ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟದ ಘಟನೆಗಳು ಅವಾಂತರ ಸೃಷ್ಟಿಸಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಒಂದೇ ಕುಟುಂಬದ 8 ಮಂದಿ ಸೇರಿ ಕನಿಷ್ಠ 22 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಐವರು ನಾಪತ್ತೆಯಾಗಿದ್ದಾರೆ. ಒಟ್ಟಾರೆ ದೇಶದಲ್ಲಿ ಇದುವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡ ಮತ್ತು ಒಡಿಶಾದಲ್ಲಿ ತಲಾ 4 ಮತ್ತು ಜಾರ್ಖಂಡ್ನಲ್ಲಿ ಒಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ.
743 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ
ಮಂಡಿ, ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಗರಿಷ್ಠ ಹಾನಿ ಕಂಡುಬಂದಿದೆ ಎಂದು ತಿಳಿದುಬಂದಿದೆ. ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಇದುವರೆಗೆ 36 ಹವಾಮಾನ ಘಟನೆಗಳು ವರದಿಯಾಗಿವೆ. ಮಂಡಿಯಲ್ಲಿ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಮತ್ತು ಶೋಘಿಯಲ್ಲಿ ಶಿಮ್ಲಾ-ಚಂಡೀಗಢ ಹೆದ್ದಾರಿ ಸೇರಿದಂತೆ 743 ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಡೆಪ್ಯುಟಿ ಕಮಿಷನರ್ ಅರಿಂದಮ್ ಚೌಧರಿ ಮಾತನಾಡಿ, ‘ಮಂಡಿಯಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ. ಗೋಹರ್ ಡೆವಲಪ್ಮೆಂಟ್ ಬ್ಲಾಕ್ನ ಕಶನ್ ಗ್ರಾಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಪೊಲೀಸರು 4 ಗಂಟೆಗಳ ಸುದೀರ್ಘ ಶೋಧ ಕಾರ್ಯಾಚರಣೆಯ ನಂತರ ಒಂದೇ ಕುಟುಂಬದ 8 ಸದಸ್ಯರ ಮೃತದೇಹಗಳನ್ನು ಅವರ ಮನೆಯ ಅವಶೇಷಗಳಿಂದ ಹೊರತೆಗೆಯಲಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವದ ಉಳಿವು ಅಪಾಯದಲ್ಲಿದೆ ಎಂದರ್ಥ'
ಭೂಕುಸಿತಕ್ಕೆ ಹಲವು ಮನೆಗಳು ನೆಲಸಮ
ಮೇಘಸ್ಫೋಟದ ನಂತರ ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು. ಶಿಮ್ಲಾದ ಥಿಯೋಗ್ನಲ್ಲಿ ಕಾರೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ. ಚಂಬಾದ ಚೌವಾರಿಯ ಬಾನೆಟ್ ಗ್ರಾಮದಲ್ಲಿ ಮುಂಜಾನೆ 4.30ರ ಸುಮಾರಿಗೆ ಭೂಕುಸಿತದ ನಂತರ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ ಎಂದು ಮೋಖ್ತಾ ಮಾಹಿತಿ ನೀಡಿದ್ದಾರೆ.
