CSK vs RCB, IPL 2022: ಇಂದು ‘ಮದಗಜ’ಗಳ ಕದನ! ಗೆಲುವಿನ ಖಾತೆ ತೆರೆಯುತ್ತಾ ಚೆನ್ನೈ..?

ಮದಗಜ’ಗಳ ಇಂದಿನ ಕದನದಲ್ಲಿ ಗೆಲುವು ಯಾರಿಗೆ ಸಿಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಮೊದಲ ಪಂದ್ಯ ಸೋತ ಬಳಿಕ ಆರ್‌ಸಿಬಿ ತಂಡ ಸತತ 3 ಗೆಲುವು ಸಾಧಿಸಿ ಹೊಸ ಹುರುಪಿನಲ್ಲಿದೆ.

Written by - Puttaraj K Alur | Last Updated : Apr 12, 2022, 05:44 PM IST
  • ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ
  • ‘ಮದಗಜ’ಗಳ ಕದನದಲ್ಲಿ ಗೆಲುವಿನ ಖಾತೆ ತೆರೆಯುತ್ತಾ ರವೀಂದ್ರ ಜಡೇಜಾ ಪಡೆ..?
  • ಹ್ಯಾಟ್ರಿಕ್ ಗೆಲುವು ಸಾಧಿಸಿ ಹೊಸ ಹುರುಪಿನಲ್ಲಿರುವ ಆರ್‌ಸಿಬಿಗೆ ಮತ್ತೊಂದು ಗೆಲುವಿನ ಮೇಲೆ ಕಣ್ಣು
CSK vs RCB, IPL 2022: ಇಂದು ‘ಮದಗಜ’ಗಳ ಕದನ! ಗೆಲುವಿನ ಖಾತೆ ತೆರೆಯುತ್ತಾ ಚೆನ್ನೈ..?   title=
ಗೆಲುವಿನ ಖಾತೆ ತೆರೆಯುತ್ತಾ ಚೆನ್ನೈ?

ಮುಂಬೈ: ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‍ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಸತತ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಸಿಎಸ್‍ಕೆ ಗೆಲುವಿನ ಖಾತೆ ತೆರೆಯಲು ಸಜ್ಜಾಗಿದೆ. ಚೆನ್ನೈ ಮೇಲೆ ಸವಾರಿ ಮಾಡಲು ಆರ್‌ಸಿಬಿ ಸಿದ್ಧವಾಗಿದೆ.

‘ಮದಗಜ’ಗಳ ಇಂದಿನ ಕದನದಲ್ಲಿ ಗೆಲುವು ಯಾರಿಗೆ ಸಿಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಮೊದಲ ಪಂದ್ಯ ಸೋತ ಬಳಿಕ ಆರ್‌ಸಿಬಿ ತಂಡ ಸತತ 3 ಗೆಲುವು ಸಾಧಿಸಿ ಹೊಸ ಹುರುಪಿನಲ್ಲಿದೆ. ಬಲಿಷ್ಠ ತಂಡಗಳಿಗೆ ಮಣ್ಣುಮುಕ್ಕಿಸಿ ಮತ್ತೊಂದು ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಫಾಫ್ ಡು ಪ್ಲೆಸಿಸ್ ಪಡೆ ಬಲಿಷ್ಠವಾಗಿದೆ. ಯಾವುದೇ ಹಂತದಲ್ಲಿ ಪಂದ್ಯದ ಗತಿಯನ್ನು ತನ್ನತ್ತ ಬದಲಾಯಿಸಿಕೊಳ್ಳುವ ಸಾಮರ್ಥ್ಯವನ್ನು ಆರ್‌ಸಿಬಿ ತಂಡ ಹೊಂದಿದೆ.

ಇದನ್ನೂ ಓದಿ: IPL 2022: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ ಈಗ ಐಪಿಎಲ್ ಹೀರೋ!

ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್ ಅತ್ಯುತ್ತಮ ಪ್ರದರ್ಶನದಿಂದಾಗಿ ಆರ್‌ಸಿಬಿ ತಂಡವು ಜೋಶ್‍ನಲ್ಲಿದೆ. ಅದೇ ರೀತಿ ವನಿಂದು ಹಸರಂಗಾ, ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ ಮುಂತಾದವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹೆಚ್ಚು ರನ್ ಬಿಟ್ಟುಕೊಡದೆ ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರೆ ಆರ್‌ಸಿಬಿಗೆ ಗೆಲುವು ಸುಲಭವಾಗಲಿದೆ.

