ಸಮುದಾಯ ರಾಜಕಾರಣಕ್ಕೆ ಮುನ್ನಡಿ ಬರೆದ ಸ್ವರಾಜ್ ಇಂಡಿಯಾ ಪಕ್ಷದ ಪ್ರಣಾಳಿಕೆ

     

Last Updated : May 5, 2018, 12:43 AM IST
ಸಮುದಾಯ ರಾಜಕಾರಣಕ್ಕೆ ಮುನ್ನಡಿ ಬರೆದ ಸ್ವರಾಜ್ ಇಂಡಿಯಾ ಪಕ್ಷದ ಪ್ರಣಾಳಿಕೆ title=

ಬೆಂಗಳೂರು: ಪರ್ಯಾಯ ರಾಜಕಾರಣದ ಕನಸಿನೊಂದಿಗೆ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ಸ್ವರಾಜ್ ಇಂಡಿಯಾ ಪಕ್ಷವು ಈ ಬಾರಿ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಹಿನ್ನಲೆಯಲ್ಲಿ ಈಗ ವಿಧಾನಸಭಾ ಚುನಾವಣೆಯ ಸಮುದಾಯದ ಪ್ರಣಾಳಿಕೆಯನ್ನು ಗುರುವಾರದಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಮೂಲಕ ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ನಾಯಕರಾದ ಒಬ್ಬರಾದ ದೇವನೂರ ಮಹಾದೇವ ಅವರು ಪ್ರಣಾಳಿಕೆ ಬಿಡುಗಡೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಸ್ವರಾಜ್ ಇಂಡಿಯಾ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಲಿತ, ರೈತ ಮತ್ತು ಪ್ರಗತಿಪರ ಸಂಘಟನಾ ಶಕ್ತಿಗಳ ಜೊತೆ ಸೇರಿ ಚುನಾವಣಾ ರಾಜಕಾರಣಕ್ಕೆ ಅಡಿಯಿಟ್ಟಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆರಳಿಕೆ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದರೂ ಸಹಿತ, ಪಕ್ಷದ ಆಶಯಗಳು ಪರಿಣಾಮಕಾರಿಯಾಗಿವೆ.ಆದ್ದರಿಂದ ಸ್ವರಾಜ್ ಇಂಡಿಯಾ ಪಕ್ಷವು ಈಗ ಕರ್ನಾಟಕದ ಬಗೆಗಿನ ಕನಸುಗಳನ್ನು ಚುನಾವಣಾ ಪ್ರಣಾಳಿಕೆಯ ಮೂಲಕ ಜನರ ಮುಂದಿಟ್ಟಿದೆ.

ಈ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಸಹಭಾಗಿ ಪ್ರಜಾಪ್ರಭುತ್ವದ ಆಶಯಗಳಿಗೆ ಹೆಚ್ಚು ಒತ್ತು ನೀಡಿ ರಾಜಕೀಯವನ್ನು  ಕೇವಲ ಕೆಲವೇ ಹಿತಾಸಕ್ತಿಗಳಿಗೆ ಸೀಮಿತಗೊಳಿಸದೆ "ಕೆಲವರಿಗೆ ಅಲ್ಲ ಸಮುದಾಯಕ್ಕೆ ಎಲ್ಲಾ" ಎನ್ನುವ ಧ್ಯೇಯೋದ್ದೇಶದ ಮೂಲಕ ಸಮುದಾಯ ರಾಜಕಾರಣವನ್ನು ಪ್ರತಿನಿಧಿಸುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಸ್ವರಾಜ್ ಇಂಡಿಯಾ ಪಕ್ಷದ  ಪ್ರಣಾಳಿಕೆಯಲ್ಲಿನ ಮುಖ್ಯ ಅಂಶಗಳು :

ಬರಮುಕ್ತ ಕರ್ನಾಟಕ: ಜಲ ಸಾಕ್ಷರತೆ ಮೂಲಕ ,ಕೆರೆ ನದಿ, ಅರಣ್ಯ,ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವುದು.ಆ ಮೂಲಕ ಹಸಿರು ಭೂಮಿಯನ್ನು ಒಂದು ಆಂದೋಲನವಾಗಿ ರೂಪಿಸುವುದು.

