Asani Cyclone: ಅಸಾನಿ ಚಂಡಮಾರುತ ಪ್ರಭಾವ, ಈ ರಾಜ್ಯಗಳಿಗೆ ಐಎಂಡಿ ಎಚ್ಚರಿಕೆ

Asani Cyclone Update: ಚಂಡಮಾರುತದಿಂದಾಗಿ ಮಂಗಳವಾರದಿಂದ ಶುಕ್ರವಾರದವರೆಗೆ ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಕೋಲ್ಕತ್ತಾದ ಕರಾವಳಿ ಜಿಲ್ಲೆಗಳಲ್ಲಿ ಒಂದೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ  ಎಂದು ಹವಾಮಾನ ಇಲಾಖೆ ತಿಳಿಸಿದೆ.

Written by - Yashaswini V | Last Updated : May 9, 2022, 07:11 AM IST
  • ಅಸಾನಿ ಚಂಡಮಾರುತವು ಆಂಧ್ರ ಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾ ಕರಾವಳಿಯತ್ತ ವಾಯುವ್ಯ ಕಡೆಗೆ ಚಲಿಸಿದೆ-ಐಎಂಡಿ
  • ಒಡಿಶಾದ ಗಜಪತಿ, ಗಂಜಾಂ ಮತ್ತು ಪುರಿಯ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ.
  • ಬುಧವಾರ, ಗಂಜಾಂ, ಖುರ್ದಾ, ಪುರಿ, ಜಗತ್‌ಸಿಂಗ್‌ಪುರ ಮತ್ತು ಕಟಕ್‌ನಲ್ಲಿ ಭಾರೀ ಮಳೆಯಾಗಬಹುದು ಎಂದು ಐಎಂಡಿ ಭವಿಷ್ಯ ನುಡಿದಿದೆ.
Asani Cyclone: ಅಸಾನಿ ಚಂಡಮಾರುತ ಪ್ರಭಾವ, ಈ ರಾಜ್ಯಗಳಿಗೆ ಐಎಂಡಿ ಎಚ್ಚರಿಕೆ  title=
Asani cyclone update

ಅಸಾನಿ ಚಂಡಮಾರುತ ಇತ್ತೀಚಿನ ಅಪ್‌ಡೇಟ್:  ಭಾನುವಾರ (ಮೇ 08) ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡಿರುವ ಅಸಾನಿ ಚಂಡಮಾರುತವು ಆಂಧ್ರ ಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾ ಕರಾವಳಿಯತ್ತ ವಾಯುವ್ಯ ಕಡೆಗೆ ಚಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)  ಮಾಹಿತಿ ನೀಡಿದೆ. 'ಅಸಾನಿ' ಚಂಡಮಾರುತವು ಮಂಗಳವಾರ ಉತ್ತರ ಆಂಧ್ರ-ಒಡಿಶಾ ಕರಾವಳಿಯಿಂದ ಪಶ್ಚಿಮ-ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಗೆ ತಲುಪಲಿದ್ದು, ಒಡಿಶಾ ಕರಾವಳಿಯಿಂದ ಈಶಾನ್ಯ ಮತ್ತು ವಾಯುವ್ಯ ಬಂಗಾಳ ಕೊಲ್ಲಿಗೆ ತಿರುಗಿ ಮುಂದಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೀವ್ರ ಚಂಡಮಾರುತದ ಬೆದರಿಕೆ:
ಇದರ ನಂತರ, ಅಸಾನಿಯ ವೇಗ ಹೆಚ್ಚಾಗಿ ಚಂಡಮಾರುತವು ಬುಧವಾರ ತೀವ್ರ ಚಂಡಮಾರುತವಾಗಿ ಮತ್ತು ಗುರುವಾರದ ವೇಳೆಗೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದೆ. ಇದರಿಂದಾಗಿ ಒಡಿಶಾ ಅಥವಾ ಆಂಧ್ರಪ್ರದೇಶಕ್ಕೆ ಈ ಚಂಡಮಾರುತ ಅಪ್ಪಳಿಸುವುದಿಲ್ಲ ಎಂದು ತಿಳಿಸಿರುವ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ, ಚಂಡಮಾರುತವು ಪೂರ್ವ ಕರಾವಳಿಗೆ ಸಮಾನಾಂತರವಾಗಿ ಚಲಿಸುತ್ತದೆ ಮತ್ತು ಮಂಗಳವಾರ ಸಂಜೆಯಿಂದ ಹಲವು ರಾಜ್ಯಗಳಲ್ಲಿ ಮಳೆಯನ್ನು ಉಂಟುಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಒಡಿಶಾದಲ್ಲಿ ಅಲರ್ಟ್: 
ಒಡಿಶಾದಲ್ಲಿ ಅಸಾನಿ ಚಂಡಮಾರುತದ ಪರಿಣಾಮಗಳ ಮುನ್ನೆಚ್ಚರಿಕಾ ಕ್ರಮವಾಗಿ, ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಸಾಕಷ್ಟು ವ್ಯವಸ್ಥೆ ಮಾಡಿದೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿಕೆ ಜೆನಾ ಅವರು ಹೇಳಿದ್ದಾರೆ. "ನಾವು ರಾಜ್ಯದಲ್ಲಿ ಯಾವುದೇ ದೊಡ್ಡ ಅಪಾಯವನ್ನು ಕಾಣುವುದಿಲ್ಲ. ಏಕೆಂದರೆ ಇದು ಪುರಿ ಬಳಿ ಕರಾವಳಿಯಿಂದ 100 ಕಿ.ಮೀ. ದೂರದಲ್ಲಿ ಹಾದುಹೋಗಲಿದೆ. ಆದಾಗ್ಯೂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್‌ಎಫ್) ಮತ್ತು ಅಗ್ನಿಶಾಮಕ ಸೇವೆಗಳ ರಕ್ಷಣಾ ತಂಡಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ ಎಂದರು. 

