ಹೈದ್ರಾಬಾದ್ ಪೋಲೀಸರ ಕಾರ್ಯಾಚರಣೆಗೆ ಸೈನಾ ನೆಹ್ವಾಲ್ ಸೆಲ್ಯೂಟ್

ಹೈದ್ರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ: ಟ್ವೀಟ್ ಮೂಲಕ ಪೊಲೀಸರು ನಡೆಸಿದ ಎನ್ಕೌಂಟರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ .

Updated: Dec 6, 2019 , 01:44 PM IST
ಹೈದ್ರಾಬಾದ್ ಪೋಲೀಸರ ಕಾರ್ಯಾಚರಣೆಗೆ ಸೈನಾ ನೆಹ್ವಾಲ್ ಸೆಲ್ಯೂಟ್

ನವದೆಹಲಿ/ ಹೈದ್ರಾಬಾದ್:ಮಹಿಳಾ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಎನ್ಕೌಂಟರ್ ನಡೆಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ನಾಲ್ವರು ಆರೋಪಿಗಳನ್ನು ಹತ್ಯೆಗೈದಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟೋಕ್ತಿ ಮಾಡಿರುವ ಸೈನಾ ನೆಹ್ವಾಲ್ ಪೊಲೀಸರು ನಡೆಸಿರುವ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು, ' ತುಂಬಾ ಒಳ್ಳೆಯ ಕೆಲಸ, ಹೈದ್ರಾಬಾದ್ ಪೊಲೀಸರೆ ನಾವು ನಿಮಗೆ ವಂದಿಸುತ್ತೇವೆ' ಎಂದಿದ್ದಾರೆ.

ಹೈದ್ರಾಬಾದ್ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆಗೆ ದೇಶದ ಬಹುತೇಕ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೈದ್ರಾಬಾದ್ ನಲ್ಲಿಯೇ ನೆಲೆಸಿರುವ ಈ ಖ್ಯಾತ ಬ್ಯಾಡ್ಮಿಂಟನ್ ತಾರೆಯೂ ಕೂಡ ಪೊಲೀಸರ ಕಾರ್ಯಾಚರಣೆಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಕ್ಷೇತ್ರದ ವ್ಯಕ್ತಿಗಳ ಜೊತೆಗೆ ಬಾಲಿವುಡ್ ಸೆಲೆಬ್ರಿಟಿಗಳೂ ಹೈದರಾಬಾದ್ ಪೊಲೀಸರನ್ನು ಹೊಗಳಿದ್ದಾರೆ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳ ಸಾರ್ವಜನಿಕ ಲಿಂಚಿಂಗ್ ಗೆ ಒತ್ತಾಯಿಸಿದ್ದ ನಟಿ ಮತ್ತು ಸಂಸದೆ ಜಯಾ ಬಚ್ಚನ್, 'ತಡವಾಗಿ ಬಂದರೂ, ಸರಿಯಾದದ್ದನ್ನೇ ಮಾಡಿದ್ದೀರಿ' ಎಂದಿದ್ದಾರೆ. ನಟ ರಿಷಿ ಕಪೂರ್, ಅನುಪಮ್ ಖೇರ್ ಅವರುಗಳೂ ಕೂಡ ಎಲ್ಲ ಆರೋಪಿಗಳ ಎನ್ಕೌಂಟರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.