ತುಮಕೂರು: ರಾಜ್ಯದಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ಶೇ. 20 ರಷ್ಟು ಏರಿಕೆ ಮಾಡುವ ಚಿಂತನೆ ಸರಕಾರದ ಮಟ್ಟದಲ್ಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ 120 ಮಹಿಳಾ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪೊಲೀಸ್ ಇಲಾಖೆಗೆ ಸೇರ್ಪಡೆಗೊಳ್ಳುವ ಸಂಖ್ಯೆ ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ 250 ಐಪಿಎಸ್ ಅಧಿಕಾಗಳ ಪೈಕಿ 20 ಮಹಿಳಾ ಅಧಿಕಾರಿಗಳಿದ್ದಾರೆ. ಒಟ್ಟಾರೆ ಶೇ. 6 ರಷ್ಟು ಮಹಿಳೆ ಪೇದೆಗಳು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಂಖ್ಯೆಯನ್ನು ಶೇ.20 ಕ್ಕೆ ಏರಿಸಬೇಕೆಂಬ ಚಿಂತನೆ ಇದೆ ಎಂದು ಅವರು ತಿಳಿಸಿದರು.
ಇಂದು ವಿವಿಧ ಪದವಿ ಪಡೆದವರು ಪೊಲೀಸ್ ಇಲಾಖೆಯನ್ನೇ ಆಯ್ದುಕೊಳ್ಳುತ್ತಿರುವುದು ಸ್ವಾಗತಾರ್ಹ. ಪದವೀಧರರು, ಸ್ನಾತಕೋತ್ತರ ಪದವಿ ಪಡೆದವರು ಸಹ ನಮ್ಮ ಇಲಾಖೆಗೆ ಸೇರಲು ಆಸಕ್ತಿ ತೋರುತ್ತಿದ್ದಾರೆ. ಈಗ ತರಬೇತಿ ಪಡೆದಿರುವ 121 ಮಹಿಳಾ ಪ್ರಶಿಕ್ಷಣಾರ್ಥಿಗಳ ಪೈಕಿ 16 ಜನಸ್ನಾತಕೋತ್ತರ, 96 ಪದವೀಧರರಿದ್ದಾರೆ ಎಂದರು.
ಪೊಲೀಸ್ ಸಿಬ್ಬಂದಿಗೆ ವಸತಿ ಸಮ್ಮುಚ್ಛ ನಿರ್ಮಿಸಿಕೊಡುವ ಕೆಲಸ ಪ್ರಗತಿಯಲ್ಲಿದೆ. ವಿವಿಧ ತಾಲೂಕುಗಳಿಗೆ ಒಟ್ಟು 250ಕ್ಕೂ ಹೆಚ್ಚು ವಸತಿ ಗೃಹ ನಿರ್ಮಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಇದೀಗ ತರಬೇತಿ ಪಡೆದಿರುವ ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿ ಎಂದು ಡಾ.ಜಿ. ಪರಮೇಶ್ವರ ಶುಭಕೋರಿದರು.