ನವದೆಹಲಿ: AB De Villiers Retirement - 37 ವರ್ಷದ ಎಬಿ ಡಿವಿಲಿಯರ್ಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಡಿವಿಲಿಯರ್ಸ್ ತಮ್ಮ ಆಟದಿಂದ ಜನರ ಮನ ಗೆಲ್ಲುವಷ್ಟೇ ಸಲೀಸಾಗಿ, ತಮ್ಮ ಸೌಹಾರ್ದ ಮನೋಭಾವದಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಎದುರಾಳಿ ತಂಡಗಳ ಬೌಲರ್ ಗಳಿಗೆ ಅವರು ಸಿಂಹ ಸ್ವಪ್ನಗಾಗಿದ್ದರು. ಇದರ ಹೊರತಾಗಿಯೂ, ಎದುರಾಳಿ ತಂಡಗಳಲ್ಲಿ ಅವರು ಅಭಿಮಾನಿಗಳ ದೊಡ್ಡ ಪಟ್ಟಿಯನ್ನು ಹೊಂದಿದ್ದಾರೆ. ಅದರಲ್ಲಿ ಅವರ ವಿಶೇಷ ಸ್ನೇಹಿತ ಮತ್ತು ಅಭಿಮಾನಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಒಬ್ಬರು. ಡಿವಿಲಿಯರ್ಸ್ ಮತ್ತು ಕೊಹ್ಲಿ ಅವರ ಸ್ನೇಹ ಎಲ್ಲರಿಗೂ ತಿಳಿದಿದೆ. ಇಬ್ಬರೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ದೀರ್ಘಕಾಲ ಆಡುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ನ 'ಮಿಸ್ಟರ್ 360 ಡಿಗ್ರಿ' (Mister 360 Degree) ಆಟಕ್ಕೆ ವಿದಾಯ ಹೇಳಿರುವುದು ಕೊಹ್ಲಿಗೆ ನೋವು ತಂದಿದೆ.
ತಮ್ಮ ಆತ್ಮೀಯ ಗೆಳೆಯ ಡಿವಿಲಿಯರ್ಸ್ ನಿವೃತ್ತಿಯ ಕುರಿತು ಟ್ವೀಟ್ ಮಾಡಿರುವ ವಿರಾಟ್, “ಇದು ನನಗೆ ಹೃದಯ ಮುರಿಯುವ ಸುದ್ದಿ. ಆದರೆ ಯಾವಾಗಲೂ ನೀವು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ ಎಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನಮ್ಮ ಕಾಲದ ಅತ್ಯುತ್ತಮ ಆಟಗಾರ ಮತ್ತು ನಾನು ಭೇಟಿಯಾದ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ. ಬ್ರದರ್ ನೀವು ಕ್ರಿಕೆಟ್ ಮತ್ತು ಆರ್‌ಸಿಬಿಗಾಗಿ ಮಾಡಿದ ಕೆಲಸಕ್ಕೆ ನಿಜಕ್ಕೂ ಹೆಮ್ಮೆಪಡಬೇಕು. ನಮ್ಮ ಸಂಬಂಧವು ಕ್ರೀಡೆಯನ್ನು ಮೀರಿದೆ ಮತ್ತು ಯಾವಾಗಲೂ ಹಾಗೆ ಉಳಿಯಲಿದೆ" ಎಂದು ಹೇಳಿದ್ದಾರೆ.
