ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಆಟಗಾರರ ಹಣೆಬರಹವನ್ನು ಬದಲಿಸಿದೆ. ಇದರಲ್ಲಿ ಭಾರತೀಯ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್(Yashasvi Jaiswal) ಕೂಡ ಒಬ್ಬರು. ಕೇವಲ 17ನೇ ವಯಸ್ಸಿನಲ್ಲಿ ದೇಶಿ ಕ್ರಿಕೆಟ್ ಪಂದ್ಯವೊಂದರಲ್ಲಿ ವೇಗದ ದ್ವಿಶತಕ ಭಾರಿಸಿದ ಸಾಧನೆ ಅವರ ಹೆಸರಿನಲ್ಲಿದೆ. ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅವರು ಜಾರ್ಖಂಡ್ ತಂಡದ ವಿರುದ್ಧ ವೇಗದ ದ್ವಿಶತಕ ದಾಖಲಿಸಿದ್ದರು. ಲಿಸ್ಟ್ ಎ ಮತ್ತು ಏಕದಿನದ 50 ಓವರ್ ಗಳ ಪಂದ್ಯದಲ್ಲಿ ಅತೀವೇಗದ ದ್ವಿಶತಕ ಭಾರಿಸಿದ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದರು.
ಸಾಕಷ್ಟು ಪರಿಶ್ರಮದ ನಂತರ ಜೈಸ್ವಾಲ್ ಯಶಸ್ಸಿನ ಶಿಖರವನ್ನು ಏರಿದ್ದಾರೆ. ಇಂದು ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿರುವ ಅವರು ಒಮ್ಮೆ ಹೊಟ್ಟೆ ತುಂಬಿಸಿಕೊಳ್ಳಲು ಮುಂಬೈನಲ್ಲಿ ಪಾನಿಪೂರಿ ಮಾರುತ್ತಿದ್ದರು(Selling Pani Puri). ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೈಸ್ವಾಲ್ ಪ್ರತಿ ಸೀಸನ್ ಗೆ 2.4 ಕೋಟಿ ರೂ. ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ ಪಂಪ್ ನಡೆಸುತ್ತಿದ್ದ ತಾಯಿ, 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಮಗಳು..!
ಹೊಟ್ಟೆಪಾಡಿಗಾಗಿ ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್
ಯಶಸ್ವಿ ಜೈಸ್ವಾಲ್ ಹೆಸರು 2020ರ ಅಂಡರ್ 19 ವಿಶ್ವಕಪ್(U19 Cricket World Cup) ವೇಳೆ ಹೆಚ್ಚು ಚರ್ಚೆಯಾಗಿತ್ತು. ಜೈಸ್ವಾಲ್ ಯಶಸ್ಸಿನ ಹಿಂದಿನ ಕಥೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ಅವರು ತಮ್ಮ ಹೊಟ್ಟೆಪಾಡಿಗಾಗಿ ಮುಂಬೈನ ಆಜಾದ್ ಮೈದಾನದ ಹೊರಗೆ ಪಾನಿಪೂರಿ ಮಾರುತ್ತಿದ್ದರು. ತಮ್ಮ ತರಬೇತಿಯ ಸಮಯದಲ್ಲಿ ಟೆಂಟ್‌ನಲ್ಲಿ ಜೀವನ ಸಾಗಿಸಿದ್ದರು. ಕ್ರಿಕೆಟ್ ನಲ್ಲಿ ಯಶಸ್ಸು ಸಾಧಿಸಬೇಕೆಂಬ ಹುಚ್ಚು ಕನಸಿನಿಂದ ಅವರು ಬಂದ ಎಲ್ಲ ಕಷ್ಟಗಳನ್ನು ದಿಟ್ಟವಾಗಿ ಎದುರಿಸಿದ್ದರು. ಯಶಸ್ವಿ ಜೈಸ್ವಾಲ್ 2020ರ ಅಂಡರ್ -19 ವಿಶ್ವಕಪ್‌ನಲ್ಲಿ 400 ರನ್ ಗಳಿಸಿದ್ದರು. ಇದರಲ್ಲಿ 1 ಭರ್ಜರಿ ಶತಕ ಮತ್ತು 4 ಅರ್ಧ ಶತಕಗಳು ಸೇರಿದ್ದವು.
ಇದನ್ನೂ ಓದಿ: Senior Citizensಗೆ ಮೋದಿ ಸರ್ಕಾರದ ಉಡುಗೊರೆ! ಮತ್ತೆ Job ಮಾಡ್ಬಹುದು
ಐಪಿಎಲ್ ಟೂರ್ನಿಯಿಂದ ಖುಲಾಯಿಸಿದ ಅದೃಷ್ಟ
2020ರ ಅಂಡರ್ -19 ವಿಶ್ವಕಪ್(U19 Cricket World Cup)ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ 400 ರನ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅದ್ಭುತ ಆಟದ ಮೂಲಕ ಗಮನ ಸೆಳೆದಿದ್ದ ಜೈಸ್ವಾಲ್ ಗೆ ಐಪಿಎಲ್ ಟೂರ್ನಿಯಿಂದ ಅದೃಷ್ಟ ಖುಲಾಯಿಸಿತ್ತು. 2020ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಜೈಸ್ವಾಲ್ ಅವರನ್ನು 2.4 ಕೋಟಿ ರೂ. ದೊಡ್ಡ ಮೊತ್ತಕ್ಕೆ ಖರೀದಿಸಿತು. ವಿಜಯ ಹಜಾರೆ ಟ್ರೋಫಿ(Vijay Hazare Trophy)ಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 154 ಎಸೆತಗಳಲ್ಲಿ 203 ರನ್ ಭಾರಿಸಿ ಧೂಳೆಬ್ಬಿಸಿದ ಯುವ ಆಟಗಾರನ ಹೆಸರು ಜನಪ್ರಿಯವಾಗಿತ್ತು. ಅವರ ಅಮೋಘ ಪ್ರದರ್ಶನಕ್ಕೆ ಹಿರಿಯ ಆಟಗಾರರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಮೂಲತಃ ಉತ್ತರ ಪ್ರದೇಶದ ಭಡೋಹಿ ನಿವಾಸಿ ಜೈಸ್ವಾಲ್ ತನ್ನ ಬಾಲ್ಯವನ್ನು ಅತ್ಯಂತ ಕಡುಬಡತನದಲ್ಲಿ ಕಳೆದಿದ್ದರು. ತಮ್ಮ 11ನೇ ವಯಸ್ಸಿನಲ್ಲಿಯೇ ಕ್ರಿಕೆಟಿಗನಾಗುವ ಕನಸಿನೊಂದಿಗೆ ಜೈಸ್ವಾಲ್ ವಾಣಿಜ್ಯ ನಗರಿ ಮುಂಬೈಗೆ ಬಂದಿದ್ದರು. ನಂತರ ಅನೇಕ ಕಷ್ಟಗಳನ್ನು ಎದುರಿಸಿ ಇಂದು ಯಶಸ್ವಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.