Tokyo Olympics hockey: 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಸಾಧನೆ ಮಾಡಿದ ಭಾರತ

ಬರೋಬ್ಬರಿ 41 ವರ್ಷಗಳ ಬಳಿಕ ಒಲಂಪಿಕ್ಸ್ ನಲ್ಲಿ ಪದಕ ಸಾಧನೆ.

Written by - Zee Kannada News Desk | Last Updated : Aug 5, 2021, 11:21 AM IST
  • ಬಲಿಷ್ಠ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದಲ್ಲಿ ಭಾರತಕ್ಕೆ ಗೆಲುವು
  • 41 ವರ್ಷಗಳ ಬಳಿಕ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತ
  • ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರಿಂದ ಅಭಿನಂದನೆ
Tokyo Olympics hockey: 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಸಾಧನೆ ಮಾಡಿದ ಭಾರತ    title=
ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತ ((Photo Courtesy: ANI)

ನವದೆಹಲಿ: ಭಾರತದ ಪುರುಷರ ಹಾಕಿ ತಂಡ(India Men Hockey Team)ಬರೋಬ್ಬರಿ 4 ದಶಕಗಳ ಬಳಿಕ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಗುರುವಾರ ನಡೆದ ಮಹತ್ವದ ಪಂದ್ಯದಲ್ಲಿ ಭಾರತ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 41 ವರ್ಷಗಳ ಬಳಿಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

3ನೇ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಭಾರತ ತಂಡವು ಬಲಿಷ್ಠ ಜರ್ಮನಿ ತಂಡವನ್ನೇ ಬಗ್ಗುಬಡಿದು ಕಂಚಿನ ಪದಕ(Bronze Medal)ಕ್ಕೆ ಮುತ್ತಿಕ್ಕಿತು. ಈ ಪಂದ್ಯದಲ್ಲಿ ಅಕ್ಷರಶಹ ಗೋಲುಗಳ ಸುರಿಮಳೆಯೇ ಸುರಿಯಿತು. ಉಭಯ ತಂಡಗಳ ನಡುವೆ ಕೊನೆವರೆಗೂ ಭರ್ಜರಿ ಪೈಪೋಟಿ ನಡೆದಿತ್ತು. ಆರಂಭದಲ್ಲಿ 1-3 ಗೋಲುಗಳ ಅಂತರದಿಂದ ಹಿನ್ನೆಡೆ ಅನುಭವಿಸಿದ್ದ ಭಾರತ ತಂಡ ಮತ್ತೆ ಪುಟಿದೆದ್ದು ಉತ್ತಮ ಪ್ರದರ್ಶನ ನೀಡಿತು.

ಇದನ್ನೂ ಓದಿ: Tokyo Olympics 2020 : ಫ್ರೀ ಸ್ಟೈಲ್ ರೆಸ್ ಲಿಂಗ್ ನಲ್ಲಿ ಫೈನಲ್ ಪ್ರವೇಶಿಸಿದ Ravi Kumar Dahiya, ಭಾರತಕ್ಕೆ ಮತ್ತೊಂದು ಪದಕ ಖಚಿತ  

2ನೇ ಕ್ವಾಟರ್ ವರೆಗೂ ಭಾರೀ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಅಂತಿಮವಾಗಿ 5-4 ರಿಂದ ಗೆಲುವನ್ನು ತನ್ನದಾಗಿಸಿಕೊಂಡಿತು. ಜರ್ಮನಿ(Germany)ತಂಡದ ವಿರೋಚಿತ ಪ್ರತಿರೋಧದ ಹೊರತಾಗಿಯೂ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವು ದಾಖಲಿಸಿದರು. ಭಾರತದ ಪರ ಸಿಮ್ರಂಜೀತ್ ಸಿಂಗ್ (17, 34ನೇ ನಿಮಿಷ), ಹಾರ್ದಿಕ್ ಸಿಂಗ್ (27 ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (29 ನೇ ನಿಮಿಷ) ಮತ್ತು ರೂಪಿಂದರ್ ಪಾಲ್ ಸಿಂಗ್ (31 ನೇ ನಿಮಿಷ) ಗೋಲು ಗಳಿಸಿದರು. ಇನ್ನು ಜರ್ಮನಿಯ ಪರ ತೈಮೂರ್ ಒರುಜ್ (2 ನೇ ನಿಮಿಷ), ನಿಕ್ಲಾಸ್ ವೆಲ್ಲೆನ್ (24 ನೇ ನಿಮಿಷ), ಬೆನೆಡಿಕ್ಟ್ ಫರ್ಕ್ (25 ನೇ ನಿಮಿಷ) ಮತ್ತು ಲುಕಾಸ್ ವಿಂಡ್ಫೆಡರ್ (48 ನೇ ನಿಮಿಷ) ಗೋಲು ಗಳಿಸಿದರು.  

ಇನ್ನು ಭಾರತ 1980ರ ಮಾಸ್ಕೊ ಒಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ಜಯಿಸಿತ್ತು. ಆ ಬಳಿಕ ನಡೆದ ಒಲಂಪಿಕ್ಸ್ ಕ್ರೀಡಾಕೂಟ(ದಲ್ಲಿ ಒಂದೂ ಪದಕ ಸಾಧನೆ ಮಾಡಿರಲಿಲ್ಲ. ಇದೀಗ ಬರೋಬ್ಬರಿ 41 ವರ್ಷಗಳ ಬಳಿಕ ಕಂಚು ಗೆಲ್ಲುವ ಮೂಲಕ ಪದಕದ ಬರವನ್ನು ನೀಗಿಸಿದೆ. ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟ(Olympic Games Tokyo 2020)ದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 7-1 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲು ಕಂಡಿತ್ತು. ಆದರೆ ನಂತರದ ಪಂದ್ಯದಲ್ಲಿ ಬಲಿಷ್ಠ ತಂಡಗಳನ್ನೇ ಮಣಿಸಿ ಸೆಮಿಫೈನಲ್ ಪ್ರವೇಶಿಸಿತ್ತು.

ಇದನ್ನೂ ಓದಿ: Tokyo Olympics Boxing: ಭಾರತಕ್ಕೆ 3ನೇ ಪದಕ ತಂದುಕೊಟ್ಟ ಲವ್ಲಿನಾ ಬೊರ್ಗೊಹೈನ್ 

ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಭಾರತ ವಿರೋಚಿತ ಸೋಲು ಕಂಡಿತ್ತು. ಕಂಚಿನ ಪದಕ ಸಾಧನೆ ಮಾಡುವ ಮೂಲಕ ಕೋಟ್ಯಂತರ ಭಾರತೀಯರ ಮೊಗದಲ್ಲಿ ಸಂತಸ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂತೆ ಅನೇಕ ಗಣ್ಯರು ಭಾರತ ಪುರುಷರ ಹಾಕಿ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.       

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News