ಗ್ರಾಮ ಒನ್ ಯೋಜನೆ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಿ: ಸಿಎಂ ಬಸವರಾಜ ಬೊಮ್ಮಾಯಿ

ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಗ್ರಾಮ ಒನ್ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.

Written by - Zee Kannada News Desk | Last Updated : Feb 5, 2022, 09:58 PM IST
  • ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಗ್ರಾಮ ಒನ್ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
 ಗ್ರಾಮ ಒನ್ ಯೋಜನೆ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಿ: ಸಿಎಂ ಬಸವರಾಜ ಬೊಮ್ಮಾಯಿ title=

ಬೆಂಗಳೂರು: ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರು ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಗ್ರಾಮ ಒನ್ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.

ಅವರು ಇಂದು (ಫೆ.05) ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ನಿರ್ವಾಹಕರೊಂದಿಗೆ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು.ಸರ್ಕಾರದ ಸೇವೆಗಳನ್ನು ಜನರ ಹತ್ತಿರ ತೆಗೆದುಕೊಂಡು ಹೋಗಲು ಗ್ರಾಮ ಒನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಜನರ ಅಲೆದಾಟ ತಪ್ಪುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿ ತಡೆದಂತಾಗುತ್ತದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಮೊದಲ ಬಜೆಟ್: ಆರ್ಥಿಕ ಮುಗ್ಗಟ್ಟಿನ ಮದ್ಯೆ ಆಯವ್ಯಯ! ಯಾವ ಯೋಜನೆಗಳಿಗೆ ಆದ್ಯತೆ?

ಸರ್ಕಾರವು ಗ್ರಾಮ ಒನ್ ಕೇಂದ್ರಗಳ ನಿರ್ವಾಹಕರಿಗೆ ಜವಾಬ್ದಾರಿ ನೀಡಿದ್ದು, ಸರ್ಕಾರದ ಸೇವೆ ಹಾಗೂ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕು.ಯಾವುದೇ ಅರ್ಜಿಗಳನ್ನು ತಿರಸ್ಕರಿಸಿದರೆ ಅದಕ್ಕೆ ಸಕಾರಣವನ್ನು ನೀಡಬೇಕು. ಜನರು ಅರ್ಜಿ ಸಲ್ಲಿಸಿ ಅನವಶ್ಯಕವಾಗಿ ತಿರುಗಾಡುವಂತಾಗಬಾರದು.ಈ ನಿಟ್ಟಿನಲ್ಲಿ ಎಲ್ಲಾ ಗ್ರಾಮ ಒನ್ ಕೇಂದ್ರಗಳ ನಿರ್ವಾಹಕರು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಉತ್ತಮ ಕಾರ್ಯನಿರ್ವಹಿಸುವ ಗ್ರಾಮ ಒನ್ ಸೇವಕರಿಗೆ ರೂ. 10,000 ಪ್ರಥಮ, ರೂ. 7000 ದ್ವಿತೀಯ ಹಾಗೂ ರೂ. 5000 ತೃತೀಯ ಬಹುಮಾನ ನೀಡಲಾಗುವುದು.ಬಹುಮಾನ ಪ್ರಕ್ರಿಯೆ ಪ್ರತಿ ವಾರಕ್ಕೊಮ್ಮೆ ನಡೆಯಲಿದೆ.  ಇದರ ಜೊತೆಗೆ ಗ್ರಾಮ ಒನ್ ಯೋಜನೆಯಡಿ ಉತ್ತಮ ಕೆಲಸ ನಿರ್ವಹಿಸುವಲ್ಲಿ ಆಯ್ಕೆಯಾದ ಜಿಲ್ಲೆಗೆ ಒಂದು ಲಕ್ಷ ಬಹುಮಾನವನ್ನು ಸಹ ನೀಡಲಾಗುವುದು ಎಂದರು.  

