಯದ ಪರ ದನಿ ಎತ್ತುವ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಹೆಬ್ಬೆಟ್ ರಾಮಕ್ಕ' ನಾಳೆ(ಏ.27) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

Last Updated : Apr 26, 2018, 02:39 PM IST
ನಾಳೆ ತೆರೆಗೆ ಬರಲಿದ್ದಾರೆ ಹೆಬ್ಬೆಟ್ ರಾಮಕ್ಕ! title=

ಬೆಂಗಳೂರು : ನಟಿ ತಾರಾ ಅಭಿನಯದ, ಮಹಿಳಾ ಪ್ರಾತಿನಿಧ್ಯದ ಪರ ದನಿ ಎತ್ತುವ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಹೆಬ್ಬೆಟ್ ರಾಮಕ್ಕ' ನಾಳೆ(ಏ.27) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

ಅನಕ್ಷರಸ್ಥ ಮಹಿಳೆಯೊಬ್ಬಳು ಜನಪ್ರತಿನಿಧಿಯಾಗಿ ಆಯ್ಕೆಯಾದಾಗ ಆಕೆಯನ್ನು ಪತಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾನೆ, ಆ ಮಹಿಳೆ ಅದನ್ನು ಹೇಗೆ ಮೀರಿ ನಿಲ್ಲುತ್ತಾಳೆ ಎಂಬುದನ್ನು ತೋರಿಸುವ ಪಾತ್ರಕ್ಕೆ ನಟಿ ತಾರಾ ಜೀವ ತುಂಬಿದ್ದಾರೆ. 

ಗ್ರಾಮ ಪಂಚಾಯಿತಿ ಸದಸ್ಯೆ ಕಥೆಯೊಂದಕ್ಕೆ ರೂಪ ಕೊಟ್ಟು ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಗಳ ಕುರಿತಾಗಿ ಹೇಳುವ ಮೂಲಕ ಶೇಕಡ ಐವತ್ತು ರಷ್ಟು ಮಹಿಳಾ ಮೀಸಲಾತಿಯನ್ನು ಪಡೆದ ಹೆಣ್ಣು ಮಕ್ಕಳು ರಾಜಕೀಯ ಪ್ರವೇಶ ಮಾಡಿದಾಗ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಅವರ ಹಿಂದೆ ಕಾಣದ ಕೈಗಳು ಏನೆಲ್ಲ ಕೆಲಸಗಳನ್ನು ಮಾಡುತ್ತದೆ ಎಂಬುದನ್ನು ಎಳೆಎಳೆಯಾಗಿ ಚಿತ್ರದಲ್ಲಿ ತೆರೆದಿಡುವ ಪ್ರಯತ್ನವನ್ನು ಚಿತ್ರದ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಮಾಡಿದ್ದಾರೆ. 

ಯಾವುದೇ ಪಾತ್ರ ಕೊಟ್ಟರೂ ಅದ್ಭುತವಾಗಿ ನಿಭಾಯಿಸುವ ನಟಿ ತಾರಾ ಅವರು ಈ ಚಿತ್ರದಲ್ಲಿಯೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈ ಹೆಗ್ಗಳಿಕೆಗೆ ನಟ ದೇವರಾಜ್ ಕೂಡ ಹೊರತಾಗಿಲ್ಲ. ಹೆಬ್ಬೆಟ್ ರಾಮಕ್ಕನ ಪತಿಯ ಪಾತ್ರದಲ್ಲಿ ದೇವರಾಜ್ ಅಭಿನಯಿಸಿದ್ದಾರೆ. ಶೇ.90ರಷ್ಟು ಭಾಗ ರಂಗಭೂಮಿ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರ ಸಮಾಜಕ್ಕೆ ಒಂದು ಸಂದೇಶ ನೀಡಲಿದೆ. 

ಈ ಚಿತ್ರಕ್ಕೆ ಉದ್ಯಮಿ ಎಸ್.ಎ. ಪುಟ್ಟರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವಿದೆ. ಪ್ರೊ.ಎಸ್.ಜೆ.ಸಿದ್ದರಾಮಯ್ಯ ಅವರು ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ. 

Trending News