-ಹಳ್ಳಿಗಳಲ್ಲೇ ಅರಣ್ಯ ಕೃಷಿಯನ್ನು ಹೆಚ್ಚಿಸುವುದು ಆ ಮೂಲಕ ಬೀಳುಭೂಮಿಯನ್ನು ಅಭಿವೃದ್ದಿ ಪಡಿಸುವುದು

- ಸಣ್ಣ ಹೋಬಳಿ ಮಟ್ಟದಲ್ಲಿ  ಪುಟ್ಟ ಪುಟಾಣಿ ಕುಟೀರಗಳ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವುದು.ಆ ಮೂಲಕ  ರೈತರ ಬೆಳೆಗಳಿಗೆ ಮೌಲ್ಯವರ್ಧಿತ ಮಾರಾಟ ವ್ಯವಸ್ಥೆಯನ್ನು ಕಲ್ಪಿಸುವುದು.

ಮಹಿಳಾ ಸಾರಥ್ಯ: ಎಲ್ಲಾ ಕೆಲಸ ಕಾರ್ಯಗಳಲ್ಲೂ ಮಹಿಳಾ ಸಹಭಾಗಿತ್ವಕ್ಕೆ ಆಧ್ಯತೆ ನೀಡುವುದು. ಜಂಟಿ ಭೂ ಖಾತೆಯನ್ನು ತೆರೆಯಯುವುದು ಆ ಮೂಲಕ ಬಂಡವಾಳಶಾಹಿಗಳಿಂದ ರಕ್ಷಿಸುವುದು. ಕೇರಳದ ಕುಟುಂಬ ಶ್ರೀ ಮತ್ತು ತೆಲಂಗಾಣದ  ಬೆಳಕು ಯೋಜನೆಯ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವುದು.

ಉದ್ಯೋಗದ ಸಂಕಷ್ಟ: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸ್ವರಾಜ್ ಇಂಡಿಯಾ ಪಕ್ಷವು  ಈ ಬಾರಿ ಯುವಜನತೆಯ ನಿರುದ್ಯೋಗ ಸಮಸ್ಯೆಗೆ ಕನ್ನಡಿ ಹಿಡಿಯುವ 'ಯುವಜನರ ಪ್ರಣಾಳಿಕೆ 2018', ಇದನ್ನು ಸಹ ಪ್ರಣಾಳಿಕೆ ಎಂದು ಘೋಷಿಸಿದೆ.

ಹಳಿ ತಪ್ಪಿದ ಶಿಕ್ಷಣ: ಸಮಾಜಮುಖಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು.ಇದಕ್ಕಾಗಿ ಜಿಡಿಪಿ ಶೇ 6 ರಷ್ಟು ವೆಚ್ಚವನ್ನು ವಿನಿಯೋಗಿಸುವುದು. ಶಿಕ್ಷಣದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವುದು ಮತ್ತು  ಮೂಲ ವಿಜ್ಞಾನ ಮತ್ತು ಸಮಾಜ ವಿಜ್ನಾನಗಳಿಗೆ ಪ್ರಾಮುಖ್ಯತೆ ನೀಡುವುದು. 

ಆರೋಗ್ಯ ಕ್ಷೇತ್ರ'ದ ಆರೋಗ್ಯ: ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಡಿಪಿ ಶೇ 5 ರಷ್ಟು ಹಣವನ್ನು ವೆಚ್ಚ ಮಾಡುವುದು. ಗ್ರಾಮಂತರ ಪ್ರದೇಶಗಳಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು. ಕಾರ್ಪೋರೆಟ್  ಹಿಡಿತದಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳಿಂದ ಹೊರಬರುವುದು ಮತ್ತು ಅಂತಹ ಒಪ್ಪಂದಗಳನ್ನು ರದ್ದುಗೊಳಿಸುವುದು

ಪ್ರಕಟಣೆ ಸಂಬಂಧಿ: ಪುಸ್ತಕ ಪ್ರಕಟಣೆಗಳನ್ನು  ಸರ್ಕಾರ ಅಥವಾ ಶಾಲಾ ಕಾಲೇಜುಗಳು ನೇರವಾಗಿ ಲೇಖಕ ಅಥವಾ  ಪ್ರಕಾಶಕರಿಂದಲೇ ನೇರವಾಗಿ ಕೊಂಡುಕೊಳ್ಳುವುದು.

-ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವುದು. ಪ್ರತಿ ಶಾಲಾ ಆವರಣಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸುವುದು.

-ಶಾಲಾ ಪಠ್ಯಗಳನ್ನು ರಾಜಕೀಯ ಹಸ್ತಕ್ಷೇಪಗಳಿಂದ ದೂರವಿಡುವುದು ಮತ್ತು ಸಹಬಾಳ್ವೆ ಸಹನೆ ಪ್ರೀತಿಯನ್ನು ಬಿಂಬಿಸುವ ಪಠ್ಯಕ್ರಮವನ್ನು ರಚಿಸಬೇಕು

ಒಳ್ಳೆಯ ಆಳ್ವಿಕೆಗಾಗಿ: ಸ್ವರಾಜ್ ಇಂಡಿಯಾ ಪಕ್ಷವು ಸಹಭಾಗಿತ್ವ ಮತ್ತು ಒಳಗೊಳ್ಳುವಿಕೆಯ ರಾಜಕಾರಣದ ಆಶಯಗಳನ್ನು ಹೊಂದಿರುವುದರಿಂದ ಅದು ಉತ್ತಮ ಆಡಳಿತವನ್ನು ರೂಪಿಸಬೇಕಾದ ಅಂಶಗಳಿಗೆ  ಪ್ರಣಾಳಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಿದೆ. 

-ಸಾರ್ವಜನಿಕ ಸಂಪತ್ತನ್ನು ರಕ್ಷಿಸುವುದು.

-ಲೋಕಾಯುಕ್ತ ಸಂಸ್ಥೆಯನ್ನು ನಿರ್ಭಿಡೆಯಿಂದ ಕಾರ್ಯನಿರ್ವಹಿಸಲು ಅದಕ್ಕೆ ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ನೀಡುವುದು.

-ಪ್ರತಿಯೊಬ್ಬ ಪ್ರಜೆಯ ಆಹಾರದ ಸಾರ್ವಭೌಮತ್ವವನ್ನು ಕಾಪಾಡುವುದು 

-ಸದ್ಯದ ಜಿಎಸ್ಟಿ ತೆರಿಗೆಯು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ. ಆದ್ದರಿಂದ ಸಾಮಾನ್ಯರಿಗೆ ಮತ್ತು  ಒಕ್ಕೂಟ ವ್ಯವಸ್ಥೆಗೆ ಪೂರಕವಾದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದು.

-ಸರ್ಕಾರದ  ನೀತಿಗಳನ್ನು  ಜಾರಿಗೆ ತರಲು ನೀತಿ ನಿರೂಪಣಾ ಸಮಿತಿಯನ್ನು ರೂಪಿಸುವುದು. ಆ ಮೂಲಕ ಖಾಸಗಿ ಹಿತಾಸಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು. 

-ಆಡಳಿತವನ್ನು ವಿಕೇಂದ್ರೀಕರಣಗೊಳಿಸುವುದು ಆ ಮೂಲಕ  ರಾಜ್ಯಗಳಲ್ಲಿನ ಒಕ್ಕೂಟ ವ್ಯವಸ್ಥೆಯನ್ನು ಪುನರ್ ರೂಪಿಸುವುದು .

- ಮುಂದಿನ ಆರೋಗ್ಯಕರ ಮನಸ್ಸನ್ನುಳ್ಳ ಭಾರತವನ್ನು ನಿರ್ಮಿಸಲು ಅಂಗನವಾಡಿಯಿಂದ ನಾಲ್ಕನೇ ತರಗತಿಯಯವರೆಗೆ ಖಾಸಗಿ ರಹಿತ  ಸಮಾನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವುದು. 

 

 

 

 

Trending News