ನವದೆಹಲಿ: ಸದ್ಯ ಇಡೀ ಜಗತ್ತು ಕೊರೊನಾವೈರಸ್ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಅಷ್ಟೇ ಅಲ್ಲ ವಿಶ್ವದಲ್ಲಿ ಎಲ್ಲೆನ್ದರಲ್ಲೇ ಕೊರೊನಾ ವೈರಸ್ ನದ್ದೇ ಚರ್ಚೆ ನಡೆಯುತ್ತಿದೆ. ಭಾರತದಲ್ಲಿಯೂ ಕೂಡ ದಿನದಿಂದ ದಿನಕ್ಕೆ ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿ ಇದುವರೆಗೆ ಒಂಬತ್ತು ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ನ ಪ್ರಕರಣಗಳು ವರದಿಯಾಗಿದ್ದು, ಮುನ್ನೂರಕ್ಕೂ ಹೆಚ್ಚು ನತದೃಷ್ಟರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ.
ಬಿಕ್ಕಟ್ಟಿನ ಈ ಸಮಯದಲ್ಲಿ, ಎಲ್ಲಾ ವರ್ಗದ ಜನರು ಸಹಾಯಕ್ಕಾಗಿ ಕೈ ನೀಡುತ್ತಿದ್ದಾರೆ. ಬಾಲಿವುಡ್ ಸೆಲಿಬ್ರಿಟಿಗಳಾಗಲಿ ಅಥವಾ ಉದ್ಯಮಿ ಅಥವಾ ರಾಜಕೀಯ ಮುಖಂಡರಾಗಲಿ, ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ. ಇದೀಗ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಸಹಾಯ ಮಾಡಲು ಪ್ರಪಂಚದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ ಗೂಗಲ್ ನ ಮುಖ್ಯಸ್ಥ ಸುಂದರ್ ಪಿಚೈ ಮುಂದಾಗಿದ್ದಾರೆ.
ಕೊರೊನಾ ವೈರಸ್ ಪ್ರಕೊಪದಿಂದ ಪಾರಾಗಲು ಸದ್ಯ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಇದು ಸಣ್ಣ ಕಾರ್ಮಿಕರ ಹಾಗೂ ದಿನಗೂಲಿ ನೌಕರರ ಜೀವನೋಪಾಯಕ್ಕೆ ಭಾರಿ ಪೆಟ್ಟು ನೀಡಿದೆ. ಈ ಬಾರಿ ದಿನಗೂಲಿ ಕಾರ್ಮಿಕರ ಸಹಾಯಕ್ಕೆ ಮುಂದಾಗಿರುವ ಗೂಗಲ್ ಮುಖ್ಯಷ್ಟ ಸುಂದರ್ ಪಿಚೈ, ಕೊಡುಗೆಯನ್ನು ನೀಡಿದ್ದಾರೆ. ಹೌದು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸುಂದರ್ ಪಿಚೈ 'ಗಿವ್ ಇಂಡಿಯಾ' ಅಭಿಯಾನಕ್ಕೆ ಐದು ಕೋಟಿ ರೂ. ಕೊಡುಗೆಯನ್ನು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ 'ಗಿವ್ ಇಂಡಿಯಾ' "ದಿನಗೂಲಿ ಕಾರ್ಮಿಕರ ಕುಟುಂಬಗಳಿಗೆ ಅಗತ್ಯವಾದ ನಗದು ಸಹಾಯವನ್ನು ಒದಗಿಸಲು ಗೂಡಲ್ ನಿಂದ ಐದು ಕೋಟಿ ರೂ. ಕೊಡುಗೆ ನೀಡಿದ ಸುಂದರ್ ಪಿಚೈ ಅವರಿಗೆ ಧನ್ಯವಾದಗಳು" ಎಂದು ಹೇಳಿದೆ.
ಇದಕ್ಕೂ ಮೊದಲು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಲು ಗೂಗಲ್ 80 ಕೋಟಿ ಡಾಲರ್ ಗೂ ಅಧಿಕ ಹಣಕಾಸಿನ ನೆರವನ್ನು ಘೋಷಿಸಿತ್ತು. ಇದರಲ್ಲಿ NGO ಹಾಗೂ ಬ್ಯಾಂಕ್ ಗಳಿಗೆ 20 ಕೋಟಿ ಡಾಲರ್ ಹೂಡಿಕೆಯ ನಿಧಿ ಶಾಮೀಲಾಗಿದ್ದು, ಇದರಿಂದ ಸಣ್ಣ ಉದ್ಯಮಿದಾರರಿಗೆ ಬಂಡವಾಳ ಶೇಖರಿಸಲು ಸಹಾಯವಾಗಲಿದೆ.