Virat Kohli-KL Rahul on Suryakumar Yadav: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಕೇವಲ 51 ಬಾಲ್ ಗೆ 112 ರನ್ ಬಾರಿಸಿ ಅತೀ ವೇಗವಾಗಿ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯ ಕುಮಾರ್ ಪಾತ್ರರಾಗಿದ್ದಾರೆ. ಇನ್ನು ಎರಡನೇ ಟಿ20 ಪಂದ್ಯದಲ್ಲೂ ಸೂರ್ಯ ಬಿರುಸಿನ ಅರ್ಧಶತಕ ದಾಖಲಿಸಿದ್ದರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಅವರ ಶತಕ ಬಾರಿಸುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಪೋಸ್ಟ್ ಹಾಕಿ ಶುಭಾಶಯ ತಿಳಿಸಿದ್ದರು.
ಇದನ್ನೂ ಓದಿ: Suryakumar Yadav: ಶತಕದ ಜೊತೆ 3 ವಿಶ್ವದಾಖಲೆ ಬರೆದ ‘ಮಿ.360’: ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟ್ಸ್ ಮನ್ ‘SKY’
ವಿರಾಟ್ ಕೊಹ್ಲಿ ಪ್ರತಿಕ್ರಿಯೆ:
ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಅವರು ಬೆಂಕಿಯ ಎರಡು ಎಮೋಜಿಗಳನ್ನು ಸಹ ಹಂಚಿಕೊಂಡಿದ್ದಾರೆ. ಚಪ್ಪಾಳೆ ತಟ್ಟುವ ಮತ್ತು ಬೆಂಕಿಯ ಇಮೋಜಿಗಳನ್ನು ಹಾಕಿ ಶುಭಾಶಯ ತಿಳಿಸಿದ್ದಾರೆ. ಇನ್ನು ಕೊಹ್ಲಿ ಈಗಾಗಲೇ ಹಲವು ಸಂದರ್ಭಗಳಲ್ಲಿ ಸೂರ್ಯ ಅವರನ್ನು ಹೊಗಳಿದ್ದಾರೆ. ಅವನು ವಿಡಿಯೋ ಗೇಮ್ ನಂತೆ ಬ್ಯಾಟ್ ಮಾಡುತ್ತಾನೆ ಎಂದು ತಮಾಷೆಯ ಮಾತುಗಳನ್ನೂ ಸಹ ಹೇಳಿದ್ದರು.
ಮಾತೃಭಾಷೆಯಲ್ಲಿ ರಾಹುಲ್ ವಿಶಸ್:
ಇನ್ನೊಂದೆಡೆ ಕೆಎಲ್ ರಾಹುಲ್ ಕೂಡ ಶುಭಾಶಯ ತಿಳಿಸಿದ್ದು, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಜೊತೆಗೆ ‘ಬಾರಿ ಎಡ್ಡೆ ಗೊಬ್ಬಿಯಾ’ ಎಂದು ತಮ್ಮ ಮಾತೃಭಾಷೆ ತುಳುವಿನಲ್ಲಿ ಶೀರ್ಷಿಕೆ ನೀಡಿದ್ದಾರೆ. ಇದರ ಅರ್ಥ ‘ತುಂಬಾ ಚೆನ್ನಾಗಿ ಆಡಿದ್ದೀಯ’ ಎಂಬುದಾಗಿದೆ. ಇದೇ ವೇಳೆ ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರನ್ನು ಸಹ ಸ್ಟೋರಿಯಲ್ಲಿ ಟ್ಯಾಗ್ ಮಾಡಿದ್ದಾರೆ. ದೇವಿಶಾ ಶೆಟ್ಟಿ ಮೂಲತಃ ಮಂಗಳೂರಿನವರು.
ಬಿರುಸಿನ ಬ್ಯಾಟಿಂಗ್:
ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕ್ರೀಸ್‌ಗೆ ಕಾಲಿಟ್ಟ ತಕ್ಷಣ ವೇಗದ ಬ್ಯಾಟಿಂಗ್ ಆರಂಭಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್ ಸಹಾಯದಿಂದ ಬರೋಬ್ಬರಿ 112 ರನ್ ಗಳಿಸಿದ್ದಾರೆ. ಇದು ಟಿ20 ಕ್ರಿಕೆಟ್‌ನಲ್ಲಿ ಅವರ ಮೂರನೇ ಶತಕವಾಗಿದೆ. ಭಾರತ ಪರ ಅತಿವೇಗದ ಶತಕ ಬಾರಿಸಿದ ವಿಚಾರದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: Suryakumar Yadav: ಎದ್ದು-ಬಿದ್ದು ಸಿಕ್ಸರ್ ಬಾರಿಸಿದ ಸೂರ್ಯ: ಬಿರುಸಿನ ಆಟದ ಸೀಕ್ರೆಟ್ ರಿವೀಲ್ ಮಾಡಿದ್ರು ಮಿಸ್ಟರ್ 360
ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದ ತಕ್ಷಣ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 1500 ರನ್ ಪೂರೈಸಿದ್ದಾರೆ. ಕೇವಲ 843 ಎಸೆತಗಳಲ್ಲಿ 1500 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದ್ದಕ್ಕಾಗಿ ಅವರಿಗೆ 'ಪಂದ್ಯ ಶ್ರೇಷ್ಠ' ಪ್ರಶಸ್ತಿಯನ್ನು ನೀಡಲಾಯಿತು. ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಭಾರತ ಪರ 45 ಪಂದ್ಯಗಳಲ್ಲಿ 1578 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.