ಇನ್ನು 4 ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿರುವ ಚೆನ್ನೈ ತಂಡ ಪ್ರಸಕ್ತ ಟೂರ್ನಿಯಲ್ಲಿ ಯಾರೂ ನಿರೀಕ್ಷಿಸದ ರೀತಿ ಕಳಪೆ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದರೂ ಚೆನ್ನೈಗೆ ಗೆಲುವಿನ ಖಾತೆ ತೆರೆಯಲು ಸಾಧ‍್ಯವಾಗುತ್ತಿಲ್ಲ. ಆಡಿದ 4 ಪಂದ್ಯಗಳಲ್ಲಿ ಚೆನ್ನೈ ಮುಖಭಂಗ ಅನುಭವಿಸಿರುವುದು ರವೀಂದ್ರ ಜಡೇಜಾ ಬ್ಯಾಡ್‍ಲಕ್ ಅಂತಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಚೆನ್ನೈ ಮೊದಲಿನ ಲಯಕ್ಕೆ ಮರಳಬೇಕಾಗಿದೆ. ಎಂ.ಎಸ್.ಧೋನಿ, ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್ ಮುಂತಾದವರು ಚೆನ್ನೈ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಎದುರು ಯಾರೂ ನಿರೀಕ್ಷಿಸದ ರೀತಿ ಸಿಎಸ್‍ಕೆ ಸೋಲು ಕಂಡಿತು. ಇದರಿಂದ ಚೆನ್ನೈ ಅಭಿಮಾನಿಗಳಿಗೆ ತುಂಬಾ ನೋವಾಗಿದೆ.

ಇದನ್ನೂ ಓದಿ: IPL 2022 : ಪಂದ್ಯ ಸೋತರೂ ವಿಶಿಷ್ಟ ದಾಖಲೆ ಬರೆದ ಹಾರ್ದಿಕ್‌

ತನ್ನ ಹಳೆಯ ತಪ್ಪುಗಳನ್ನು ತಿದ್ದುಕೊಂಡು ಚೆನ್ನೈ ತಂಡ ಕಣಕ್ಕಿಳಿಯಬೇಕಿದೆ. ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಇಂದಿನ ಪಂದ್ಯ ಬಲು ರೋಚಕತೆಯಿಂದ ಕೂಡಿರಲಿದೆ. ಎರಡೂ ತಂಡಗಳಿಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದು, ಇಂದು ರನ್‍ಗಳ ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಇಂದಿನ ಬಿಗ್ ಮ್ಯಾಚ್‍ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಪಕ್ಕಾ ಆಗಿದೆ. ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಚಾಮ್ ವಿ ಮಿಲಿಂದ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (ನಾಯಕ), ಎಂ.ಎಸ್.ಧೋನಿ (ವಿಕೆಟ್ ಕೀಪರ್), ಋತುರಾಜ್ ಗಾಯಕ್‌ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಾಟಿ ರಾಯುಡು, ಶಿವಂ ದುಬೆ, ಡ್ವೇನ್ ಬ್ರಾವೋ, ಡ್ವೈನ್ ಪ್ರಿಟೋರಿಯಸ್, ಮುಖೇಶ್ ಚೌಧರಿ, ತುಷಾರ್ ದೇಶಪಾಂಡೆ, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ವೇ, ಮಿಚೆಲ್ ಸ್ಯಾಂಟ್ನರ್, ಹರಿ ನಿಶಾಂತ್, ಎನ್.ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಕೆ.ಎಂ.ಆಸಿಫ್, ಸಿಮರ್ಜೀತ್ ಸಿಂಗ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಭಗತ್ ವರ್ಮಾ

ಐಪಿಎಲ್‌ ಪಂದ್ಯ: 22

ಚೆನ್ನೈ ಸೂಪರ್ ಕಿಂ‍ಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

ದಿನಾಂಕ: ಏಪ್ರಿಲ್ 12, ಮಂಗಳವಾರ

ಸ್ಥಳ: ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ

ಸಮಯ: ಸಂಜೆ 7.30ಕ್ಕೆ

======================================================================

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News