ಬೆಂಗಳೂರು: ಕರ್ನಾಟಕದಲ್ಲಿ ಪ್ರವಾಹದಿಂದಾಗಿರುವ ನಷ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 2000 ಕೋಟಿ ರೂ.ಗಳ ಮಧ್ಯಂತರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಸೇರಿದಂತೆ ಇತರ ಮಲೆನಾಡು ಭಾಗಗಳಲ್ಲಿ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಸಾಕಷ್ಟು ಜನರು ನಿರಾಶ್ರಿತರಾಗಿದ್ದು, ರಸ್ತೆ ಮಾರ್ಗ, ಮನೆಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಅಗತ್ಯತೆಗಳಿಗೆ ಅಪಾರ ಹಾನಿಯಾಗಿದೆ. ಇದುವರೆಗೂ ಆಗಸ್ಟ್ 14 ರಿಂದ 22ರವರೆಗೆ ಪ್ರವಾಹದಿಂದಾಗಿ 17 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, 2,200 ಮನೆಗಳಿಗೆ ಹಾನಿಯಾಗಿದೆ. ಈಗಾಗಲೇ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದರೂ ಮತ್ತಷ್ಟು ನೆರವಿನ ಅಗತ್ಯವಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರವಾಹದಿಂದಾಗಿ ನಿರಾಶ್ರಿತಗೊಂಡ 7,500 ಮಂದಿಗೆ 53 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗಿದೆ. ಅಲ್ಲದೆ, ಇದುವರೆಗೂ 4,500ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಆದರೆ, ಪ್ರವಾಹದಿಂದಾಗಿ ರಾಜ್ಯದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ, ಬೆಳೆ ಸೇರಿದಂತೆ ಒಟ್ಟಾರೆ 3,000 ಕೋಟಿ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ. ಇದು ಮಧ್ಯಂತರ ಅಂದಾಜಾಗಿದ್ದು, ಪೂರ್ಣ ಪ್ರಮಾಣದಲ್ಲಿ ನಷ್ಟದ ಅಂಕಿ-ಅಂಶಗಳು ಇನ್ನಷ್ಟೇ ಸಿಗಬೇಕಿದೆ. ಹಾಗಾಗಿ ಜಲಾವೃತಗೊಂಡು ಸಂಪೂರ್ಣ ನಾಶವಾಗಿರುವ ಕೊಡಗನ್ನು ಮರುನಿರ್ಮಾಣ ಮಾಡುವುದಕ್ಕಾಗಿ ಮಧ್ಯಂತರವಾಗಿ 2,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದು ಕುಮಾರಸ್ವಾಮಿ ಪ್ರಧಾನಿಗೆ ಮನವಿ ಮಾಡಿದ್ದಾರೆ.