ಟೋಕಿಯೊ: ಉತ್ತರ ಕೊರಿಯಾವು ಒಂದು ತಿಂಗಳೊಳಗೆ ಎರಡನೇ ಬಾರಿ ಬಾಲಿಸ್ಟಿಕ್ ಕ್ಷಿಪಣಿಯನ್ನು ಜಪಾನ್ ಮೇಲೆ ಉಡಾಯಿಸಿ ತನ್ನ ಅಟ್ಟಹಾಸ ಪ್ರದರ್ಶಿಸಿದೆ. ಜಪಾನ್ನ ಉತ್ತರದ ಹೊಕ್ಕೈಡೋವದಿಂದ ಪೆಸಿಫಿಕ್ ಮಹಾಸಾಗರದವರೆಗೆ ಉತ್ತರ ಕೊರಿಯಾ ಕ್ಷಿಪಣಿ ಹಾರಿಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನಿನ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊರಿಯಾದ ಪ್ಯೊಂಗ್ಯನ್ಗ್ನಲ್ಲಿ ಸುನಾನ್ ಜಿಲ್ಲೆಯಿಂದ ಹಾರಿಸಿರುವ ಕ್ಷಿಪಣಿಯು ಪೂರ್ವ ಹಾಕ್ಕೈಡೋವನ್ನು ದಾಟಿ ಫೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಎಂದು ಜಪಾನ್ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಯೊಶಿಹೈಡ್ ಸುಗಾ ಅವರು ತುರ್ತಾಗಿ ಸಂಘಟಿತ ಮಾಧ್ಯಮ ಸಮ್ಮೇಳನದಲ್ಲಿ ವರದಿಗಾರರಿಗೆ ತಿಳಿಸಿದರು.
ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆಗೆ ಕರೆ ನೀಡಿದೆ.
ಸೆ.3 ರಂದು ಸಹ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿತ್ತು, ಇದಾದ ನಂತರ ವಿಶ್ವ ಸಂಸ್ಥೆಯು ಉ.ಕೊರಿಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಈ ಬಗ್ಗೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ "ಜಪಾನ್ ದೇಶವನ್ನು ಮುಳುಗಿಸಿ, ಅಮೆರಿಕಾವನ್ನು ಬೂದಿ ಮಾಡುವುದಾಗಿ" ಹೇಳಿಕೆ ನೀಡಿದ್ದರು. ಇದೀಗ ಇಂದಿನ ಬೆಳವಣಿಗೆ ಜಪಾನ್, ಅಮೇರಿಕಾ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ತಲೆಬಿಸಿಯಾಗಿ ಪರಿಣಮಿಸಿದೆ.