ರೈಲು ಸೇವೆ ಸ್ಥಗಿತ
ಕಂಗ್ರಾದಲ್ಲಿ ಮನೆ ಕುಸಿದು 9 ವರ್ಷದ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜೋಗಿಂದರ್ನಗರ-ಪಠಾಣ್ಕೋಟ್ ಮಾರ್ಗದಲ್ಲಿ ಶನಿವಾರ ಭಾರೀ ಮಳೆಗೆ ಚಾಕಿ ಸೇತುವೆ ಕುಸಿದ ನಂತರ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ರೈಲ್ವೆ ಅಧಿಕಾರಿಗಳು ಸೇತುವೆಯನ್ನು ಅಸುರಕ್ಷಿತವೆಂದು ಘೋಷಿಸಿದ್ದಾರೆ ಮತ್ತು ಪಠಾಣ್ಕೋಟ್ (ಪಂಜಾಬ್) ನಿಂದ ಜೋಗಿಂದರ್ನಗರ (ಹಿಮಾಚಲ ಪ್ರದೇಶ)ವರೆಗಿನ ನ್ಯಾರೋ ಗೇಜ್ ಟ್ರ್ಯಾಕ್ನಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 2024 ರ ಚುನಾವಣೆಗೆ ಮೂವರು ಪ್ರಧಾನಿ ಅಭ್ಯರ್ಥಿಗಳನ್ನು ಘೋಷಿಸಿದ ಅಖಿಲೇಶ್ ಯಾದವ್
ಪ್ರವಾಹದಲ್ಲಿ ಸಿಲುಕಿದ್ದ 30 ಜನರ ರಕ್ಷಣೆ
#WATCH | Himachal Pradesh: The railway bridge on Chakki river in Himachal Pradesh's Kangra district damaged due to flash flood, and collapsed today morning. The water in the river is yet to recede: Northern Railways pic.twitter.com/ApmVkwAkB8
— ANI (@ANI) August 20, 2022
ಹಮೀರ್ಪುರದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 30 ಜನರನ್ನು ರಕ್ಷಿಸಲಾಗಿದೆ. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮಂಡಿಯಲ್ಲಿ ಮನಾಲಿ-ಚಂಡೀಗಢ ಹೆದ್ದಾರಿ ಮತ್ತು ಶೋಘಿಯಲ್ಲಿ ಶಿಮ್ಲಾ-ಚಂಡೀಗಢ ಹೆದ್ದಾರಿ ಸೇರಿದಂತೆ 743 ರಸ್ತೆಗಳು ಭಾರೀ ಮಳೆಯಿಂದಾಗಿ ನಿರ್ಬಂಧಿಸಲ್ಪಟ್ಟಿವೆ. ಇಂದು 407 ರಸ್ತೆಗಳನ್ನು ಪುನಃಸ್ಥಾಪಿಸಲಾಗುವುದು ಮತ್ತು ನಾಳೆಯ ವೇಳೆಗೆ 268 ರಸ್ತೆಗಳನ್ನು ತೆರವುಗೊಳಿಸಲಾಗುವುದು ಎಂದು ಹಿಮಾಚಲ ಪ್ರದೇಶ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ.
ಭಾರೀ ಮಳೆಯ ಎಚ್ಚರಿಕೆ
ಸೋನು ಬಾಂಗ್ಲಾದಲ್ಲಿ ಭೂಕುಸಿತದ ನಂತರ ಶೋಘಿ ಮತ್ತು ತಾರಾ ದೇವಿ ನಡುವಿನ ಚಂಡೀಗಢ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕಲ್ಲುಗಳು ಬೀಳುತ್ತಿವೆ ಮತ್ತು ಶೋಘಿ-ಮೆಹ್ಲಿ ಬೈಪಾಸ್ನಿಂದ ಸಂಚಾರವನ್ನು ಬದಲಾಯಿಸಲಾಗಿದೆ ಎಂದು ಅವರು ಹೇಳಿದರು. ಈ ನಡುವೆ ರಾಜ್ಯದ ಹಲವೆಡೆ ನೀರು, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ‘ಮೂಲಭೂತ ಅವಶ್ಯಕತೆಗಳ ಪೂರೈಕೆಯಲ್ಲಿ ಅಡಚಣೆಯಾಗದಂತೆ ರಸ್ತೆಗಳನ್ನು ಸ್ವಚ್ಛಗೊಳಿಸಲು ಸಂಬಂಧಿಸಿದ ಇಲಾಖೆಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಆರ್.ಡಿ.ಧಿಮಾನ್ ಸೂಚಿಸಿದ್ದಾರೆ. ಅತಿವೃಷ್ಟಿಯಿಂದ ಆಗಿರುವ ಹಾನಿಯ ವಿಡಿಯೋ ಚಿತ್ರೀಕರಿಸಿ, ಸಂತ್ರಸ್ತರಿಗೆ ಸೂರು ಕಲ್ಪಿಸುವಂತೆ ಆದೇಶಿಸಿದರು. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಜಿಲ್ಲೆಗಳಿಗೆ 232.31 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಾಕಷ್ಟು ಮೊತ್ತ ಲಭ್ಯವಿದೆ ಎಂದು ಕಂದಾಯ ಪ್ರಧಾನ ಕಾರ್ಯದರ್ಶಿ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದಾರೆ. ಮುಂದಿನ ಕೆಲವು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.