ಸೆಂಟ್ ಮೋರಿಟ್ಜ್ : ಭಾರತ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ನಿಷೇಧಿಸುವ ಸಾಧ್ಯತೆಗಳಿದ್ದರೂ, ಭಾರತದ ನಾಯಕ ವಿರಾಟ್ ಕೊಹ್ಲಿಯೊಂದಿಗೆ ತಮ್ಮ ಸೌಹಾರ್ದ ಸಂಬಂಧ ಹಾಗೇ ಮುಂದುವರಿಯಲಿದ್ದು, ರಾಜಕೀಯ ಪರಿಸ್ಥಿತಿಯಿಂದ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
"ವಿರಾಟ್ ಜೊತೆಗಿನ ನನ್ನ ಸಂಬಂಧವು ರಾಜಕೀಯ ಪರಿಸ್ಥಿತಿಯಿಂದ ಆದೇಶಿಸಲ್ಪಟ್ಟಿಲ್ಲ. ವಿರಾಟ್ ಉತ್ತಮ ವ್ಯಕ್ತಿಯಾಗಿದ್ದು, ನನ್ನಂತೆಯೇ ಅವರೂ ಅವರ ದೇಶದ ಕ್ರಿಕೆಟ್ ರಾಯಭಾರಿಯಾಗಿದ್ದಾರೆ ಎಂದು ಸೇಂಟ್ ಮೊರಿಟ್ಜ್ ಐಸ್ ಕ್ರಿಕೆಟ್ ಟೂರ್ನಮೆಂಟ್ ಸಂದರ್ಭದಲ್ಲಿ ಅಫ್ರಿದಿ ಪಿಟಿಐಗೆ ತಿಳಿಸಿದ್ದಾರೆ.
"ಅವರು (ಕೊಹ್ಲಿ) ಯಾವಾಗಲೂ ಗೌರವವನ್ನು ತೋರಿಸಿದ್ದಾರೆ ಮತ್ತು ನನ್ನ ಸಂಸ್ಥೆ(ಶಾಹಿದ್ ಅಫ್ರಿದಿ ಫೌಂಡೇಷನ್) ಗಾಗಿ ಸಹಿ ಹಾಕಿದ ಜರ್ಸಿಯನ್ನು ನೀಡಿದ್ದಾರೆ" ಎಂದು ಅವರು ಹೇಳಿದರು.
ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವಲ್ಲಿ ಅಫ್ರಿದಿ ಅವರ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.
"ವಿರಾಟ್ ಜೊತೆ ನಾನು ಮಾತನಾಡುವಾಗಲೆಲ್ಲಾ ಮನಸ್ಸಿಗೆ ಖುಷಿ ಭಾವನೆ ಮೂಡುತ್ತದೆ. ಆದರೆ ನಾವು ಸಾಕಷ್ಟು ಸಮಯ ಮಾತನಾಡಲು ಅವಕಾಶ ಸಿಗುತ್ತಿಲ್ಲವಾದರೂ ಆಗಾಗ ಸಂದೇಶಗಳನ್ನು ಹಂಚಿಕೊಳ್ಳುತ್ತೇವೆ. ಅವರು ವಿವಾಹವಾದ ವಿಚಾರ ತಿಳಿದು ಇತ್ತೀಚೆಗೆ ಅವರಿಗೆ ಅಭಿನಂದನೆಯನ್ನೂ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವಲ್ಲಿ ವ್ಯಕ್ತಿಗಳು ಹೀಗೆ ಮುಖ್ಯವಾಗುತ್ತಾರೆ ಎಂಬುದಕ್ಕೆ ಕ್ರಿಕೆಟಿಗರು ಉತ್ತಮ ಉದಾಹರಣೆ ಎಂದು ನಾನು ನಂಬುತ್ತೇನೆ. ಪಾಕಿಸ್ತಾನವನ್ನು ಹೊರತುಪಡಿಸಿ, ನಾನು ಅತಿ ಹೆಚ್ಚು ಪ್ರೀತಿ ಮತ್ತು ಗೌರವ ನೀಡಿದ ಎರಡು ರಾಷ್ಟ್ರಗಳೆಂದರೆ ಅದು ಭಾರತ ಮತ್ತು ಆಸ್ಟ್ರೇಲಿಯಾ ಎಂದು ಅಫ್ರಿದಿ ಹೇಳಿದ್ದಾರೆ.