40 ವರ್ಷದ ಬಳಿಕ ಅವಧಿಗೂ ಮುನ್ನವೇ ಭರ್ತಿಯಾದ ತುಂಗಭದ್ರೆ..!

Last Updated : Jul 14, 2022, 05:55 PM IST
  • ಸಂಪೂರ್ಣ ಭರ್ತಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಗುರುವಾರದಂದು ಬಾಗಿನ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
40 ವರ್ಷದ ಬಳಿಕ ಅವಧಿಗೂ ಮುನ್ನವೇ ಭರ್ತಿಯಾದ ತುಂಗಭದ್ರೆ..! title=

ನಿರೀಕ್ಷೆಗೂ ಮುನ್ನವೇ ಈ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪ್ರಸಕ್ತ ವರ್ಷ ರೈತರಿಗೆ ಎರಡೂ ಹಂಗಾಮಿಗೂ ನೀರಿನ ಕೊರತೆಯಾಗದೆ ಸಮರ್ಪಕವಾಗಿ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅವರು ಹೇಳಿದರು.

ಸಂಪೂರ್ಣ ಭರ್ತಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಗುರುವಾರದಂದು ಬಾಗಿನ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ, ಸುಮಾರು 40 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿಯೇ ಅಂದರೆ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ರೈತರು, ಜನಪ್ರತಿನಿಧಿಗಳು ಹಾಗೂ ಈ ಭಾಗದ ಜನರಲ್ಲಿ ಹರ್ಷವನ್ನು ಉಂಟುಮಾಡಿದೆ.

ಇದನ್ನೂ ಓದಿ : Viral News: ಈ ನಟಿಗೆ ಹೆಂಡತಿಯಾಗಲು ತಿಂಗಳಿಗೆ 25 ಲಕ್ಷ ಸಂಬಳದ ಆಫರ್ ನೀಡಿದ್ದ ಉದ್ಯಮಿ..!

ನಮ್ಮ ಸಂಸ್ಕೃತಿಯಂತೆ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಲು ಸಂತಸವಾಗುತ್ತಿದೆ. ಬರುವ ದಿನಗಳಲ್ಲಿ ರೈತರಿಗೆ ಇದೇ ರೀತಿ ಸುಖ ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ. ತುಂಗಭದ್ರೆ ಉಗ್ರವಾಗಿ ಹರಿಯದೆ, ಶಾಂತಯುತವಾಗಿ ಹರಿದು, ನದಿ ದಂಡೆಯಲ್ಲಿರುವ ಜನರಿಗೆ, ರೈತರಿಗೆ ಯಾವುದೇ ತೊಂದರೆ ಉಂಟು ಮಾಡುವುದು ಬೇಡ ಎಂದು ಪ್ರಾರ್ಥಿಸುತ್ತೇನೆ. ಪ್ರತಿ ವರ್ಷವೂ ಇದೇ ರೀತಿ ತುಂಗಭದ್ರೆ ತುಂಬಿ ತುಳುಕಲಿ ಎಂದು ಹಂಪಿ ವಿರೂಪಾಕ್ಷನಿಗೆ ಬೇಡಿಕೊಳ್ಳುತ್ತೇನೆ. ಈ ಬಾರಿ ಎರಡೂ ಹಂಗಾಮಿಗೂ ರೈತರಿಗೆ ತುಂಗಭದ್ರೆ ನೀರು ಸಮರ್ಪಕವಾಗಿ ಲಭ್ಯವಾಗುವ ಎಲ್ಲ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ

ಹನುಮನುದಿಸಿದ ನಾಡು ಅಂಜನಾದ್ರಿ ಬೆಟ್ಟ ಪ್ರದೇಶ ಅಭಿವೃದ್ಧಿಗೆ ಈಗಾಗಲೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕೈಗೊಂಡು, ಹಲವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.  60 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು, ಪ್ರವಾಸಿಗರಿಗೆ, ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ತಂಗಲು, ಅಡುಗೆ ತಯಾರಿಕೆ, ವಾಹನ ಪಾರ್ಕಿಂಗ್ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ.  ಮುಖ್ಯಮಂತ್ರಿಗಳು ಇದೇ ತಿಂಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದು, ವೈಮಾನಿಕ ಸಮೀಕ್ಷೆ ನಡೆಸುವರು. ಈ ಅವಧಿಯೊಳಗೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ನೀಲನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಅವರು ಹೇಳಿದರು.

ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಈ ಬಾರಿ ತುಂಗಭದ್ರಾ ಜಲಾಶಯ ಜುಲೈ ತಿಂಗಳಿನಲ್ಲಿಯೇ ತುಂಬುವ ಮೂಲಕ ಪ್ರಕೃತಿಯೂ ರೈತರ ಬದುಕು ಹಸನಾಗಿಸಲು ಸಹಕಾರ ನೀಡಿದೆ.  ರೈತರು ನೀರನ್ನು ಪೋಲು ಮಾಡದೆ, ಮಿತವಾಗಿ ಬಳಸಿ, ಲಭ್ಯವಾಗುವ ನೀರಿನ ಸದ್ಬಳಕೆ ಮಾಢಿಕೊಂಡು ಉತ್ತಮ ಬೆಳೆ ಬೆಳೆಯುವಂತಾಗಬೇಕು ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್, ತುಂಗಭದ್ರಾ ಜಲಾಶಯ ವಿಭಾಗದ ಮುಖ್ಯ ಇಂಜಿನಿಯರ್ ಎಲ್. ಬಸವರಾಜ, ಅಧೀಕ್ಷಕ ಅಭಿಯಂತರ ಸೂರ್ಯಕಾಂತ ಮಾಲೆ, ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ್, ಸತ್ಯಪ್ಪ, ಎಇಇ ಧರ್ಮರಾಜ್, ಜಾನೇಕರ್ ಬಸಪ್ಪ, ತುಂಗಭದ್ರಾ ಮಂಡಳಿ ಕಾರ್ಯಪಾಲಕ ಅಭಿಯಂತರ ರವಿಚಂದ್ರ ಮುಂತಾದವರು ಉಪಸ್ಥಿತರಿದ್ದರು.

ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೂ ಮುನ್ನ ಸಚಿವರು, ಸಂಸದರು ಮೊದಲಾದ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.  ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಉಪಸ್ಥಿತರಿದ್ದ ಎಲ್ಲ ಗಣ್ಯರು ತುಂಗಭದ್ರಾ ಜಲಾಶಯಕ್ಕೆ ಹೂವು-ಹಣ್ಣು, ಸಹಿತ ಬಾಗಿನವನ್ನು ಸಮರ್ಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News