ಸರ್ಕಾರದ ಯಶಸ್ಸು ಗ್ರಾಮ ಒನ್ ಮೂಲಕ ನೀಡುವ ಸೇವೆಗಳ ಮೇಲೆ ನಿಂತಿದ್ದು, ನಿರ್ವಾಹಕರು ಉತ್ತಮ ಕೆಲಸ ನಿರ್ವಹಿಸುತ್ತೀರೆಂಬ ವಿಶ್ವಾಸವಿದೆ. ಇನ್ನೂ ಕೆಲವು ಗ್ರಾ.ಪಂ.ಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಪ್ರಾರಂಭಿಸದೇ ಇರುವ ಪ್ರದೇಶಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತ್ವರಿತವಾಗಿ ಗ್ರಾಮ ಒನ್ ಕೇಂದ್ರಗಳನ್ನು  ತೆರೆಯುವುದರೊಂದಿಗೆ ಸೇವೆಗಳ ಕುರಿತು ತಮ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ-Relationship Tips: ನಿಮ್ಮ ಸಂಗಾತಿಗೆ ಅಪ್ಪಿ-ತಪ್ಪಿಯೂ ಕೂಡ ಈ ಸಿಕ್ರೆಟ್ ಹೇಳಬೇಡಿ, ಇಲ್ದಿದ್ರೆ..?

ಗ್ರಾಮ ಒನ್ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳು ;

ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಹಕ್ಕು ಮತ್ತು ಹಿಡುವಳಿ ಮತ್ತು ಬೆಳೆಗಳ ದಾಖಲೆ (ಆರ್.ಟಿ.ಸಿ), ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಕಾರ್ಡ್, ಆಧಾರ್ ಕಾರ್ಡ್, ವೃದ್ಧಾಪ್ಯ/ ವಿಧವಾ/ ಅಂಗವಿಕಲ ವೇತನ, ಹಿರಿಯ ನಾಗರಿಕರ ಗುರುತಿನ ಚೀಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಡಿಪ್ಲೋಮಾ ಮೂಲ ಪ್ರಮಾಣ ಪತ್ರ, ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣ ಪತ್ರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆ, ವಿದ್ಯಾರ್ಥಿಗಳ ಬಸ್ ಪಾಸ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೇವೆಗಳು, ವಂಶ ವೃಕ್ಷ ಅರ್ಜಿ, ನಿವಾಸ ಪ್ರಮಾಣ ಪತ್ರ, ಪಶುಸಂಗೋಪನೆ ಇಲಾಖೆ ಸೇವೆಗಳು, ಮುಖ್ಯಮಂತ್ರಿಗಳ ಪರಿಹಾರ ನಿಧಿ ಸೇವೆಗಳು, ಆರ್.ಟಿ.ಓ ಸೇವೆಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಣಿ, ಇ-ಸ್ಟಾಂಪ್  ಸೇರಿದಂತೆ 100 ಕ್ಕೂ ಹೆಚ್ಚು ನಾಗರಿಕ ಸೇವೆಗಳು ಲಭಿಸಲಿವೆ.

ಗ್ರಾಮ ಒನ್ ಕೇಂದ್ರಗಗಳಿಂದ ದೊರೆಯುವ ಲಾಭಗಳು ;

ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಆರಂಭದಿಂದ ನಾಗರಿಕರು, ಹಿರಿಯ ನಾಗರಿಕರು, ಮಹಿಳೆಯರು, ವಿಶೇಷಚೇತನರು ತಮ್ಮ ಗ್ರಾಮದಲ್ಲಿಯೇ ಸರ್ಕಾರದ ಸೇವೆಗಳನ್ನು ಪಡೆಯಬಹುದು.ತಾಲ್ಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಭೇಟಿ ನೀಡಲು ತಗಲುವ ಸಂಚಾರ ವೆಚ್ಚವಿಲ್ಲದೆ, ಸಮಯದ ಉಳಿತಾಯದೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News