ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕಥುವಾ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಜಮ್ಮು-ಕಾಶ್ಮೀರದಿಂದ ಪಠಾಣ್ಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಈ ಪ್ರಕರಣದ ಮುಕ್ತ ಮತ್ತು ಪಾರದರ್ಶಕ ವಿಚಾರಣೆಗಾಗಿ ಪಠಾಣ್ಕೋಟ್ ಗೆ ವರ್ಗಾವಣೆ ಮಾಡಿದೆ. ಅಲ್ಲದೆ ಕ್ಯಾಮೆರಾ ಮುಂದೆಯೇ ಪ್ರತಿನಿತ್ಯ ಪ್ರಕರಣ ವಿಚಾರಣೆ ನಡೆಸಬೇಕು ಎಂದು ಹೇಳಿದೆ.ಈ ಮಧ್ಯೆ ಬಾಲಕಿಯ ತಂದೆಯು ತನಗೆ, ತನ್ನ ಕುಟುಂಬದವರಿಗೆ ಮತ್ತು ತನ್ನ ವಕೀಲರಾಗಿರುವ ದೀಪಿಕಾ ಸಿಂಗ್ ರಾಜಾವತ್ ಅವರಿಗೆ ಜೀವ ಬೆದರಿಕೆ ಇರುವುದನ್ನು ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.
ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಿಷ್ಪಕ್ಷಪಾತ ಮತ್ತು ಕಳಂಕರಹಿತ ವಿಚಾರಣೆಗೆ ಸಂಬಂಧಿಸಿದಂತೆ ಸ್ವಲ್ಪ ಸಂದೇಹ ಕಂಡು ಬಂದರೂ ಈ ಪ್ರಕರಣದ ವಿಚಾರಣೆಯನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವುದಾಗಿ ಸುಪ್ರೀಂ ಕೋರ್ಟ್ ಈ ಮೊದಲೇ ಹೇಳಿತ್ತು. ಅದರಂತೆ ಇದೀಗ ಪಠಾಣ್ಕೋಟ್ ನ್ಯಾಯಾಲಯಕ್ಕೆ ವಿಚಾರಣೆಯನ್ನು ವರ್ಗಾಯಿಸಿದೆ.
ಅಲ್ಲದೆ, ಪಠಾಣ್ಕೋಟ್ ನ್ಯಾಯಾಲಯದಲ್ಲಿ ಈ ಪ್ರಕರಣದಲ್ಲಿ ವಾದ ಮಂಡಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸುವಂತೆಯೂ, ಸಂತ್ರಸ್ತ ಕುಟುಂಬಕ್ಕೆ, ವಕೀಲರಿಗೆ ಮತ್ತು ಪ್ರಕರಣದ ಸಾಕ್ಷಿದಾರರಿಗೆ ರಕ್ಷಣೆ ಒದಗಿಸುವಂತೆ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.