ಬೆಂಗಳೂರು: ಗಂಡ ಮತ್ತು ಮಗ ಬಿರಿಯಾನಿ ತಿಂದರು ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರು ಮನೆಯನ್ನೇ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 8 ವರ್ಷಗಳಿಂದ ಬೆಂಗಳೂರಿನ ಕಮ್ಮನಗೊಂಡನಹಳ್ಳಿಯಲ್ಲಿ ವಾಸವಿರುವ ಮದ್ಯಪ್ರದೇಶ ಮೂಲದ ರಾಜು ಸರ್ಕಾರ್-ಅನಿತಾ ಸರ್ಕಾರ್ ದಂಪತಿ ನಡುವೆ ಬಿರಿಯಾನಿ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದ್ದು, ಆ ಕ್ಷುಲ್ಲಕ ಕಾರಣಕ್ಕಾಗಿ ಆಕೆ ಮನೆ ಬಿಟ್ಟು ತವರಿಗೆ ಹೋಗಿದ್ದು, ಇನ್ನೆಂದೂ ಹಿಂತಿರುಗುವುದಿಲ್ಲ ಎಂದು ಹೇಳಿರುವುದಾಗಿ ಪತಿ ರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆ.27ರಂದು ರಾಜು, ರಾತ್ರಿ ಊಟಕ್ಕೆಂದು ಹೊರಗಿನಿಂದ ಚಿಕನ್ ಬಿರಿಯಾನಿ ತಂದಿದ್ದು, ತಂದೆ ಹಾಗೂ ಮಗ ಮನೆಯಲ್ಲಿ ಕುಳಿತು ಬಿರಿಯಾನಿ ತಿಂದಿದ್ದರು. ಗರ್ಭಿಣಿಯಾಗಿರುವ ಅನಿತಾಗೆ ಅದು ಇಷ್ಟವಿರಲಿಲ್ಲ. ಹೀಗಾಗಿ ಅವರು ಆಕ್ಷೇಪಿಸಿ ಊಟ ಮಾಡದೇ ಮುನಿಸಿಕೊಂಡು ಮಲಗಿದ್ದರು. ಅಲ್ಲದೆ ಮರುದಿನ ಗಂಡ ಕೆಲಸಕ್ಕೆ ಹೋದ ಬಳಿಕ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಆದರೆ, ಆಕೆ ಮನೆ ಬಿಟ್ಟು ಹೋಗಲು ಬಿರಿಯಾನಿ ನೆಪ ಮಾತ್ರ. ಗಂಡ-ಹೆಂಡತಿ ನಡುವಿನ ಕಲಹದಿಂದಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಗಿ ಗಂಗಮ್ಮ ಗುಡಿ ಠಾಣೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.