ನಿದ್ದೆ ಪ್ರತಿಯೊಬ್ಬ ಜೀವಿಗೂ ಅತ್ಯವಶ್ಯಕ. ಹಾಗಾಗಿ ಕಡಿಮೆ ನಿದ್ರೆ ಮಾಡುವುದರಿಂದ ದೇಹದ ಆರೋಗ್ಯ ಹದಗೆಡುತ್ತದೆ ಎಂಬುದು ನಿಜ. ಆದರೆ ಕಡಿಮೆ ನಿದ್ದೆ ಮಾಡುವುದರಿಂದ ಮಾತ್ರ ಆರೋಗ್ಯ ಹದಗೆಡುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ದಿನಕ್ಕೆ 10 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವುದರಿಂದಲೂ ದೇಹದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.
ಅತಿ ಹೆಚ್ಚು ನಿದ್ದೆ ಮಾಡುವುದರಿಂದ ದೇಹದ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳೂ ಆರಂಭವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಅದು ಪುರುಷರಿರಲಿ ಅಥವಾ ಮಹಿಳೆಯರಿರಲಿ, ಹೊಟ್ಟೆ ಮತ್ತು ಸೊಂಟದ ಭಾಗ ಹೆಚ್ಚು ದಪ್ಪವಾಗುತ್ತಾ ಹೋಗುತ್ತದೆ. ಹಾಗೇ ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಉತ್ತಮ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುತ್ತದೆ. ಸಂಶೋಧಕರ ಪ್ರಕಾರ, 6 ಗಂಟೆಗಳಿಗೂ ಕಡಿಮೆ ನಿದ್ದೆ ಮಾಡುವ ಪುರುಷರಲ್ಲಿ ಅಜೀರ್ಣ ಸಮಸ್ಯೆ ಹೆಚ್ಚಾಗುತ್ತದೆ ಎಂದಿದ್ದಾರೆ.
ಅತಿ ಹೆಚ್ಚು ನಿದ್ರೆ ಮಾಡುವುದರಿಂದ ಅದು ನಿಮ್ಮ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇದು ಖಿನ್ನತೆಗೆ ಒಳಗಾಗಲು ಮುಖ್ಯ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಮೆದುಳಿನ ನ್ಯೂಟ್ರೋ ಟ್ರ್ಯಾನ್ಸ್ ಮೀಟರ್ಗಳು ಏರುಪೇರಾಗುತ್ತವೆ. . ಇದರಿಂದ ಮನಸ್ಸಿನ ಮೇಲೆ ಒತ್ತಡ ಹೆಚ್ಚಾಗಿ ತಲೆ ನೋವಿಗೆ ಕಾರಣವಾಗುತ್ತದೆ. ಅಲ್ಲದೆ, ಹೆಚ್ಚು ಮಲಗುವುದರಿಂದ ಬೆನ್ನು ನೋವಿನ ಸಮಸ್ಯೆಯೂ ಎದುರಾಗಬಹುದು. ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ನಿದ್ದೆ ಮಾಡಿ ನಿಮ್ಮ ಮನಸ್ಸು ಮತ್ತು ಆರೋಗ್ಯ ಸದೃಢವಾಗಿರುವಂತೆ ನೋಡಿಕೊಳ್ಳಿ.