ಇದನ್ನೂ ಓದಿ- ಎರಡು ಬಾಟಲ್ ಎಣ್ಣೆ ಹೊಡೆದ್ರೂ ನಶೆ ಏರ್ತಿಲ್ಲ.. ಗೃಹ ಸಚಿವರಿಗೆ ಕುಡುಕನ ಪತ್ರ

ಎನ್‌ಡಿಆರ್‌ಎಫ್ ನಿಯೋಜನೆ: 
ಅಸಾನಿ ಚಂಡಮಾರುತದ ಹಿನ್ನಲೆಯಲ್ಲಿ ಬಾಲಸೋರ್‌ನಲ್ಲಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ ಮತ್ತು ಒಡಿಆರ್‌ಎಫ್‌ನ ತಂಡವನ್ನು ಗಂಜಾಂ ಜಿಲ್ಲೆಗೆ ಕಳುಹಿಸಲಾಗಿದೆ. ಪುರಿ ಜಿಲ್ಲೆಯ ಕೃಷ್ಣ ಪ್ರಸಾದ್, ಸತ್ಪಾರಾ, ಪುರಿ ಮತ್ತು ಅಸ್ತರಾಂಗ್ ಬ್ಲಾಕ್‌ಗಳು ಮತ್ತು ಕೇಂದ್ರಪಾರಾದ ಜಗತ್‌ಸಿಂಗ್‌ಪುರ, ಮಹಾಕಲ್ಪದ ಮತ್ತು ರಾಜನಗರ ಮತ್ತು ಭದ್ರಕ್‌ನಲ್ಲಿಯೂ ಒಡಿಆರ್‌ಎಎಫ್ ತಂಡಗಳು ಸಿದ್ಧವಾಗಿವೆ. ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜೆನಾ ತಿಳಿಸಿದ್ದಾರೆ. 

ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಹಕ್ಕನ್ನು ಜಿಲ್ಲಾ ಅಧಿಕಾರಿಗಳಿಗೆ ವಹಿಸಲಾಗಿದೆ. ಚಂಡಮಾರುತದ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಸಂಜೆಯಿಂದ ಮಳೆ ಸಂಬಂಧಿತ ಪ್ರಭಾವ ಕಂಡುಬರುವ ಸಾಧ್ಯತೆ ಇದೇ ಎಂದು ಭುವನೇಶ್ವರ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ತಿಳಿಸಿದ್ದಾರೆ.