ನಾನು ಯಾವಾಗಲೂ ನಿಮ್ಮ ನಂ.1 ಅಭಿಮಾನಿ: ಕೊಹ್ಲಿ
ಇದಕ್ಕೂ ಮುಂದುವರೆದು ಬರೆದುಕೊಂಡಿರುವ ಕೊಹ್ಲಿ, “ನೀವು (ಡಿವಿಲಿಯರ್ಸ್) ನಿಮ್ಮ ಎಲ್ಲವನ್ನೂ ಆರ್‌ಸಿಬಿಗೆ ನೀಡಿದ್ದೀರಿ. ನನಗೆ ಗೊತ್ತು. ನೀವು RCB ಮತ್ತು ನನ್ನ ಪಾಲಿಗೆ ಯಾವ ಮಹತ್ವವನ್ನು ಹೊಂದಿರುವಿರಿ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣ ನಿಮಗೆ ಪ್ರೋತ್ಸಾಹಿಸುವ ಕೊರತೆ ಕಾಡಲಿದೆ ಮತ್ತು ನಾನು ಇನ್ನು ಮುಂದೆ ನಿಮ್ಮೊಂದಿಗೆ ಆಡಲು ಸಾಧ್ಯವಿಲ್ಲ ಎಂಬ ನೋವು ಕೂಡ ಕಾಡಲಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ನಾನು ನಿಮ್ಮ ನಂಬರ್ 1 ಅಭಿಮಾನಿಯಾಗಿರುತ್ತೇನೆ. ಸಾರ್ವಕಾಲಿಕ ಶ್ರೇಷ್ಠ ಎಬಿ ಡಿವಿಲಿಯರ್ಸ್."
ವಿರಾಟ್ ಅವರ ಈ ಭಾವನಾತ್ಮಕ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಡಿವಿಲಿಯರ್ಸ್ ಕೂಡ - 'ಲವ್ ಯೂ ಟೂ, ನನ್ನ ಸಹೋದರ' ಎಂದು ಬರೆದಿದ್ದಾರೆ.
ನಾನು ತುಂಬಾ ಯೋಚಿಸಿ ನಿರ್ಧಾರ ಕೈಗೊಂಡಿದ್ದೇನೆ: ಎಬಿ ಡಿವಿಲಿಯರ್ಸ್
ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಅಂದರೆ ಮುಂದಿನ ವರ್ಷವೂ ಅವರು ಐಪಿಎಲ್ ಆಡುವುದಿಲ್ಲ. ನಿವೃತ್ತಿ ಘೋಷಿಸಿದ ನಂತರ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿ ತಂಡದ ಸಂಪೂರ್ಣ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಾನು ಆರ್‌ಸಿಬಿಗಾಗಿ ದೀರ್ಘಕಾಲ ಆಡಿದ್ದೇನೆ. ಈ ವರ್ಷ ನಾನು ಫ್ರಾಂಚೈಸಿಗಾಗಿ ನನ್ನ 11 ವರ್ಷಗಳನ್ನು ಪೂರೈಸಿದ್ದೇನೆ ಮತ್ತು ಈಗ ಹುಡುಗರನ್ನು ಬಿಟ್ಟು ಹೋಗುವುದು ತುಂಬಾ ದುಃಖವಾಗಿದೆ. ಸಹಜವಾಗಿ, ಈ ನಿರ್ಧಾರವನ್ನು ತಲುಪಲು ಬಹಳ ಸಮಯ ತೆಗೆದುಕೊಂಡಿದೆ. ದೀರ್ಘಾಲೋಚನೆ ಮತ್ತು ತಿಳುವಳಿಕೆಯ ನಂತರ, ನಾನು ನಿವೃತ್ತಿ ಬಯಸಿದ್ದು ಮತ್ತು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದೇನೆ.
'ನನ್ನ ಸ್ನೇಹಿತ ವಿರಾಟ್ ಕೊಹ್ಲಿಗೆ ಧನ್ಯವಾದಗಳು'
ಇದಕ್ಕೂ ಮುಂದುವರೆದು ಬರೆದುಕೊಂಡಿರುವ ಎಬಿ, “ನನ್ನ ಮೇಲೆ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ಮತ್ತು ಇಷ್ಟು ವರ್ಷಗಳ ಕಾಲ ನನ್ನನ್ನು ಬೆಂಬಲಿಸಿದ್ದಕ್ಕಾಗಿ RCB ಮ್ಯಾನೇಜ್‌ಮೆಂಟ್, ನನ್ನ ಸ್ನೇಹಿತ ವಿರಾಟ್ ಕೊಹ್ಲಿ, ತಂಡದ ಸಹ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಇಡೀ RCB ಕುಟುಂಬಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣವಾಗಿತ್ತು ” ಎಂದಿದ್ದಾರೆ.