ಭಾರೀ ಮಳೆ ಸಾಧ್ಯತೆ:
ಒಡಿಶಾದ ಗಜಪತಿ, ಗಂಜಾಂ ಮತ್ತು ಪುರಿಯ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ, ಗಂಜಾಂ, ಖುರ್ದಾ, ಪುರಿ, ಜಗತ್‌ಸಿಂಗ್‌ಪುರ ಮತ್ತು ಕಟಕ್‌ನಲ್ಲಿ ಭಾರೀ ಮಳೆಯಾಗಬಹುದು. ಪುರಿ, ಜಗತ್‌ಸಿಂಗ್‌ಪುರ, ಕಟಕ್, ಕೇಂದ್ರಪಾರ, ಭದ್ರಕ್ ಮತ್ತು ಬಾಲಸೋರ್‌ನಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದಿಂದಾಗಿ ಮಂಗಳವಾರದಿಂದ ಶುಕ್ರವಾರದವರೆಗೆ ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿ ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಕೋಲ್ಕತ್ತಾದ ಕರಾವಳಿ ಜಿಲ್ಲೆಗಳಲ್ಲಿ ಒಂದೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ  ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ- ಶಾಲೆಯೊಂದರಲ್ಲಿ 64 ವಿದ್ಯಾರ್ಥಿಗಳಿಗೆ ಕೊರೊನಾ ಧೃಢ, ಹೈಅಲರ್ಟ್..!

ವಿಪತ್ತು ನಿರ್ವಹಣಾ ತಂಡಗಳಿಗೆ ಎಚ್ಚರಿಕೆ:
ಹವಾಮಾನ ಇಲಾಖೆಯ ಮುನ್ಸೂಚನೆಯ ಮೇರೆಗೆ ವಿಪತ್ತು ನಿರ್ವಹಣಾ ತಂಡಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ. ಮೇ 2020 ರಲ್ಲಿ ಅಂಫಾನ್ ಚಂಡಮಾರುತದ ವಿನಾಶಕಾರಿ ಪರಿಣಾಮಗಳಿಂದ ಪಾಠಗಳನ್ನು ತೆಗೆದುಕೊಳ್ಳುತ್ತಾ, ಪುರಸಭೆ ಆಡಳಿತವು ಬಿದ್ದ ಮರಗಳು ಮತ್ತು ಇತರ ಅವಶೇಷಗಳಿಂದ ಉಂಟಾದ ಅಡೆತಡೆಗಳನ್ನು ತೆರವುಗೊಳಿಸಲು ಕ್ರೇನ್‌ಗಳು, ಎಲೆಕ್ಟ್ರಿಕ್ ಗರಗಸಗಳು ಮತ್ತು ಬುಲ್‌ಡೋಜರ್‌ಗಳ (ಅರ್ತ್‌ಮೂವರ್) ಎಚ್ಚರಿಕೆಯಂತಹ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಪೂರ್ವ ಮೇದಿನಿಪುರ, ದಕ್ಷಿಣ 24 ಪರಗಣಗಳು ಮತ್ತು ಉತ್ತರ 24 ಪರಗಣಗಳ ಆಡಳಿತಗಳು ಒಣ ಆಹಾರ ಮತ್ತು ಅಗತ್ಯ ಔಷಧಗಳ ವ್ಯವಸ್ಥೆ ಮಾಡುವುದರ ಹೊರತಾಗಿ ಸ್ಥಳಾಂತರಿಸುವ ಅಗತ್ಯವಿದ್ದಲ್ಲಿ ಸೈಕ್ಲೋನ್ ಶೆಲ್ಟರ್‌ಗಳು, ಶಾಲೆಗಳು ಮತ್ತು ಇತರ ಪಕ್ಕಾ ರಚನೆಗಳನ್ನು ಸಿದ್ಧಪಡಿಸುತ್ತಿವೆ ಎಂದು ಕೋಲ್ಕತ್ತಾ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರದಿಂದ ಮುಂದಿನ ಸೂಚನೆ ಬರುವವರೆಗೆ ಮೀನುಗಾರರು ಸಮುದ್ರ ಮತ್ತು ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗೆ ಹೋಗದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News